ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಇದಾದ ಬಳಿಕ 2021ರ ಫೆಬ್ರವರಿ ವೇಳೆಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಇದೇ ವೇಳೆ ಐಪಿಎಲ್ ಟೂರ್ನಿ ನಡೆಯುವುದು ಯಾವಾಗ ಎನ್ನುವ ಸುಳಿವನ್ನು ದಾದಾ ಬಿಟ್ಟುಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.24): ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಏಪ್ರಿಲ್ನಲ್ಲಿ ಐಪಿಎಲ್ ನಡೆಯುವುದಾಗಿಯೂ ತಿಳಿಸಿದ್ದಾರೆ.
ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಸರಣಿಯನ್ನು ಮುಂದೂಡಲಾಗಿದೆ. ಪ್ರವಾಸದಲ್ಲಿ ಇಂಗ್ಲೆಂಡ್ 5 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಸರಣಿಗಳನ್ನು ಆಡಲಿದೆ.
IPL ಹಲವರ ಜೀವನದ ದಾರಿ; ಟೀಕೆಗೆ ತಿರುಗೇಟು ನೀಡಿದ ಗವಾಸ್ಕರ್!
‘ಬಿಸಿಸಿಐ ಹಾಗೂ ಭಾರತ ತಂಡ ದ್ವಿಪಕ್ಷೀಯ ಸರಣಿಗಳನ್ನು ಆಡಲು ಬದ್ಧವಿದೆ. ಈ ವರ್ಷ ಡಿಸೆಂಬರ್ನಲ್ಲಿ ತಂಡ ಆಸ್ಪ್ರೇಲಿಯಾಗೆ ತೆರಳಲಿದ್ದು, 2021ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಏಪ್ರಿಲ್ನಲ್ಲಿ ಐಪಿಎಲ್ ನಡೆಯಲಿದೆ. 2021ರ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್ಗೂ ಸಿದ್ಧತೆ ಆರಂಭಿಸಬೇಕಿದೆ’ ಎಂದು ಗಂಗೂಲಿ, ರಾಜ್ಯ ಸಂಸ್ಥೆಗಳಿಗೆ ಬರೆದಿರುವ ಇ-ಮೇಲ್ನಲ್ಲಿ ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಬರೋಬ್ಬರಿ ಒಂದು ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ಸರಣಿಗೆ ಆತಿಥ್ಯ ವಹಿಸಿದಂತಾಗುತ್ತದೆ. ಈ ಹಿಂದೆ 2020ರ ಜನವರಿಯಲ್ಲಿ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂರ್ಣ ಪ್ರಮಾಣದ ಏಕದಿನ ಸರಣಿ ಆಡಿತ್ತು.