
ಮುಂಬೈ(ಡಿ.05): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮುಂಬೈ ಟೆಸ್ಟ್ (Mumbai Test) ಪಂದ್ಯದಲ್ಲಿ ಭಾರತ ಮತ್ತಷ್ಟು ತನ್ನ ಬಿಗಿಪಟ್ಟು ಸಾಧಿಸಿದೆ. ಭಾರತ ನೀಡಿದ್ದ 540 ರನ್‌ಗಳ ಕಠಿಣ ಗುರಿ ಬೆನ್ನತ್ತಿರುವ ಪ್ರವಾಸಿ ನ್ಯೂಜಿಲೆಂಡ್ ತಂಡವು (New Zealand Cricket) ನಿರಂತರ ವಿಕೆಟ್ ಕಳೆದುಕೊಂಡು ಸಾಗಿದ್ದು, ಮೂರನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿದ್ದು, ಗೆಲ್ಲಲು ಇನ್ನೂ 400 ರನ್‌ಗಳ ಅಗತ್ಯವಿದೆ. ಇನ್ನು ಆತಿಥೇಯ ಭಾರತ ತಂಡವು ಈ ಟೆಸ್ಟ್ ಪಂದ್ಯ ಹಾಗೂ ಸರಣಿ ಗೆಲ್ಲಲು ಕೇವಲ 5 ವಿಕೆಟ್‌ಗಳ ಅಗತ್ಯವಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಮುಂಬೈ ಟೆಸ್ಟ್ ಗೆಲ್ಲಲು 540 ರನ್‌ಗಳ ಕಠಿಣ ಗುರಿ ನೀಡಿತು. ಭಾರತ ನೀಡಿದ ಬೆಟ್ಟದಂತ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ನಾಲ್ಕನೇ ಓವರ್‌ನಲ್ಲೇ ರವಿಚಂದ್ರನ್ ಅಶ್ವಿನ್ (Ravichandran Ashwin) ಆಘಾತ ನೀಡಿದರು. ಕಿವೀಸ್ ಹಂಗಾಮಿ ನಾಯಕ ಟಾಮ್ ಲೇಥಮ್(06) ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಅಶ್ವಿನ್ ಯಶಸ್ವಿಯಾದರು.
ಇದಾದ ಬಳಿಕ ಎರಡನೇ ವಿಕೆಟ್‌ಗೆ ವಿಲ್ ಯಂಗ್ (Will Young) ಹಾಗೂ ಡೇರಲ್ ಮಿಚಲ್ ಜೋಡಿ 32 ರನ್‌ಗಳ ಜತೆಯಾಟವಾಡಿತು. ನೆಲಕಚ್ಚಿ ಆಡುವ ಯತ್ನ ಮಾಡಿದ ವಿಲ್ ಯಂಗ್ 41 ಎಸೆತಗಳಲ್ಲಿ 4 ಬೌಂಡರಿ ಸಹಿತ 20 ರನ್ ಬಾರಿಸಿ ಅಶ್ವಿನ್‌ಗೆ ಎರಡನೇ ಬಲಿಯಾದರು. ಇನ್ನು ಅನುಭವಿ ಬ್ಯಾಟರ್ ರಾಸ್ ಟೇಲರ್ (Ross Taylor) ತಾವು ಬಂದಷ್ಟೇ ವೇಗದಲ್ಲಿ ಪೆವಿಲಿಯನ್ನಿಗೆ ವಾಪಾಸ್ಸಾದರು. ಕೇನ್ ವಿಲಿಯಮ್ಸನ್ (Kane Williamson) ಅನುಪಸ್ಥಿತಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಿಭಾಯಿಸಬೇಕಿದ್ದ ರಾಸ್ ಟೇಲರ್ ಆಕ್ರಮಣಕಾರಿ ಆಡುವ ಯತ್ನದಲ್ಲಿ ಕೇವಲ 6 ರನ್ ಬಾರಿಸಿ ಅಶ್ವಿನ್‌ಗೆ ಮೂರನೇ ಬಲಿಯಾದರು.
ನಿಕೋಲ್ಸ್-ಮಿಚೆಲ್ಸ್ ಕೊಂಚ ಪ್ರತಿರೋಧ: ಒಂದು ಹಂತದಲ್ಲಿ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ಹೆನ್ರಿ ನಿಕೋಲ್ಸ್ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 111 ಎಸೆತಗಳನ್ನು ಎದುರಿಸಿ 73 ರನ್‌ಗಳ ಜತೆಯಾಟ ನಿಭಾಯಿತು. ಈ ಜೋಡಿ ನ್ಯೂಜಿಲೆಂಡ್ ತಂಡವನ್ನು ಸೋಲಿನಿಂದ ಬಚಾವು ಮಾಡಬಹುದೇನು ಎಂದುಕೊಳ್ಳುತ್ತಿರುವಾಗಲೇ ಅರ್ಧಶತಕ ಬಾರಿಸಿ ದೊಡ್ಡ ಹೊಡೆತಕ್ಕೆ ಮುಂದಾದ ಡೇರಲ್ ಮಿಚೆಲ್ ವಿಕೆಟ್ ಕೈಚೆಲ್ಲಿದರು. ಡೇರಲ್ ಮಿಚೆಲ್ 92 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 60 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲೆಂಡೆಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಸದ್ಯ ಹೆನ್ರಿ ನಿಕೋಲ್ಸ್ 36 ಹಾಗೂ ರಚಿನ್ ರವೀಂದ್ರ 2 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Ind vs NZ Mumbai Test: ಮುಂಬೈ ಟೆಸ್ಟ್ ಗೆಲ್ಲಲು 540 ರನ್‌ಗಳ ಗುರಿ
ಇದಕ್ಕೂ ಮೊದಲು 69 ರನ್‌ಗಳೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಚೇತೇಶ್ವರ್ ಪೂಜಾರ (Cheteshwar Pujara) ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮಯಾಂಕ್ ಅಗರ್‌ವಾಲ್ 62 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಚೇತೇಶ್ವರ್ ಪೂಜಾರ, ಶುಭ್‌ಮನ್ ಗಿಲ್ (Shubman Gill) ತಲಾ 47 ರನ್ ಬಾರಿಸಿ ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ಬಾರಿಸುವ ಅವಕಾಶ ಕೈಚೆಲ್ಲಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) 36 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್(14), ವೃದ್ದಿಮಾನ್ ಸಾಹ(13) ಹಾಗೂ ಅಕ್ಷರ್ ಪಟೇಲ್ (Axar Patel) ಸ್ಪೋಟಕ 41 ರನ್ ಸಿಡಿಸಿದರು. ಅಜಾಜ್ ಪಟೇಲ್, ಜಯಂತ್ ಯಾದವ್(6) ವಿಕೆಟ್ ಕಬಳಿಸುವುದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ತೀರ್ಮಾನ ತೆಗೆದುಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.