20 ವರ್ಷಗಳ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಆಸೀಸ್ ಸ್ಟಾರ್ ಆಲ್ರೌಂಡರ್..!

By Naveen KodaseFirst Published Aug 21, 2020, 5:28 PM IST
Highlights

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಲ್ರೌಂಡರ್ ಕ್ಯಾಮರೋನ್ ವೈಟ್ ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮೆಲ್ಬೊರ್ನ್(ಆ.21): ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಕ್ಯಾಮರೋನ್ ವೈಟ್ ಶುಕ್ರವಾರ(ಆ.21) ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ ಸುಮಾರು ಎರಡು ದಶಕಗಳ ಕ್ರಿಕೆಟ್ ಕೆರಿಯರ್‌ಗೆ ಅಧಿಕೃತವಾಗಿ ವೈಟ್ ತೆರೆ ಎಳೆದಿದ್ದಾರೆ.

37 ವರ್ಷದ ಕ್ಯಾಮರೋನ್ ವೈಟ್ ಆಸ್ಟ್ರೇಲಿಯಾ ಪರ 4 ಟೆಸ್ಟ್, 91 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 7 ಬಾರಿ ಕಾಂಗರೂ ಪಡೆಯನ್ನು ಮುನ್ನಡೆಸಿದ್ದಾರೆ. ಇದೀಗ ಕೋಚಿಂಗ್‌ನತ್ತ ಗಮನ ಹರಿಸುವ ಉದ್ದೇಶದಿಂದ ಸ್ಫರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿರುವುದಾಗಿ ಹೇಳಿದ್ದಾರೆ.

ನಾನು ಅಡಿಲೇಡ್ ಸ್ಟ್ರೈಕರ್ಸ್‌ನೊಂದಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಂಡಿದ್ದೆ. ನಾನು ನಿವೃತ್ತಿ ಪಡೆಯುವ ಸಮಯ ಬಂದಾಗಿದೆ. ನಾನು ಸರಿಯಾದ ಸಮಯದಲ್ಲೇ ಸ್ಫರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನಿನ್ನು ಕೋಚಿಂಗ್‌ನತ್ತ ಗಮನ ಹರಿಸಬೇಕೆಂದಿದ್ದೇನೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ.ಕಾಂ ವೆಬ್‌ಸೈಟ್‌ಗೆ ತಿಳಿಸಿದ್ದಾರೆಂದು ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ.

ಮುಂಬೈ ಇಂಡಿಯನ್ಸ್‌ಗೆ ಶಾಕ್: ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಲಸಿತ್ ಮಾಲಿಂಗ..!

ಆಸ್ಟ್ರೇಲಿಯಾ ದೇಸಿ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ಯಾಮರೋನ್ ವೈಟ್, ಕಳೆದ ಸೀಸನ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್ ಪರ 6 ಪಂದ್ಯಗಳನ್ನಾಡಿದ್ದರು. ಕ್ಯಾಮರೋನ್ ವೈಟ್ ದೇಸಿ ಕ್ರಿಕೆಟ್‌ನ 10 ಚಾಂಪಿಯನ್ ಪಟ್ಟಕ್ಕೇರಿದ ಸದಸ್ಯ ಆಟಗಾರನಾಗಿದ್ದಾರೆ. ಈ ಪೈಕಿ 6 ಶೆಫಲ್ಡ್ ಶೀಲ್ಡ್ಸ್, ದೇಸಿ ಏಕದಿನ ಟೂರ್ನಿ ಚಾಂಪಿಯನ್, ಎರಡು ಟಿ20 ಲೀಗ್ ಚಾಂಪಿಯನ್ ಹಾಗೂ ಒಂದು ಬಾರಿ ಬಿಗ್‌ ಬ್ಯಾಷ್ ಲೀಗ್ ಚಾಂಪಿಯನ್ ತಂಡದ ಸದಸ್ಯರಾಗಿದ್ದಾರೆ.

ಇನ್ನು ಐಪಿಎಲ್ ಟೂರ್ನಿಯಲ್ಲಿ ಕ್ಯಾಮರೋನ್ ವೈಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.
 

click me!