ಮುಂಬೈನಲ್ಲಿಂದು ಇಂಡೋ-ಆಸೀಸ್ ಒನ್ ಡೇ ಫೈಟ್

By Kannadaprabha NewsFirst Published Jan 14, 2020, 11:32 AM IST
Highlights

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2020ರಲ್ಲಿ ಮೊದಲ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಮುಂಬೈ(ಜ.14): ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಎಲ್ಲಾ ತಂಡಗಳು ವಿಶ್ವಕಪ್ ಸಿದ್ಧತೆಯನ್ನು ತೀವ್ರಗೊಳಿಸಿವೆ. ಭಾರತ ತಂಡ ಒಂದಾದ ಮೇಲೆ ಒಂದು ಸರಣಿಗಳನ್ನು ಆಡುತ್ತಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ತವರಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. 

INDvAUS ಏಕದಿನ: ಕೊಹ್ಲಿ ಸೈನ್ಯದಲ್ಲಿ ಯಾರಿಗೆ ಚಾನ್ಸ್, ಯಾರಿಗೆ ಕೊಕ್?

ಮಂಗಳವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, 2020ರಲ್ಲಿ ಆಡುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಜಯಗಳಿಸಲು ವಿರಾಟ್ ಕೊಹ್ಲಿ ಪಡೆ ಕಾತರಿಸುತ್ತಿದೆ. 2019ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿದ್ದ ಭಾರತ ಕೊನೆ 3 ಪಂದ್ಯಗಳಲ್ಲಿ ಸೋತು 2-3ರಲ್ಲಿ ಸರಣಿ ಬಿಟ್ಟುಕೊಟ್ಟಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಕಾಯುತ್ತಿದೆ. ರೋಹಿತ್ ಶರ್ಮಾ ವರ್ಸಸ್ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ವರ್ಸಸ್ ಸ್ಟೀವ್ ಸ್ಮಿತ್, ಜಸ್‌ಪ್ರೀತ್ ಬುಮ್ರಾ ವರ್ಸಸ್ ಮಿಚೆಲ್ ಸ್ಟಾರ್ಕ್ ನಡುವಿನ ಪೈಪೋಟಿ ಭಾರೀ ಕುತೂಹಲ ಕೆರಳಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಆಸ್ಟ್ರೇಲಿಯಾದ ನೂತನ ‘ರನ್ ಮಷಿನ್’ ಮಾರ್ನಸ್ ಲಬುಶೇನ್ ಸಹ ನಿರೀಕ್ಷೆ ಹುಟ್ಟಿಸಿದ್ದಾರೆ. 

ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಸೀಸ್ ದಿಗ್ಗಜರು..!

ರಾಹುಲ್‌ಗೆ ಕೀಪಿಂಗ್ ಹೊಣೆ?: ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ಮೂವರು ತಂಡದಲ್ಲಿದ್ದು, ಯಾರಿಬ್ಬರನ್ನು ಆರಂಭಿಕರನ್ನಾಗಿ ಆಡಿಸುವುದು ಎನ್ನುವ ಗೊಂದಲ ತಂಡದ ಆಡಳಿತಕ್ಕಿದೆ. ಆದರೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ನಾಯಕ ಕೊಹ್ಲಿ, ಮೂವರನ್ನೂ ಆಡಿಸುವ ಸಾಧ್ಯತೆ ಇದೆ ಎನ್ನುವ ಸುಳಿವು ನೀಡಿದ್ದಾರೆ. ರೋಹಿತ್, ಧವನ್ ಆರಂಭಿಕರಾಗಿ ಆಡಿದರೆ, ರಾಹುಲ್ 3ನೇ ಕ್ರಮಾಂಕದಲ್ಲಿ ಆಡಬೇಕಿದೆ. ಜತೆಗೆ ವಿಕೆಟ್ ಕೀಪಿಂಗ್ ಸಹ ಮಾಡಬೇಕಿದೆ. ಕೊಹ್ಲಿ 4ನೇ ಕ್ರಮಾಂಕ್ಕಿಳಿಯಬೇಕಿದ್ದು, ಶ್ರೇಯಸ್ ಅಯ್ಯರ್ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 

ಫಿನಿಶರ್ ಪಾತ್ರವನ್ನು ಕೇದಾರ್ ಜಾಧವ್ ನಿಭಾಯಿಸಬೇಕಿದೆ. ಜಾಧವ್ ನಿರೀಕ್ಷೆ ಉಳಿಸಕೊಳ್ಳದಿದ್ದರೆ ಅವರಿಗಿದು ಬಹುತೇಕ ಕೊನೆ ಏಕದಿನ ಸರಣಿ ಆಗಲಿದೆ. ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ನವ್‌ದೀಪ್ ಸೈನಿ ಪೈಕಿ ಮೂವರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಗಲಿದೆ. ಕುಲ್ದೀಪ್ ಯಾದವ್ ಏಕೈಕ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಬಹುದು. ರವೀಂದ್ರ ಜಡೇಜಾಗೆ ಆಲ್ರೌಂಡರ್ ಸ್ಥಾನ ಸಿಗುವ ಸಾಧ್ಯತೆ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
 

click me!