ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಆಯೋಜನೆಗೆ ಗಂಗೂಲಿ ಒಲವು! ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿದ ಬಿಸಿಸಿಐ! ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭ!
ನವದೆಹಲಿ(ಅ.29): ಭಾರತ ಕ್ರಿಕೆಟ್ ತಂಡ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡುವ ದಿನ ಹತ್ತಿರವಾಗಿದೆ. ಬಿಸಿಸಿಐ ಅಧ್ಯಕ್ಷ ಗುದ್ದುಗೇರುತ್ತಿದ್ದಂತೆ ಸೌರವ್ ಗಂಗೂಲಿ, ಟೆಸ್ಟ್ ಕ್ರಿಕೆಟ್ ಜನಪ್ರಿಯಗೊಳಿಸಲು ಕ್ರಮಕ್ಕೆ ಮುಂದಾಗಿದ್ದಾರೆ. ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಹಗಲು-ರಾತ್ರಿ ಟೆಸ್ಟ್ ಆಯೋಜನೆಗೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನ.22ರಿಂದ ನಡೆಯಲಿರುವ 2ನೇ ಟೆಸ್ಟ್ ಪಂದ್ಯವನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಲು ಬಿಸಿಸಿಐ ಆಸಕ್ತಿ ತೋರಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಗೆ ತಮ್ಮ ಪ್ರಸ್ತಾಪ ಒಪ್ಪಿಕೊಳ್ಳುವಂತೆ ಮನವಿ ಸಲ್ಲಿಸಿದೆ.
ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
undefined
ದ್ವಿಪಕ್ಷೀಯ ಸರಣಿ ವೇಳೆ ಹಗಲು-ರಾತ್ರಿ ಪಂದ್ಯ ಆಯೋಜನೆ ವಿಚಾರ ಆತಿಥೇಯ ಕ್ರಿಕೆಟ್ ಮಂಡಳಿಗೆ ಬಿಟ್ಟಿದ್ದು. ಪ್ರವಾಸಿ ತಂಡ ಒಪ್ಪಿಕೊಂಡರೆ ಪಂದ್ಯ ಆಯೋಜಿಸಲು ಐಸಿಸಿ ಅನುಮತಿ ನೀಡಿದೆ. ಹೀಗಾಗಿ ಒಂದೊಮ್ಮೆ ಬಿಸಿಬಿ ಒಪ್ಪಿಗೆ ಸೂಚಿಸಿದರೆ, ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ಇದುವರೆಗೂ ಹಗಲು-ರಾತ್ರಿ ಟೆಸ್ಟ್ ಆಡಿಲ್ಲ.
ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!
ಬಿಸಿಬಿ ಒಪ್ಪಿಗೆಗೆ ಕಾಯುತ್ತಿದೆ ಬಿಸಿಸಿಐ
ಬಿಸಿಸಿಐನಿಂದ ಮನವಿ ಬಂದಿರುವುದಾಗಿ ಸ್ಪಷ್ಟಪಡಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಿಇಒ ನಿಜಾಮುದ್ದಿನ್ ಚೌಧರಿ, ‘ಈ ಬಗ್ಗೆ ಚರ್ಚಿಸುತ್ತಿದ್ದೇವೆ. ಆದರೆ ಇನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಆಟಗಾರರು ಹಾಗೂ ಕೋಚ್‌ಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ. ಬಿಸಿಬಿ ಅಧಿಕೃತ ನಿರ್ಧಾರ ಪ್ರಕಟಿಸಲು ಸಮಯ ಕೇಳಿದ್ದರೂ, ಕೋಲ್ಕತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕ್ರೀಡಾಂಗಣದ ಮುಖ್ಯ ಕ್ಯುರೇಟರ್ ಸುಜನ್ ಮುಖರ್ಜಿ, ಆಯೋಜಕರು ಹಗಲು-ರಾತ್ರಿ ಪಂದ್ಯವೆಂದು ಖಚಿತ ಪಡಿಸಿದ್ದಾರೆಂದು ತಿಳಿಸಿದ್ದಾರೆ. ‘ಅಂತಿಮ ನಿರ್ಧಾರ ಪ್ರಕಟವಾಗಲೆಂದು ಕಾಯುತ್ತಿದ್ದೇವೆ. ಆದರೆ ಹಗಲು-ರಾತ್ರಿ ಪಂದ್ಯ ನಡೆಯಲಿದೆ ಎನ್ನುವ ನಂಬಿಕೆ ಇದೆ. ಇದಕ್ಕಾಗಿ ವಿಶೇಷವಾಗೇನೂ ಪಿಚ್ ತಯಾರಿಸುತ್ತಿಲ್ಲ. ಸ್ಪರ್ಧಾತ್ಮಕ ಪಿಚ್ ಸಿದ್ಧಗೊಳಿಸಲಿದ್ದು, ಹೆಚ್ಚಿನ ವೇಗ ಹೊಂದಿರಲಿದೆ’ ಎಂದು ಮುಖರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಭಾಂಗ್ಲಾದೇಶ ವಿರುದ್ಧದ ಸರಣಿಗೆ ಭಾರತ ತಂಡ, ಯಾರಿಗೆ ಅವಕಾಶ, ಯಾರಿಗೆ ಕೊಕ್!
ಪಿಂಕ್ ಬಾಲ್ ಬಳಕೆ
ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ಗುಲಾಬಿ (ಪಿಂಕ್) ಬಣ್ಣದ ಚೆಂಡನ್ನು ಬಳಕೆ ಮಾಡಲಾಗುತ್ತದೆ. ಆಸ್ಪ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ಪ್ರಮುಖ ತಂಡಗಳು ಈಗಾಗಲೇ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ಆಡಿವೆ. ಸೌರವ್ ಗಂಗೂಲಿ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದಾಗಲೂ ಪಿಂಕ್ ಬಾಲ್ ಬಳಕೆಗೆ ಒತ್ತು ನೀಡಿದ್ದರು. ಅವರ ಸಲಹೆ ಮೇರೆಗೆ 2016ರ ದುಲೀಪ್ ಟ್ರೋಫಿಯನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಲಾಗಿತ್ತು. ಪಂದ್ಯಗಳಿಗೆ ಬಳಕೆಯಾಗಿದ್ದ ಎಸ್‌ಜಿ ಪಿಂಕ್ ಚೆಂಡಿನ ಗುಣಮಟ್ಟದ ಬಗ್ಗೆ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಋುತುವಿನಲ್ಲೂ ದುಲೀಪ್ ಟ್ರೋಫಿ ಪಂದ್ಯಗಳನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಸಿಸಿಐ ಮನಸು ಬದಲಿಸಿತ್ತು.
ಬಾಂಗ್ಲಾದೇಶ ತಂಡಕ್ಕೂ ಪಿಂಕ್ ಬಾಲ್‌ನಲ್ಲಿ ಆಡಿದ ಅನುಭವವಿಲ್ಲ. 2013ರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಬಳಕೆ ಮಾಡಲಾಗಿತ್ತು. ಹೀಗಾಗಿ ಬಾಂಗ್ಲಾ ಆಟಗಾರರು ಹಿಂದೇಟು ಹಾಕುವ ಸಾಧ್ಯತೆ ಇದೆ. ಆದರೆ ಪಂದ್ಯ ವೀಕ್ಷಣೆಗೆ ಬಾಂಗ್ಲಾ ಪ್ರಧಾನಿ ಆಗಮಿಸಲಿದ್ದಾರೆ ಎಂದು ಖಚಿತ ಪಡಿಸಿರುವ ಗಂಗೂಲಿ, ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನೂ ಒಪ್ಪಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮಾಲಿನ್ಯದ ನಡುವೆಯೇ ದಿಲ್ಲಿಯಲ್ಲಿ ಮೊದಲ ಟಿ20!
ಧೂಳು, ವಾಯು ಮಾಲಿನ್ಯದ ಹೊರತಾಗಿಯೂ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನ.3ರಂದು ಭಾರತ-ಬಾಂಗ್ಲಾದೇಶ ಮೊದಲ ಟಿ20 ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. ದೀಪಾವಳಿ ಪಟಾಕಿಯಿಂದಾಗಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಕಡಿಮೆಯಾಗಲಿದೆ. ಪಂದ್ಯ ನಡೆಯುವ ದಿನದಂದು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದ ಬಳಿಕವಷ್ಟೇ ಪಂದ್ಯ ಆಯೋಜನೆಗೆ ನಿರ್ಧರಿಸಲಾಯಿತು. ಪೂರ್ವ ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.