
ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಒಟ್ಟಿಗೆ ಕಣಕ್ಕಿಳಿದರೆ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟುತ್ತಿತ್ತು. ಇದೀಗ ಅವರ ಇಬ್ಬರ ಪುತ್ರರಾದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್ ಒಟ್ಟಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುವ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.
ಸೆಪ್ಟೆಂಬರ್ 18 ರಿಂದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ಆರಂಭವಾಗಲಿರುವ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಎಲ್ಲರ ಚಿತ್ತ ಇರುವುದು ದ್ರಾವಿಡ್ ಮತ್ತು ಸೆಹ್ವಾಗ್ ಪುತ್ರರ ಮೇಲೆಯೇ! ತಂಡದಲ್ಲಿ ಇಬ್ಬರು ಸೂಪರ್‌ಸ್ಟಾರ್ ಮಕ್ಕಳಿರುವಾಗ, ಮಾಧ್ಯಮಗಳ ಅತಿಯಾದ ಗಮನ ಮತ್ತು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಭಾರತ U19 ತಂಡದ ಯುವ ನಾಯಕ ಲಕ್ಷ್ಯ ರಾಯ್‌ಚಂದಾನಿ (Lakshya Raichandani) ಖಡಕ್ ಉತ್ತರ ನೀಡಿದ್ದಾರೆ.
ತಂಡದಲ್ಲಿ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್ ಇರುವುದರಿಂದ ಉಂಟಾಗುವ ಹೈಪ್ ಹಾಗೂ ತಂಡದ ವಾತಾವರಣದ ಬಗ್ಗೆ ಮಾತನಾಡಿದ ನಾಯಕ ಲಕ್ಷ್ಯ, ತಂಡದಲ್ಲಿ ಯಾರೇ ಆಟಗಾರರಿರಲಿ, ಯಾವುದೇ ಒಬ್ಬ ವ್ಯಕ್ತಿಗಿಂತ ಇಡೀ ತಂಡದ ಹಿತಾಸಕ್ತಿಯೇ ನಮಗೆ ಮೊದಲ ಆದ್ಯತೆ. ನಾನು ತಂಡವನ್ನು ಮುನ್ನಡೆಸುವ ರೀತಿಯೇ ಹಾಗೆ. ತಂಡದಲ್ಲಿ ಯಾರೂ ಕೂಡ ಕಡೆಗಣಿಸಲ್ಪಟ್ಟ ಭಾವನೆ ಬಾರದಂತೆ ನೋಡಿಕೊಳ್ಳುವುದು ಮತ್ತು ಪ್ರತಿಯೊಬ್ಬರನ್ನೂ ಒಂದೇ ಸೂರಿನಡಿ ತಂದು ಒಗ್ಗಟ್ಟಿನಿಂದ ಆಡುವುದು ನಮ್ಮ ಮುಖ್ಯ ಗುರಿ. ಎಲ್ಲರೂ ಒತ್ತಡವಿಲ್ಲದೆ ಆಡುವಂತಹ ಸಕಾರಾತ್ಮಕ ವಾತಾವರಣ ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಜೋಡಿ ಅದೆಷ್ಟೋ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಕಟ್ಟಿದೆ. ಈಗ ಅವರ ಮಕ್ಕಳಾದ ಅನ್ವಯ್ (ವಿಕೆಟ್ ಕೀಪರ್ ಬ್ಯಾಟರ್) ಮತ್ತು ಆರ್ಯವೀರ್ (ಆರಂಭಿಕ ಬ್ಯಾಟರ್) ಜೂನಿಯರ್ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ದೇಶೀಯ ಹಾಗೂ ವಯೋಮಿತಿ ಕ್ರಿಕೆಟ್‌ನಲ್ಲಿ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿಯೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ 17 ವರ್ಷದ ಲಕ್ಷ್ಯ ರಾಯ್‌ಚಂದಾನಿ ಕೂಡ ಸಾಮಾನ್ಯ ಪ್ರತಿಭೆಯಲ್ಲ. ಶ್ರೀಲಂಕಾ U19 ವಿರುದ್ಧ 207 ರನ್ ಗಳಿಸಿ ಅಬ್ಬರಿಸಿದ್ದ ಲಕ್ಷ್ಯ, ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಕರ್ನಾಟಕ ತಂಡದ ವಿರುದ್ಧ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಈ ಹಿಂದೆ ವಿರಾಟ್ ಕೊಹ್ಲಿ, ಮೊಹಮ್ಮದ್ ಕೈಫ್ ಮತ್ತು ಪೃಥ್ವಿ ಶಾ ಮುನ್ನಡೆಸಿದ್ದ ಸ್ಥಾನದಲ್ಲಿ ಈಗ ಲಕ್ಷ್ಯ ನಿಂತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯು ದ್ರಾವಿಡ್ ಮತ್ತು ಸೆಹ್ವಾಗ್ ಪುತ್ರರಿಗೆ ಮಾತ್ರವಲ್ಲದೆ ಇಡೀ ಭಾರತ ಯುವ ಪಡೆಗೆ ಭವಿಷ್ಯದ ಟೀಮ್ ಇಂಡಿಯಾ ಬಾಗಿಲು ತಟ್ಟಲು ಅತ್ಯುತ್ತಮ ವೇದಿಕೆಯಾಗಲಿದೆ. ಜೂನಿಯರ್ ಸೆಹ್ವಾಗ್ ಹಾಗೂ ಜೂನಿಯರ್ ದ್ರಾವಿಡ್ ತಮ್ಮ ತಂದೆಯರಂತೆ ಮೈದಾನದಲ್ಲಿ ಮೋಡಿ ಮಾಡುತ್ತಾರಾ ಎಂದು ನೋಡಲು ಇಡೀ ದೇಶ ಕಾಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.