Ind vs NZ Series: ಟೀಂ ಇಂಡಿಯಾಗೆ ಟಿ20 ಸರಣಿ ಕ್ಲೀನ್‌ ಸ್ವೀಪ್‌ ಗುರಿ..!

By Kannadaprabha NewsFirst Published Nov 21, 2021, 12:50 PM IST
Highlights

* ಕೋಲ್ಕತದ ಈಡನ್‌ಗಾರ್ಡನ್‌ ಮೈದಾನದಲ್ಲಿಂದು ಭಾರತ-ನ್ಯೂಜಿಲೆಂಡ್‌ ಮುಖಾಮುಖಿ

* ಟಿ20 ಸರಣಿಯಲ್ಲಿ ಈಗಾಗಲೇ 2 ಪಂದ್ಯವನ್ನು ಗೆದ್ದಿರುವ ರೋಹಿತ್ ಪಡೆ

* ಕಿವೀಸ್‌ ಎದುರು ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ

ಕೋಲ್ಕತ(ನ.21): ವಿಶ್ವಕಪ್‌ ರನ್ನರ್‌-ಅಪ್‌ ನ್ಯೂಜಿಲೆಂಡ್‌ (New Zealand Cricket Team) ವಿರುದ್ಧ ಟಿ20 ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿಯೊಂದಿಗೆ ಇಲ್ಲಿ ಭಾನುವಾರ ನಡೆಯಲಿರುವ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಕಣಕ್ಕಿಳಿಯಲಿದೆ. ನಾಯಕ ರೋಹಿತ್‌ ಶರ್ಮಾ (Rohit Sharma) ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದ ಆಟಗಾರರಿಗೆ ಈ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ.

ಟೆಸ್ಟ್‌ ಸರಣಿಯನ್ನೂ ಆಡಲಿರುವ ಕೆ.ಎಲ್‌.ರಾಹುಲ್‌ಗೆ (KL Rahul) ವಿಶ್ರಾಂತಿ ನೀಡಿ ಋುತುರಾಜ್‌ ಗಾಯಕ್ವಾಡ್‌ಗೆ (Ruturaj Gaikwad) ಸ್ಥಾನ ನೀಡಬಹುದು. ಇನ್ನು ರಿಷಭ್‌ ಪಂತ್‌ (Rishabh Pant) ಜಾಗದಲ್ಲಿ ಇಶಾನ್‌ ಕಿಶನ್‌ (Ishan Kishan), ಭುವನೇಶ್ವರ್‌ ಕುಮಾರ್‌ (Bhuvneshwar Kumar) ಇಲ್ಲವೇ ದೀಪಕ್‌ ಚಹರ್‌ ಬದಲಿಗೆ ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌ (Axar Patel) ಬದಲಿಗೆ ಯಜುವೇಂದ್ರ ಚಹಲ್‌ಗೆ (Yuzvendra Chahal) ಸ್ಥಾನ ಸಿಗುವ ನಿರೀಕ್ಷೆ ಇದೆ.

ರೋಹಿತ್‌ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ಬಳಿಕ ತಂಡವನ್ನು 2022ರ ಟಿ20 ವಿಶ್ವಕಪ್‌ಗೆ (T20 World Cup) ಸಿದ್ಧಗೊಳಿಸುವತ್ತ ಗಮನ ಹರಿಸಿದ್ದಾರೆ. ವೆಂಕಟೇಶ್‌ ಅಯ್ಯರ್‌, ಹರ್ಷಲ್‌ ಪಟೇಲ್‌ರನ್ನು ಪ್ರಮುಖ ಅಸ್ತ್ರಗಳಾಗಿ ಬಳಸಿಕೊಳ್ಳಲು ತಂಡ ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ ವೆಂಕಿ ಅಯ್ಯರ್‌ಗೆ ಬೌಲ್‌ ಮಾಡುವ ಅವಕಾಶ ಸಿಗುವ ಸಾಧ್ಯತೆ ಇದೆ.

AB de Villiers Retires: ನಾನು ಎಂದೆಂದಿಗೂ ಆರ್‌ಸಿಬಿಗ: ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್‌

ಆರ್‌.ಅಶ್ವಿನ್‌ (Ravichandran Ashwin) ಟಿ20 ತಂಡಕ್ಕೆ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ. ಮುಂಬರುವ ಸರಣಿಗಳಲ್ಲಿ ರೋಹಿತ್‌ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಮತ್ತಷ್ಟು ಹೊಸ ಪ್ರಯೋಗಗಳನ್ನು ನಡೆಸುವ ನಿರೀಕ್ಷೆ ಇದೆ. ಇನ್ನು ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಮತ್ತಷ್ಟು ಬಲ ತುಂಬಬೇಕಿದೆ.

ಒತ್ತಡದಲ್ಲಿ ಕಿವೀಸ್‌: ಟಿ20 ವಿಶ್ವಕಪ್‌ ಫೈನಲ್‌ನ ಆಡಿದ ಮರು ದಿನವೇ ಭಾರತಕ್ಕೆ ಆಗಮಿಸಿ ಟಿ20 ಸರಣಿಯಲ್ಲಿ ಪಾಲ್ಗೊಂಡ ನ್ಯೂಜಿಲೆಂಡ್‌ ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಅನುಪಸ್ಥಿತಿಯಲ್ಲಿ ಕಿವೀಸ್‌ ಬ್ಯಾಟಿಂಗ್‌ ಪಡೆ ದುರ್ಬಲವಾದಂತೆ ತೋರುತ್ತಿದೆ. ಟೆಸ್ಟ್‌ ಸರಣಿಗೂ ಮುನ್ನ ನ್ಯೂಜಿಲೆಂಡ್‌ ಒಂದು ಗೆಲುವು ಸಾಧಿಸಿ ಆತ್ಮವಿಶ್ವಾಸ ಮರಳಿ ಪಡೆಯಲು ಎದುರು ನೋಡುತ್ತಿದೆ.

ಪಿಚ್‌ ರಿಪೋರ್ಟ್‌: ಸಂಜೆ ವೇಳೆ ಇಬ್ಬನಿ ಬೀಳುವ ಕಾರಣ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ. ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಸಾಧ್ಯತಿ ಇದೆ. ರನ್‌ ಚೇಸ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌/ಋುತುರಾಜ್‌ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್‌, ರಿಷಭ್ ಪಂತ್‌/ಇಶಾನ್ ಕಿಶನ್‌, ವೆಂಕಟೇಶ್‌ ಅಯ್ಯರ್, ರವಿಚಂದ್ರನ್ ಅಶ್ವಿನ್‌, ಅಕ್ಷರ್ ಪಟೇಲ್‌/ಯುಜುವೇಂದ್ರ ಚಹಲ್‌, ಹರ್ಷಲ್ ಪಟೇಲ್‌, ಭುವನೇಶ್ವರ್ ಕುಮಾರ್‌/ಆವೇಶ್‌ ಖಾನ್, ದೀಪಕ್ ಚಹಾರ್‌. 

ನ್ಯೂಜಿಲೆಂಡ್‌: ಮಾರ್ಟಿನ್ ಗಪ್ಟಿಲ್‌, ಡೇರಲ್‌ ಮಿಚೆಲ್‌, ಚ್ಯಾಪ್ಮನ್‌, ಗ್ಲೆನ್‌ ಫಿಲಿಫ್ಸ್‌, ಟಿಮ್‌ ಸೀಫರ್ಟ್‌, ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ(ನಾಯಕ), ಟಾಡ್‌ ಆ್ಯಸ್ಟಲ್‌, ಆಡಂ ಮಿಲ್ನೆ, ಟ್ರೆಂಟ್‌ ಬೌಲ್ಟ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!