
ನವದೆಹಲಿ(ಸೆ.05): ನ್ಯೂಜಿಲೆಂಡ್ ‘ಎ’ ವಿರುದ್ಧ ಬಾಕಿ ಇರುವ 2 ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಭಾರತ ‘ಎ’ ತಂಡಕ್ಕೆ ಶಾರ್ದೂಲ್ ಠಾಕೂರ್ ಠಾಕೂರ್ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಬೆನ್ನು ನೋವಿನ ಸಮಸ್ಯೆಯಿಂದಾಗಿ ಹೊರಬಿದ್ದ ಕಾರಣ ಅವರ ಬದಲು ಶಾರ್ದೂಲ್‌ರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯಕ್ಕೂ ಮುನ್ನ 26 ವರ್ಷದ ಪ್ರಸಿದ್ಧ್ ಕೃಷ್ಣ ಗಾಯಗೊಂಡು ಪಂದ್ಯಕ್ಕೆ ಅಲಭ್ಯರಾಗಿದ್ದರು.
''ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ನ್ಯೂಜಿಲೆಂಡ್ 'ಎ' ವಿರುದ್ದದ ಇನ್ನುಳಿದ ಪಂದ್ಯಗಳಿಗೆ ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ'' ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಜಿಲೆಂಡ್ 'ಎ' ವಿರುದ್ದದ ಪಂದ್ಯಕ್ಕೂ ಮುನ್ನ ಪ್ರಸಿದ್ದ್ ಕೃಷ್ಣ ಭಾರತ 'ಎ' ತಂಡಕ್ಕೆ ಅಲಭ್ಯವಾಗಿದ್ದರಿಂದ, ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್, ಮುಕೇಶ್ ಕುಮಾರ್, ಯಶ್ ದಯಾಲ್ ಹಾಗೂ ಅರ್ಜುನ್ ನಾಗವಾಸವಲ್ಲಾ ಅವರನ್ನು ವೇಗದ ಬೌಲರ್‌ಗಳ ರೂಪದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದ್ದರು. ಇನ್ನು ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್, ಭಾರತ 'ಎ' ಆಡುವ ಹನ್ನೊಂದರ ಬಳಗದಲ್ಲಿ ಸ್ಪಿನ್ನರ್ ರೂಪದಲ್ಲಿ ಸ್ಥಾನ ಪಡೆದಿದ್ದರು.
ಅದು 'S' ನಿಂದ ಆರಂಭವಾಗುವ ನಾಲ್ಕಕ್ಷರದ ಪದ, ನಾನಿಲ್ಲಿ ಹೇಳಲು ಸಾಧ್ಯವಿಲ್ಲ: ದ್ರಾವಿಡ್ ಹೀಗಂದಿದ್ದೇಕೆ..?
ನ್ಯೂಜಿಲೆಂಡ್ 'ಎ' ವಿರುದ್ದದ ಎರಡನೇ ಅನಧಿಕೃತ ಟೆಸ್ಟ್‌ಗೆ ಭಾರತ ತಂಡ ಹೀಗಿದೆ ನೋಡಿ
ಪ್ರಿಯಾಂಕ್ ಪಾಂಚಾಲ್(ನಾಯಕ), ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಎನ್ ಟಿ ತಿಲಕ್ ವರ್ಮಾ, ಕೆ ಎಸ್ ಭರತ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹಾರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಯಶ್ ದಯಾಲ್, ಅರ್ಜುನ್ ನಾಗವಾಸವಲ್ಲಾ.
ಭಾರತ ‘ಎ’-ಕಿವೀಸ್ ‘ಎ’ ಅನಧಿಕೃತ ಟೆಸ್ಟ್ ಡ್ರಾ
ಬೆಂಗಳೂರು: ಭಾರತ ‘ಎ’ ಹಾಗೂ ನ್ಯೂಜಿಲೆಂಡ್ ‘ಎ’ ನಡುವಿನ ಮೊದಲ ಅನಧಿಕೃತ 4 ದಿನಗಳ ಟೆಸ್ಟ್ ಡ್ರಾಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್ ಗಳಿಸಿದ್ದ ನ್ಯೂಜಿಲೆಂಡ್ ‘ಎ’ ತಂಡ ಪಂದ್ಯದ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸಲ್ಲಿ 4 ವಿಕೆಟ್‌ಗೆ 133 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಭಾರತ ‘ಎ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 571 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅಭಿಮನ್ಯು ಈಶ್ವರನ್(132), ರಜತ್ ಪಾಟೀದಾರ್(176), ತಿಲಕ್ ವರ್ಮಾ(121) ಶತಕ ಬಾರಿಸಿ ಮಿಂಚಿದರು. 3 ಪಂದ್ಯಗಳ ಸರಣಿಯ 2ನೇ ಪಂದ್ಯ ಸೆಪ್ಟೆಂಬರ್ 8 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಅಕ್ಟೋಬರ್ 1ರಿಂದ 5ರ ವರೆಗೂ ಇರಾನಿ ಟ್ರೋಫಿ ಕ್ರಿಕೆಟ್
ನವದೆಹಲಿ: 2020ರ ರಣಜಿ ಚಾಂಪಿಯನ್ ಸೌರಾಷ್ಟ್ರ ಅ.1ರಿಂದ 5ರ ವರೆಗೂ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಇರಾನಿ ಟ್ರೋಫಿ ಪಂದ್ಯದಲ್ಲಿ ಆಡಲಿದೆ. ರಾಜ್‌ಕೋಟ್‌ನ ಎಸ್‌ಸಿಎ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2020ರಲ್ಲಿ ಬಂಗಾಳ ವಿರುದ್ಧ ಫೈನಲ್‌ನಲ್ಲಿ ಗೆದ್ದು ಸೌರಾಷ್ಟ್ರ ಚಾಂಪಿಯನ್ ಆಗಿತ್ತು. ಆದರೆ ಕೋವಿಡ್‌ನಿಂದಾಗಿ ಇರಾನಿ ಟ್ರೋಫಿ ನಡೆಸಿರಲಿಲ್ಲ. ಹೀಗಾಗಿ ಈ ವರ್ಷ ಆಡಲು ಅವಕಾಶ ನೀಡುವಂತೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸಲ್ಲಿಸಿದ್ದ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದೆ. ಕಳೆದ ಆವೃತ್ತಿಯ ಚಾಂಪಿಯನ್ ಮಧ್ಯಪ್ರದೇಶ ಮುಂದಿನ ವರ್ಷ ಇರಾನಿ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.