India Tour of South Africa: ಇಂದು ಇಲ್ಲವೇ ನಾಳೆ ಭಾರತ ತಂಡ ಆಯ್ಕೆ..!

By Suvarna NewsFirst Published Dec 6, 2021, 11:48 AM IST
Highlights

* ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆಗೆ ಸಾಧ್ಯತೆ

* ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ

* ಟೆಸ್ಟ್‌ ಉಪನಾಯಕ ಸ್ಥಾನಕ್ಕೆ ಹೊಸದಾಗಿ ಆಯ್ಕೆ ಮಾಡುವ ಸಾಧ್ಯತೆ

ಮುಂಬೈ(ಡಿ.06): ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ (BCCI) ಆಯ್ಕೆ ಸಮಿತಿ ಸಭೆ ನಡೆಸಲಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ (Chethan Sharma), ಅಭಯ್‌ ಕುರುವಿಲ್ಲಾ ಹಾಗೂ ಸುನಿಲ್‌ ಜೋಶಿ ಭಾರತ ತಂಡದ ಪ್ರದರ್ಶನವನ್ನು ವೀಕ್ಷಿಸಿದ್ದು, ಸೋಮವಾರ ಇಲ್ಲವೇ ಮಂಗಳವಾರ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಹಾಗೂ ಕಾರ‍್ಯದರ್ಶಿ ಜಯ್‌ ಶಾ (Jay Shah) ಉಪಸ್ಥಿತಿಯಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಎರಡೂ ಸರಣಿಗಳಿಗೆ ಸೇರಿ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕದಿನ ತಂಡದ ನಾಯಕನಾಗಿ ವಿರಾಟ್‌ ಕೊಹ್ಲಿ (Virat Kohli) ಮುಂದುವರಿಯಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಈ ಸಭೆಯಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ. ಅಲ್ಲದೇ ಟೆಸ್ಟ್‌ ತಂಡದ ಉಪನಾಯಕನಾಗಿ ಅಜಿಂಕ್ಯ ರಹಾನೆ (Ajinkya Rahane) ಉಳಿದುಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲಕ್ಕೂ ತೆರೆ ಬೀಳಬಹುದು ಎನ್ನಲಾಗಿದೆ.

Latest Videos

ಈಗಾಗಲೇ ಟಿ20 ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್‌ ಶರ್ಮಾರನ್ನೇ (Rohit Sharma) ಏಕದಿನ ತಂಡಕ್ಕೆ ನಾಯಕನನ್ನಾಗಿ ಮಾಡಬೇಕು. ಇದರಿಂದ 2023ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಸಿದ್ಧಗೊಳ್ಳಲು ಅನುಕೂಲವಾಗಲಿದೆ ಎಂದು ಬಿಸಿಸಿಐನ ಕೆಲ ಅಧಿಕಾರಿಗಳು ಪ್ರಸ್ತಾಪ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ವರ್ಷ ತಂಡ ಹೆಚ್ಚು ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಹೀಗಾಗಿ ಸದ್ಯಕ್ಕೆ ಕೊಹ್ಲಿಯೇ ಮುಂದುವರಿಯಲಿ ಎಂದು ಮತ್ತೆ ಕೆಲವರು ಅಭಿಪ್ರಾಯಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರೋಹಿತ್‌ ಉಪನಾಯಕ?: ಇನ್ನು ಗಾಯದ ನೆಪ ನೀಡಿ ರಹಾನೆಯನ್ನು ಮುಂಬೈ ಟೆಸ್ಟ್‌ನಿಂದ (Mumbai Test) ಕೈಬಿಟ್ಟ ಟೀಂ ಇಂಡಿಯಾ, ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಿದೆಯಾದರೂ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿದೆ ಎನ್ನುವ ಖಾತರಿ ಇಲ್ಲ. ರಹಾನೆ ಬದಲು ಕೆ.ಎಲ್‌.ರಾಹುಲ್‌ (KL Rahul) ಇಲ್ಲವೇ ರೋಹಿತ್‌ ಶರ್ಮಾಗೆ ಉಪನಾಯಕನ ಸ್ಥಾನ ಸಿಗಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Ind vs NZ Mumbai Test: ಕಿವೀಸ್‌ ಬಗ್ಗುಬಡಿದು ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ಇದೇ ವೇಳೆ ಹಿರಿಯ ವೇಗಿ ಇಶಾಂತ್‌ ಶರ್ಮಾಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವೆನಿಸಿದೆ. ಇಶಾಂತ್‌ ಲಯ ಕಳೆದುಕೊಂಡಿದ್ದು, ದೊಡ್ಡ ಸ್ಪೆಲ್‌ಗಳನ್ನು ಬೌಲ್‌ ಮಾಡಲು ಸಾಧ್ಯವಾಗುತ್ತಿಲ್ಲ. ಯುವ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌ರನ್ನು ಆಯ್ಕೆ ಮಾಡಲು ಬಿಸಿಸಿಐ ಇಚ್ಛಿಸಿದೆ ಎನ್ನಲಾಗಿದೆ.

ಏಕದಿನ ತಂಡಕ್ಕೆ ಧವನ್‌ ವಾಪಸ್‌?: ಶಿಖರ್‌ ಧವನ್‌ ಏಕದಿನ ತಂಡದಿಂದ ಹೊರಬಿದ್ದು ಕೆಲ ಸಮಯವಾಗಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಧವನ್‌ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 36 ವರ್ಷದ ಧವನ್‌ಗೆ ಇದು ಬಹುತೇಕ ಕೊನೆ ಅವಕಾಶವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ‘ಎ’-ದ.ಆಫ್ರಿಕಾ ‘ಎ’ 3ನೇ ಟೆಸ್ಟ್‌ ಇಂದಿನಿಂದ

ಬ್ಲೂಮ್‌ಫೌಂಟೇನ್‌: ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ನಡುವಿನ 3ನೇ ಹಾಗೂ ಅಂತಿಮ 4 ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯ ಸೋಮವಾರದಿಂದ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ಉತ್ತಮ ಆಟವಾಡುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಆಯ್ಕೆಯಾಗಲು ಆಟಗಾರರು ಎದುರು ನೋಡುತ್ತಿದ್ದಾರೆ. 

ಪ್ರವಾಸಕ್ಕೆ ಬಿಸಿಸಿಐ ಅಂದಾಜು 20 ಆಟಗಾರರ ತಂಡವನ್ನು ಆಯ್ಕೆ ಮಾಡಲಿದ್ದು, ‘ಎ’ ತಂಡದಲ್ಲಿರುವ ಹನುಮ ವಿಹಾರಿ, ಅಭಿಮನ್ಯು ಈಶ್ವರನ್‌ ಸೇರಿ ಕೆಲ ಆಟಗಾರರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಮೊದಲೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
 

click me!