'ಏ‍ಷ್ಯಾಕಪ್ ಬಳಿಕ ಹಾರ್ದಿಕ್ ಪಾಂಡ್ಯ ಬೇರೆಯದ್ದೇ ಗ್ರಹದಿಂದ ಬಂದಂತೆ ಆಡುತ್ತಿದ್ದಾರೆ'

By Naveen KodaseFirst Published Sep 22, 2022, 3:57 PM IST
Highlights

ಆಸ್ಟ್ರೇಲಿಯಾ ಎದುರು ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಹಾರ್ದಿಕ್ ಪಾಂಡ್ಯ
ಮೊದಲ ಟಿ20 ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿದ್ದ ಪಾಂಡ್ಯ
ಹಾರ್ದಿಕ್ ಪಾಂಡ್ಯ ಪ್ರದರ್ಶನವನ್ನು ಗುಣಗಾನ ಮಾಡಿದ ಸಂಜಯ್ ಮಂಜ್ರೇಕರ್

ಮೊಹಾಲಿ(ಸೆ.22): ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊಂಚ ಮಂಕಾದಂತೆ ಕಂಡು ಬಂದಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಿದ್ದು, ಅವರ ಆಟವನ್ನು ಗಮನಿಸಿದರೆ, ಅವರು ಬೇರೆಯದ್ದೇ ಗ್ರಹದಿಂದ ಬಂದಂತೆ ಕಾಣುತ್ತಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದ್ದರು. ಪರಿಣಾಮ ಟೀಂ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್‌ ಕಲೆಹಾಕಿತ್ತು. ಈ ಮೊದಲು ಹಾರ್ದಿಕ್‌ ಪಾಂಡ್ಯ, ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಕೇವಲ 17 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇದಾದ ಬಳಿಕ ನಡೆದ ಪಂದ್ಯಗಳಲ್ಲಿ ಹಾರ್ದಿಕ್‌ ಪಾಂಡ್ಯ ಫಾರ್ಮ್‌ ಕಳೆದುಕೊಂಡಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ನಾವೆಲ್ಲರೂ ಹಾರ್ದಿಕ್ ಪಾಂಡ್ಯ ಆಟವನ್ನು ನೋಡಿದ್ದೇವೆ. ಆ ಸಂದರ್ಭದಲ್ಲಿ ಅವರು ಕೊಂಚ ಲಯ ಕಳೆದುಕೊಂಡಂತೆ ಕಂಡು ಬಂದಿದ್ದರು. ಆದರೆ ಇದೀಗ ಏಷ್ಯಾಕಪ್ ಟೂರ್ನಿಯನ್ನು ಮರೆಸುವಂತಹ ರೀತಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಫಾರ್ಮ್‌ಗೆ ಮರಳಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ನಾವೆಲ್ಲರೂ ಫಾರ್ಮ್‌ ಬಗ್ಗೆ ಮಾತನಾಡುತ್ತೇವೆ. ಅದರರ್ಥ, 40,50 ಅಥವಾ 60 ರನ್ ಬಾರಿಸುವುದಲ್ಲ. ಯಾವ ರೀತಿ ಅವರು ಪಂದ್ಯದಲ್ಲಿ ಪರಿಣಾಮಕಾರಿ ಆಟ ಪ್ರದರ್ಶಿಸಿದರು ಎನ್ನುವುದು ಮುಖ್ಯವಾಗುತ್ತದೆ. ಸದ್ಯ ಅವರು ಆಡುತ್ತಿರುವ ರೀತಿಯನ್ನು ಗಮನಿಸಿದರೆ, ಬೇರೆಯದ್ದೇ ಗ್ರಹದಿಂದ ಬಂದಂತೆ ಕಾಣುತ್ತಿದ್ದಾರೆ ಎಂದು ಖ್ಯಾತ ವೀಕ್ಷಕ ವಿವರಣೆಗಾರ ಮಂಜ್ರೇಕರ್ ಹೇಳಿದ್ದಾರೆ. 

ಇಂಗ್ಲೆಂಡ್‌ ಆಲ್ರೌಂಡರ್ ಜತೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸಾಧ್ಯವೇ ಇಲ್ಲವೆಂದ ಪಾಕ್ ಮಾಜಿ ಕ್ರಿಕೆಟಿಗ..!

ಗುಣಮಟ್ಟದ ಬೌಲಿಂಗ್ ಪಡೆಯೆದುರು ಹಾರ್ದಿಕ್ ಪಾಂಡ್ಯ ಅದ್ಭುತವಾದ ಬ್ಯಾಟಿಂಗ್ ನಡೆಸಿದರು. ನನ್ನ ಪ್ರಕಾರ ಇದು ಒಳ್ಳೆಯ ಬೆಳವಣಿಗೆ. ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಹೋಲಿಸಿದರೆ, ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಹಾರ್ದಿಕ್ ಪಾಂಡ್ಯ ಮೊದಲ ಇನಿಂಗ್ಸ್‌ನಲ್ಲೇ ಅದ್ಭುತ ಆಟ ಪ್ರದರ್ಶಿಸಿದರು ಎಂದು ಸಂಜಯ್ ಮಂಜ್ರೇಕರ್, ಪಾಂಡ್ಯ ಗುಣಗಾನ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ, ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಡೆತ್ ಓವರ್‌ನಲ್ಲಿ ಭಾರತೀಯ ಬೌಲರ್‌ಗಳು ದಯನೀಯ ವೈಫಲ್ಯ ಅನುಭವಿಸಿದ್ದರಿಂದ ಟೀಂ ಇಂಡಿಯಾ, ಮೊದಲ ಏಕದಿನ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿತು. ಕ್ಯಾಮರೋನ್ ಗ್ರೀನ್‌ ಕೇವಲ 30 ಎಸೆತಗಳಲ್ಲಿ 61 ರನ್ ಚಚ್ಚುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರೆ, ಕೊನೆಯಲ್ಲಿ ಮ್ಯಾಥ್ಯೂ ವೇಡ್ ಕೇವಲ 21 ಎಸೆತಗಳಲ್ಲಿ ಅಜೇಯ 45 ರಬ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

click me!