
ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯವು ಜೋ ರೂಟ್ ಅವರ ವೃತ್ತಿಜೀವನದ 169ನೇ ಟೆಸ್ಟ್ ಆಗಿದೆ. ಈ ಮೂಲಕ, ತಲಾ 168 ಟೆಸ್ಟ್ ಪಂದ್ಯಗಳನ್ನಾಡಿದ್ದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. 2012ರ ಡಿಸೆಂಬರ್‌ನಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೋ ರೂಟ್, ಸದ್ಯ ಈ ಪಟ್ಟಿಯಲ್ಲಿ ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (200 ಪಂದ್ಯಗಳು) ಮತ್ತು ತಮ್ಮದೇ ತಂಡದ ಜೇಮ್ಸ್ ಆಂಡರ್ಸನ್ (188 ಪಂದ್ಯಗಳು) ನಂತರದ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ಸಚಿನ್, ಆಂಡರ್ಸನ್, ರೂಟ್, ಸ್ಟೀವ್ ವಾ, ಪಾಂಟಿಂಗ್ ನಂತರ ಸ್ಟುವರ್ಟ್ ಬ್ರಾಡ್ (167), ಜಾಕ್ ಕಾಲಿಸ್ (166), ಶಿವನಾರಾಯಣ್ ಚಂದ್ರಪಾಲ್ (164), ರಾಹುಲ್ ದ್ರಾವಿಡ್ (164) ಮತ್ತು ಅಲಿಸ್ಟರ್ ಕುಕ್ (161) ಇದ್ದಾರೆ.
ಇದಲ್ಲದೆ, ಜೋ ರೂಟ್ ಮತ್ತೊಂದು ಅಪರೂಪದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಇದು ಇಂಗ್ಲೆಂಡ್ ನೆಲದಲ್ಲಿ ಅವರು ಆಡುತ್ತಿರುವ 200ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ (ಎಲ್ಲಾ ಮಾದರಿ ಸೇರಿ). ತವರಿನಲ್ಲಿ ಈಗಾಗಲೇ 11,928 ರನ್ ಗಳಿಸಿರುವ ರೂಟ್, ಇಂಗ್ಲೆಂಡ್‌ನಲ್ಲಿ 12,000 ಅಂತಾರಾಷ್ಟ್ರೀಯ ರನ್ ಪೂರೈಸಲು ಕೇವಲ 72 ರನ್‌ಗಳ ಅಗತ್ಯವಿದೆ. ಈ ಸಾಧನೆ ಮಾಡಿದ ಮೊದಲ ಇಂಗ್ಲಿಷ್ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ತವರಿನಲ್ಲಿ 12,000ಕ್ಕೂ ಹೆಚ್ಚು ರನ್ ಗಳಿಸಿದ ಐವರು ಆಟಗಾರರ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (14,192 ರನ್) ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್, ಮೂರನೇ ಟೆಸ್ಟ್ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
ಇನ್ನು ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡವು ಮೂರನೇ ಟೆಸ್ಟ್‌ನಲ್ಲಾದರೂ ಇಂಗ್ಲೆಂಡ್‌ಗೆ ಕಠಿಣ ಪೈಪೋಟಿ ನೀಡಬಹುದೇನೋ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಪಾಕಿಸ್ತಾನ, ಓಲಿ ರಾಬಿನ್‌ಸನ್, ಜೋಶ್ ಟಂಗ್ ಮಾರಕ ದಾಳಿಗೆ ತತ್ತರಿಸಿ ಕೇವಲ 133 ರನ್‌ಗಳಿಗೆ ಸರ್ವಪತನ ಕಂಡಿತು. ಜೋಶ್ ಟಂಗ್ 4 ವಿಕೆಟ್ ಪಡೆದರೆ, ಓಲಿ ರಾಬಿನ್‌ಸನ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.