Ind vs NZ Mumbai Test: ಕಿವೀಸ್‌ ಬಗ್ಗುಬಡಿದು ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

By Suvarna NewsFirst Published Dec 6, 2021, 10:36 AM IST
Highlights

* ಮುಂಬೈ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಜಯಿಸಿದ ಟೀಂ ಇಂಡಿಯಾ

* ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದ ಭಾರತ

* ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಟೀಂ ಇಂಡಿಯಾ

ಮುಂಬೈ(ಡಿ.06): ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ (Team India) ಮುಂಬೈ ಟೆಸ್ಟ್ (Mumbai Test) ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 372 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.  ಇದೀಗ ತವರಿನಲ್ಲಿ ಟೀಂ ಇಂಡಿಯಾ ಸತತವಾಗಿ 14ನೇ ಟೆಸ್ಟ್ ಸರಣಿಯನ್ನು ಜಯಿಸಿದೆ ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 540 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 140 ರನ್‌ ಗಳಿಸಿತ್ತು. ಹೀಗಾಗಿ ಕೊನೆಯ ಎರಡು ದಿನಗಳಲ್ಲಿ ಕಿವೀಸ್‌ಗೆ ಗೆಲ್ಲಲು 400 ರನ್‌ಗಳ ಅಗತ್ಯವಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಜಯಂತ್ ಯಾದವ್ (Jayant Yadav) ಹಾಗೂ ರವಿಚಂದ್ರನ್ ಅಶ್ವಿನ್‌ (Ravichandran Ashwin) ಮಿಂಚಿನ ಬೌಲಿಂಗ್ ದಾಳಿ ನಡೆಸುವ ಮೂಲಕ ಆದಷ್ಟು ಬೇಗ ತಂಡವನ್ನು ಗೆಲುವಿನ ನಗೆ ಬೀರುವಂತೆ ಮಾಡಿದರು. 

ವ್ಯರ್ಥವಾದ ಅಜಾಜ್ ಪಟೇಲ್‌: ಮುಂಬೈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಅಜಾಜ್ ಪಟೇಲ್ (Ajaz Patel) 10 ವಿಕೆಟ್ ಕಬಳಿಸಿ ಅಪರೂಪದ ದಾಖಲೆ ನಿರ್ಮಿಸಿದ್ದರು. ಜಿಮ್ ಲೇಕರ್ ಹಾಗೂ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್‌ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಅಜಾಜ್ ಪಟೇಲ್ ಭಾಜನರಾಗಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿದ್ದ ಅಜಾಜ್ ಪಟೇಲ್‌ 4 ವಿಕೆಟ್ ಕಬಳಿಸುವ ಮೂಲಕ ಭಾರತ ವಿರುದ್ದ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಬರೆದಿದ್ದರು. ಹೀಗಿದ್ದೂ ಸಹಾ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

India win by 372 runs and take the series 1-0 👏

R Ashwin wraps up the New Zealand innings after Jayant Yadav’s four-wicket haul. | | https://t.co/EdvFj8yST5 pic.twitter.com/Z65KX0xCVv

— ICC (@ICC)

Ind vs NZ Mumbai Test: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಶ್ವಿನ್-ಅಜಾಜ್‌ ಪಟೇಲ್

ಮಹತ್ವದ ಪಂದ್ಯದಲ್ಲಿ ಮಿಂಚಿದ ಮಯಾಂಕ್ ಅಗರ್‌ವಾಲ್: ಮೊದಲ ಟೆಸ್ಟ್ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ಮಯಾಂಕ್ ಅಗರ್‌ವಾಲ್ (Mayank Agarwal), ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 150 ರನ್ ಸಿಡಿಸುವ ಮೂಲಕ ತಂಡ 325 ರನ್‌ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಯಾಂಕ್ ಅಗರ್‌ವಾಲ್‌, ಎರಡನೇ ಇನಿಂಗ್ಸ್‌ನಲ್ಲಿ 62 ರನ್ ಬಾರಿಸಿ ಮಿಂಚಿದ್ದರು. ಈ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ (India Tour of South Africa) ಬಹುತೇಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಹೇಗಿತ್ತು ಮುಂಬೈ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮಯಾಂಕ್ ಅಗರ್‌ವಾಲ್ ಆಕರ್ಷಕ ಅರ್ಧಶತಕ ಹಾಗೂ ಅಕ್ಷರ್ ಪಟೇಲ್ (Axar Patel) ಚೊಚ್ಚಲ ಅರ್ಧಶತಕದ ನೆರವಿನಿಂದ 325 ರನ್‌ ಬಾರಿಸಿ ಆಲೌಟ್ ಆಯಿತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ಕೇವಲ 62 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 276 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಇದರೊಂದಿಗೆ ಕಿವೀಸ್‌ಗೆ ಗೆಲ್ಲಲು 540 ರನ್‌ಗಳ ಗುರಿ ನೀಡಲಾಗಿತ್ತು. ಈ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 167 ರನ್‌ಗಳಿಗೆ ಸರ್ವಪತನ ಕಂಡಿತು. 
 

click me!