* ಆಸ್ಟ್ರೇಲಿಯಾ ಎದುರು ಡೆತ್ ಓವರ್‌ನಲ್ಲಿ ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್
* ಭುವನೇಶ್ವರ್ ಕುಮಾರ್ ಬೆಂಬಲಕ್ಕೆ ನಿಂತ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್
* ಭುವನೇಶ್ವರ್ ಕುಮಾರ್ ಒಳ್ಳೆಯ ಡೆತ್ ಓವರ್ ಬೌಲರ್ ಎಂದ ಹೇಡನ್
ಮೊಹಾಲಿ(ಸೆ.22): ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಓರ್ವ ಅತ್ಯುತ್ತಮ ಬೌಲರ್ ಆಗಿದ್ದು, ಅವರು ಭಾರತ ಪರ ಡೆತ್ ಓವರ್ ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿ. ಭುವನೇಶ್ವರ್ ಕುಮಾರ್ ಡೆತ್ ಓವರ್‌ನಲ್ಲಿ ಒಳ್ಳೆಯ ಫಿನಿಶರ್ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಎದುರು ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 19ನೇ ಓವರ್‌ನಲ್ಲಿ 16 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಭುವನೇಶ್ವರ್ ಕುಮಾರ್‌ಗೆ ಡೆತ್ ಓವರ್ ಬೌಲಿಂಗ್ ಮಾಡಿಸುವ ಬಗ್ಗೆ ಚರ್ಚೆ ಆರಂಭವಾಗಿವೆ. ಆಸ್ಟ್ರೇಲಿಯಾ ತಂಡವು ಕೊನೆಯ ಎರಡು ಓವರ್‌ಗಳಲ್ಲಿ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು. ಆದರೆ ಭುವಿ 19ನೇ ಓವರ್‌ನಲ್ಲಿ 16 ರನ್ ನೀಡುವ ಮೂಲಕ ಪಂದ್ಯ ಕೈಜಾರುವಂತೆ ಮಾಡಿದ್ದರು.
19ನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಬೌಂಡರಿ ಬಾರಿಸುವ ಮೂಲಕ ಆಸೀಸ್ ಗೆಲುವನ್ನು ಸುಲಭಗೊಳಿಸಿದರು. ಆಸ್ಟ್ರೇಲಿಯಾ ಕೊನೆಯ ಓವರ್‌ನಲ್ಲಿ ಗೆಲ್ಲಲು ಕೇವಲ 2 ರನ್‌ಗಳ ಅಗತ್ಯವಿತ್ತು. 20ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಪ್ಯಾಟ್ ಕಮಿನ್ಸ್ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ನನ್ನ ಪ್ರಕಾರ ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು ಹಾಗೂ ಡೆತ್ ಓವರ್‌ನಲ್ಲಿ ಅವರೊಬ್ಬ ಒಳ್ಳೆಯ ಫಿನಿಶರ್. ನನಗನಿಸಿದಂತೆ ಡೆತ್ ಓವರ್ ಬೌಲಿಂಗ್ ಮಾಡಬೇಕಾದ ಪಾತ್ರವನ್ನು ಅವರು ನಿಭಾಯಿಸಬೇಕಿದೆ. ಅವರ ಪಾತ್ರವೇನಿದ್ದರೂ ಆರಂಭದಲ್ಲೇ ವಿಕೆಟ್ ಕಬಳಿಸುವುದಾಗಿದೆ. ಆದರೆ ನಾಯಕ ಅವರಿಂದ ಕೊನೆಯಲ್ಲಿ ಎರಡು ಓವರ್ ಬೌಲಿಂಗ್ ಮಾಡಲು ಬಯಸಿದರೆ ಅದನ್ನು ಕೂಡಾ ಅವರು ಮಾಡಬಲ್ಲರು ಎಂದು ಹೇಡನ್, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ 'ಮ್ಯಾಚ್ ಪಾಯಿಂಟ್' ಮಾತುಕತೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಭುವನೇಶ್ವರ್ ಕುಮಾರ್, ಇದೀಗ ಮೂರನೇ ಬಾರಿಗೆ 19ನೇ ಓವರ್‌ನಲ್ಲಿ ದುಬಾರಿಯಾಗುತ್ತಿರುವುದು. ಈ ಮೊದಲು ಏಷ್ಯಾಕಪ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ 19ನೇ ಓವರ್‌ನಲ್ಲಿ ಶ್ರೀಲಂಕಾ ಎದುರು 14 ಹಾಗೂ ಪಾಕಿಸ್ತಾನ ಎದುರು 19 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿದ್ದರು.
ಇಂಗ್ಲೆಂಡ್ ಆಲ್ರೌಂಡರ್ ಜತೆ ಹಾರ್ದಿಕ್ ಪಾಂಡ್ಯ ಹೋಲಿಕೆ ಸಾಧ್ಯವೇ ಇಲ್ಲವೆಂದ ಪಾಕ್ ಮಾಜಿ ಕ್ರಿಕೆಟಿಗ..!
ಆಸ್ಟ್ರೇಲಿಯಾ ವಿರುದ್ದ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿತ್ತು. ಇನ್ನು ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಕ್ಯಾಮರೋನ್ ಗ್ರೀನ್ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ಮ್ಯಾಥ್ಯೂ ವೇಡ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಭಾರತ ತಂಡವು ಆಸ್ಟ್ರೇಲಿಯಾ ಎದುರು ಸೆಪ್ಟೆಂಬರ್ 24ರಂದು ನಾಗ್ಪುರದಲ್ಲಿ ಎರಡನೇ ಟಿ20 ಪಂದ್ಯವನ್ನಾಡಲಿದೆ. ಇದಾದ ಬಳಿಕ ಸೆಪ್ಟೆಂಬರ್ 25ರಂದು ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಹೈದರಾಬಾದ್‌ನಲ್ಲಿ ಆಡಲಿದೆ.