ಇಂದಿನಿಂದ ಭಾರತ vs ಆಫ್ಘನ್‌ ಟಿ20 ಸರಣಿ ಆರಂಭ..!

By Kannadaprabha News  |  First Published Jan 11, 2024, 9:23 AM IST

ರೋಹಿತ್‌ ತಂಡಕ್ಕೆ ವಾಪಸಾಗಿರುವ ಕಾರಣ, ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲ ಬದಲಾವಣೆ ಆಗಲಿದೆ. ರೋಹಿತ್‌ ಹಾಗೂ ಯಶಸ್ವಿ ಜೈಸ್ವಾಲ್‌ ಆರಂಭಿಕರಾಗಿ ಆಡಲಿದ್ದಾರೆ ಎಂದು ಕೋಚ್‌ ದ್ರಾವಿಡ್‌ ಖಚಿತಪಡಿಸಿದ್ದಾರೆ. ಈ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ 3ನೇ ಕ್ರಮಾಂಕದಲ್ಲಿ ಆಡಲಿದ್ದು, ಕೊನೆ 2 ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಕೊಹ್ಲಿಗೆ ಬಿಟ್ಟು ಕೊಡಬೇಕಾಗಬಹುದು.


ಮೊಹಾಲಿ(ಜ.11): ಟಿ20 ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯಕ್ಕೆ ಇನ್ನು 5 ತಿಂಗಳಿಗೂ ಕಡಿಮೆ ಸಮಯವಿದೆ. ಗುರುವಾರದಿಂದ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದ್ದು, ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಕ್ರೀಡಾಂಗಣ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಇನ್ನೂ ಐಪಿಎಲ್‌ ನಡೆಯುವುದು ಬಾಕಿ ಇದೆಯಾದರೂ, ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

Tap to resize

Latest Videos

ಆಫ್ಘಾನ್ ಎದುರಿನ ಮೊದಲ ಟಿ20 ಪಂದ್ಯದಿಂದ ಕೊಹ್ಲಿ ಔಟ್..! ರೋಹಿತ್ ಜತೆ ಇನಿಂಗ್ಸ್ ಆರಂಭಿಸೋದು ಯಾರು?

2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಸೋಲಿನ ಬಳಿಕ ಮೊದಲ ಬಾರಿಗೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ, ಭಾರತ ಟಿ20 ತಂಡಕ್ಕೆ ಮರಳಿದ್ದು, ಇಬ್ಬರೂ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆ ಇದೆ. ಹೀಗಾಗಿ ಈ ಸರಣಿಯಲ್ಲಿ ಎಲ್ಲರ ಕಣ್ಣು ದಿಗ್ಗಜರಿಬ್ಬರ ಮೇಲಿರಲಿದೆ. ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಕೊನೆ 2 ಪಂದ್ಯಗಳಲ್ಲಿ ಆಡಲಿದ್ದಾರೆ.

ರೋಹಿತ್‌ ತಂಡಕ್ಕೆ ವಾಪಸಾಗಿರುವ ಕಾರಣ, ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲ ಬದಲಾವಣೆ ಆಗಲಿದೆ. ರೋಹಿತ್‌ ಹಾಗೂ ಯಶಸ್ವಿ ಜೈಸ್ವಾಲ್‌ ಆರಂಭಿಕರಾಗಿ ಆಡಲಿದ್ದಾರೆ ಎಂದು ಕೋಚ್‌ ದ್ರಾವಿಡ್‌ ಖಚಿತಪಡಿಸಿದ್ದಾರೆ. ಈ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ 3ನೇ ಕ್ರಮಾಂಕದಲ್ಲಿ ಆಡಲಿದ್ದು, ಕೊನೆ 2 ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಕೊಹ್ಲಿಗೆ ಬಿಟ್ಟು ಕೊಡಬೇಕಾಗಬಹುದು.

ಏಕದಿನ ವಿಶ್ವಕಪ್‌ನಲ್ಲಿ ಆಡಿದಂತೆ ರೋಹಿತ್‌, ಪವರ್‌-ಪ್ಲೇನಲ್ಲಿ ಸ್ಫೋಟಕ ಆಟವಾಡಬೇಕಿದೆ. ಸೂರ್ಯ ಹಾಗೂ ಹಾರ್ದಿಕ್‌ ಇಬ್ಬರೂ ಇಲ್ಲದಿರುವ ಕಾರಣ, ತಿಲಕ್‌ ವರ್ಮಾ ಹಾಗೂ ರಿಂಕು ಸಿಂಗ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಗಲಿದೆ. ಬೂಮ್ರಾ, ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದ್ದು ಆಯ್ಕೆ ಸಮಿತಿಯ ಗಮನ ಸೆಳೆಯಲು ಅರ್ಶ್‌ದೀಪ್‌, ಆವೇಶ್‌ ಹಾಗೂ ಮುಕೇಶ್‌ಗೂ ಇನ್ನೊಂದು ಅವಕಾಶ ಸಿಗಲಿದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಜಿತೇಶ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ನಡುವೆ ಪೈಪೋಟಿ ಏರ್ಪಡಲಿದೆ.

IPL 2024 ಟೂರ್ನಿಗೆ ವೇಳಾಪಟ್ಟಿ ಫಿಕ್ಸ್..! ಗುಡ್ ನ್ಯೂಸ್ ಕೊಟ್ಟ BCCI

ರಶೀದ್‌ ಔಟ್‌: ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ಕಾರಣ ತಾರಾ ಆಲ್ರೌಂಡರ್‌ ರಶೀದ್‌ ಖಾನ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಇಬ್ರಾಹಿಂ ಜದ್ರಾನ್‌ ತಂಡ ಮುನ್ನಡೆಸಲಿದ್ದು, ರಶೀದ್‌ ಬದಲು ಕಯಾಸ್‌ ಅಹ್ಮದ್‌ ಆಡುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 05

ಭಾರತ: 04

ಅಫ್ಘಾನಿಸ್ತಾನ: 00

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್‌ ಗಿಲ್, ತಿಲಕ್‌ ವರ್ಮಾ, ಜಿತೇಶ್‌ ಶರ್ಮಾ/ಸಂಜು ಸ್ಯಾಮ್ಸನ್, ರಿಂಕು ಸಿಂಗ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಆವೇಶ್‌ ಖಾನ್, ಅರ್ಶ್‌ದೀಪ್‌ ಸಿಂಗ್, ಮುಕೇಶ್‌ ಕುಮಾರ್.

ಆಫ್ಘನ್‌: ಹಜ್ರತುಲ್ಲಾ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ(ನಾಯಕ), ಅಜ್ಮತುಲ್ಲಾ, ನಜೀಬುಲ್ಲಾ, ಮೊಹಮ್ಮದ್ ನಬಿ, ಗುಲ್ಬದಿನ್‌ ನೈಬ್/ಕರೀಂ, ಮುಜೀಬ್‌ ಉರ್ ರೆಹಮಾನ್, ಕಯಾಸ್‌, ನವೀನ್‌ ಉಲ್ ಹಕ್, ಫಜಲ್‌ ಹಕ್ ಫಾರೂಕಿ.

ಪಂದ್ಯ ಆರಂಭ: ಸಂಜೆ 7ಕ್ಕೆ

ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

01 ಸರಣಿ: ಭಾರತ-ಅಫ್ಘಾನಿಸ್ತಾನ ನಡುವೆ ಸೀಮಿತ ಓವರ್‌ ಮಾದರಿಯಲ್ಲಿ ಇದು ಮೊದಲ ದ್ವಿಪಕ್ಷೀಯ ಸರಣಿ.

click me!