ಕೇವಲ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಪಡಿಸಿದ್ದಕ್ಕೆ ಸೂಪರ್-4ನಲ್ಲಿರುವ ಮತ್ತೆರಡು ತಂಡಗಳಾದ ಬಾಂಗ್ಲಾದೇಶ, ಶ್ರೀಲಂಕಾ ವಿರೋಧ ವ್ಯಕ್ತಪಡಿಸಿವೆ ಎಂದು ದೃಢೀಕರಿಸಲಾಗದ ಸುದ್ದಿಗಳು ಹರಿದಾಡುತ್ತಿವೆ. ತಮಗೆ ಮೀಸಲು ದಿನದ ಅವಕಾಶ ನೀಡದ್ದಕ್ಕೆ ಎಸಿಸಿ ವಿರುದ್ಧ ಅಸಮಾಧಾನಗೊಂಡಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕೊಲಂಬೊ: ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯಕ್ಕೆ ಮಳೆರಾಯ ಮತ್ತೆ ಅವಕೃಪೆ ತೋರುವ ಲಕ್ಷಣಗಳು ಕಂಡುಬರುತ್ತಿರುವ ನಡುವೆಯೇ, ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಉಭಯ ದೇಶಗಳ ಕ್ರೀಡಾಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಬದ್ಧವೈರಿಗಳ ನಡುವೆ ಸೆ.10ಕ್ಕೆ ಕೊಲಂಬೊದಲ್ಲಿ ನಡೆಯಬೇಕಿರುವ ಸೂಪರ್-4 ಹಂತದ ಹೈವೋಲ್ಟೇಜ್ ಸೆಣಸಾಟಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ.
ಕೊಲಂಬೊದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಕೂಡಾ ಮಳೆ ಮುನ್ಸೂಚನೆ ಇದೆ. ಈಗಾಗಲೇ ಉಭಯ ತಂಡಗಳ ನಡುವಿನ ಗುಂಪು ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, 2ನೇ ಪಂದ್ಯವೂ ಮಳೆಗಾಹುತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಭೀತಿಯಿಂದಾಗಿ ಸೋಮವಾರ(ಸೆ.11)ವನ್ನು ಮೀಸಲು ದಿನವನ್ನಾಗಿ ಎಸಿಸಿ ಘೋಷಿಸಿದೆ.
ಸೆ.10ರಂದು ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಪಂದ್ಯ ಯಾವ ಹಂತದಲ್ಲಿ ಸ್ಥಗಿತಗೊಂಡಿರುತ್ತದೆಯೋ ಸೆ.11ರಂದು ಅಲ್ಲಿಂದಲೇ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದೆ. ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನವಿದ್ದು, ಇತರ ಯಾವುದೇ ಸೂಪರ್-4 ಹಂತದ ಪಂದ್ಯಕ್ಕೆ ಮೀಸಲು ದಿನವನ್ನು ಎಸಿಸಿ ಘೋಷಿಸಿಲ್ಲ. ಪಂದ್ಯ ಮೀಸಲು ದಿನಕ್ಕೆ ಹೋದರೆ ಆಗ ಸೆ.10ರ ಟಿಕೆಟ್ ಬಳಸಿ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸಲಾಗಿದೆ.
Asia Cup 2023: ವಿರಾಟ್ ಕೊಹ್ಲಿ ಹಿಂದಿಕ್ಕಿ ನಾಯಕನಾಗಿ ವಿಶ್ವದಾಖಲೆ ಬರೆದ ಬಾಬರ್ ಅಜಂ..!
ಮೀಸಲು ದಿನ ಏಕೆ?
1. ಭಾರತ-ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಈಗ ಮತ್ತೊಂದು ಪಂದ್ಯ ಮಳೆಗಾಹುತಿಯಾದರೆ ಆಯೋಜಕರು ಮುಜುಗರಕ್ಕೀಡಾಗಲಿದ್ದಾರೆ.
2. ಪಂದ್ಯ ರದ್ದಾದರೆ ಪಂದ್ಯ ಪ್ರಸಾರಕರಿಗೆ ಭಾರೀ ನಷ್ಟ ಉಂಟಾಗಲಿದೆ. ಆಗ ಪ್ರಸಾರಕರು, ಟೂರ್ನಿಯ ಆತಿಥ್ಯ ಹಕ್ಕು ಹೊಂದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಪ್ರಸಾರ ಮೊತ್ತದಲ್ಲಿ ರಿಯಾಯಿತಿ ಕೇಳಬಹುದು. ಈಗಾಗಲೇ ನಷ್ಟ ಎದುರಿಸುತ್ತಿರುವ ಪಿಸಿಬಿ ಇನ್ನಷ್ಟು ಹಣ ಕಳೆದುಕೊಳ್ಳುವ ಸ್ಥಿತಿಯಲಿಲ್ಲ.
3. ಪಾಕಿಸ್ತಾನಕ್ಕೆ ಭಾರತ ತಂಡ ಹೋಗುವುದಿಲ್ಲ ಎನ್ನುವ ಕಾರಣಕ್ಕೆ ಪಂದ್ಯಗಳನ್ನು ಲಂಕಾಕ್ಕೆ ಸ್ಥಳಾಂತರಿಸಲಾಯಿತು. ಆದರೆ ಮಳೆಗಾಲದಲ್ಲಿ ಲಂಕಾದಲ್ಲಿ ಟೂರ್ನಿ ಆಯೋಜಿಸುತ್ತಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಜೊತೆಗೆ ಪಿಸಿಬಿ ಕೂಡ ಎಸಿಸಿ ಜೊತೆ ಜಗಳಕ್ಕೆ ಬಿದ್ದಿದ್ದು, ನಷ್ಟ ಭರಿಸುವಂತೆ ಕೇಳುತ್ತಿದೆ. ನಷ್ಟ ಕಟ್ಟಿಕೊಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿರುವ ಎಸಿಸಿ, ಟೂರ್ನಿಯ ಬಹುನಿರೀಕ್ಷಿತ ಹಾಗೂ ಹೆಚ್ಚು ಆದಾಯ ತಂದುಕೊಡುವ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಪಡಿಸಿದೆ.
4. ಭಾರತ ಹಾಗೂ ಪಾಕ್ ನಡುವಿನ ಪಂದ್ಯಕ್ಕಾಗಿ ವಿಶ್ವದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಾರೆ. ಹೀಗಾಗಿ ಪೂರ್ಣ ಪಂದ್ಯ ನಡೆಯುವಂತೆ ನೋಡಿಕೊಳ್ಳಬೇಕಾದ ಹೊಣೆ ಆಯೋಜಕರ ಮೇಲಿದೆ.
ಬಾಂಗ್ಲಾ, ಲಂಕಾದಿಂದ ವಿರೋಧ?
ಕೇವಲ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಪಡಿಸಿದ್ದಕ್ಕೆ ಸೂಪರ್-4ನಲ್ಲಿರುವ ಮತ್ತೆರಡು ತಂಡಗಳಾದ ಬಾಂಗ್ಲಾದೇಶ, ಶ್ರೀಲಂಕಾ ವಿರೋಧ ವ್ಯಕ್ತಪಡಿಸಿವೆ ಎಂದು ದೃಢೀಕರಿಸಲಾಗದ ಸುದ್ದಿಗಳು ಹರಿದಾಡುತ್ತಿವೆ. ತಮಗೆ ಮೀಸಲು ದಿನದ ಅವಕಾಶ ನೀಡದ್ದಕ್ಕೆ ಎಸಿಸಿ ವಿರುದ್ಧ ಅಸಮಾಧಾನಗೊಂಡಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಧೋನಿ, ಕೊಹ್ಲಿ, ಸಚಿನ್ ಲೆಕ್ಕಕ್ಕಿಲ್ಲ, ಈ ಭಾರತೀಯ ಕ್ರಿಕೆಟಿಗನ ಬಳಿ ಇದೆ ₹22 ಸಾವಿರ ಕೋಟಿ ಮೌಲ್ಯದ ಚಿನ್ನಾಭರಣ!
ಫೈನಲ್‌ಗೂ ಮೀಸಲು ದಿನ
ಏಷ್ಯಾಕಪ್‌ನ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳೇ ಎದುರಾಗುವ ಸಾಧ್ಯತೆಯೂ ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಆ ಪಂದ್ಯಕ್ಕೂ ಎಸಿಸಿ ಮೀಸಲು ದಿನವನ್ನು ಘೋಷಿಸಿದೆ. ಸೆ.17ರಂದು ಫೈನಲ್ ನಿಗದಿಯಾಗಿದ್ದು, ಸೆ.18ಕ್ಕೆ ಮೀಸಲು ದಿನ ಇರಲಿದೆ.