ಭಾರತ ಹಾಗೂ ಬಾಂಗ್ಲದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಸೌರವ್ ಗಂಗೂಲಿಯ ಶ್ರಮದಿಂದಾಗಿ ಟೀಂ ಇಂಡಿಯಾ ಚೊಚ್ಚಲ ಹಗಲು ರಾತ್ರಿಯ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಟೆಸ್ಟ್ ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕೋಲ್ಕತಾ(ಅ.30): ಭಾರತ ಕ್ರಿಕೆಟ್ ತಂಡ, ಮುಂದಿನ ತಿಂಗಳು ತನ್ನ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ತಂಡ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನವೆಂಬರ್ 22ರಿಂದ ನಡೆಯಲಿರುವ 2ನೇ ಪಂದ್ಯವನ್ನು ಹಗಲು-ರಾತ್ರಿ ಮಾದರಿಯಲ್ಲಿ ಆಡಲು ಒಪ್ಪಿಗೆ ಸೂಚಿಸಿದೆ. ಮಂಗಳವಾರ ಸಂಜೆ ಸೌರವ್ ಗಂಗೂಲಿ ಈ ವಿಷಯವನ್ನು ಬಹಿರಂಗಪಡಿಸಿದರು. ಬಿಸಿಸಿಐ ಅಧ್ಯಕ್ಷರಾದ ಒಂದೇ ವಾರದಲ್ಲಿ ಗಂಗೂಲಿ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗಂಗೂಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಂದೆ ಹೊನಲು-ಬೆಳಕಿನ ಪಂದ್ಯದ ಪ್ರಸ್ತಾಪವನ್ನಿರಿಸಿದ್ದರು. ಆಟಗಾರರಿಂದ ವಿರೋಧ ವ್ಯಕ್ತವಾದರೂ ಹಲವು ಸಭೆಗಳ ಬಳಿಕ ಅವರ ಮನವೊಲಿಸಲು ಬಿಸಿಬಿ ಮುಖ್ಯಸ್ಥರು ಯಶಸ್ವಿಯಾಗಿದ್ದಾರೆ.
‘ಬಾಂಗ್ಲಾ ಕ್ರಿಕೆಟ್ ಮಂಡಳಿ ಖಚಿತ ಪಡಿಸಿದೆ. ನಾವು ಪಿಂಕ್ ಬಾಲ್ ಪಂದ್ಯಕ್ಕೆ ವೇದಿಕೆ ಒದಗಿಸಲಿದ್ದೇವೆ. ಇದೊಂದು ಅದ್ಭುತ ಬೆಳವಣಿಗೆ. ಟೆಸ್ಟ್ ಕ್ರಿಕೆಟ್‌ಗೆ ಈ ರೀತಿಯ ಬೆಂಬಲದ ಅವಶ್ಯಕತೆ ಇದೆ. ನಾನು ಹಾಗೂ ನನ್ನ ತಂಡ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪಣತೊಟ್ಟಿದ್ದೆವು. ವಿರಾಟ್ ಕೊಹ್ಲಿಗೆ ಧನ್ಯವಾದ. ಅವರು ಒಪ್ಪಿಕೊಂಡಿದ್ದರಿಂದಲೇ ಇದು ಸಾಧ್ಯವಾಯಿತು’ ಎಂದು ಮಂಗಳವಾರ ಗಂಗೂಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!
ಬಾಂಗ್ಲಾದೇಶದ ಕೋಚ್ ರಸೆಲ್ ಡೊಮಿನ್ಗೊ, ಢಾಕಾದಲ್ಲಿ ಮಾತನಾಡಿ ‘ಪಂದ್ಯ ಹೇಗೆ ಸಾಗಲಿದೆ ಎನ್ನುವ ಬಗ್ಗೆ ಆತಂಕವಿದೆ. ಆದರೆ ಬದಲಾವಣೆಯನ್ನು ಒಪ್ಪಿಕೊಳ್ಳಲು ತಂಡ ಸಿದ್ಧವಿದೆ. ಹೊಸ ಪ್ರಯೋಗಗಳನ್ನು ತಂಡ ಸ್ವಾಗತಿಸುತ್ತದೆ. ಭಾರತ ಸಹ ಹೊನಲು-ಬೆಳಕಿನ ಟೆಸ್ಟ್ ಆಡಿಲ್ಲ. ಈಡನ್ ಗಾರ್ಡನ್ಸ್‌ನಲ್ಲಿ ವಿಶ್ವದ ನಂ.1 ತಂಡದ ವಿರುದ್ಧ ಆಡುವುದು ಅಮೋಘ ಅನುಭವ’ ಎಂದರು.
ಮಧ್ಯಾಹ್ನ 2ಕ್ಕೆ ಆರಂಭ: ಕೋಲ್ಕತಾ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, ಚಹಾ ಹಾಗೂ ರಾತ್ರಿ ಭೋಜನ ವಿರಾಮಗಳನ್ನು ಒಳಗೊಂಡಿರಲಿದೆ. ರಾತ್ರಿ 9 ಗಂಟೆ ವೇಳೆಗೆ ದಿನದಾಟ ಮುಕ್ತಾಯಗೊಳ್ಳಲಿದೆ. ಪಂದ್ಯಕ್ಕೆ ಸಾಂಪ್ರದಾಯಿಕ ಕೆಂಪು ಚಂಡಿನ ಬದಲಿಗೆ ಪಿಂಕ್ (ಗುಲಾಬಿ) ಬಾಲ್ ಬಳಕೆ ಮಾಡಲಾಗುತ್ತದೆ.
ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!
ಗಂಗೂಲಿ ಕಟ್ಟಿದ ಕನಸು!
ಭಾರತದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಆಯೋಜಿಸುವಲ್ಲಿ ಗಂಗೂಲಿ ಪಾತ್ರ ಮಹತ್ವದೆನಿಸಿದೆ. 2016ರಲ್ಲಿ ಅವರು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರಾಗಿದ್ದಾಗ ಮೋಹನ್ ಬಗಾನ್ ಹಾಗೂ ಭೋವಾನಿಪೋರ್ ತಂಡಗಳ ನಡುವಿನ ಸಿಎಬಿ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೆ ಪಿಂಕ್ ಬಾಲ್ ಬಳಕೆಯಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರಾದ ವೃದ್ಧಿಮಾನ್ ಸಾಹ ಹಾಗೂ ಮೊಹಮದ್ ಶಮಿ ಆಡಿದ್ದರು. ಈ ಇಬ್ಬರೂ ಭಾರತ ತಂಡದ ಚೊಚ್ಚಲ ಪಿಂಕ್ ಬಾಲ್ ಪಂದ್ಯದಲ್ಲೂ ಆಡುವ ನಿರೀಕ್ಷೆ ಇದೆ. ಅದೇ ವರ್ಷ ಬಿಸಿಸಿಐ, ದುಲೀಪ್ ಟ್ರೋಫಿಯನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಿತ್ತು. ಪ್ರಸಾರ ಹಕ್ಕು ಹೊಂದಿರುವ ವಾಹಿನಿ ನಿರಾಸಕ್ತಿ ತೋರಿದ್ದರಿಂದ ಹಾಗೂ ಚೆಂಡಿನ ಗುಣಮಟ್ಟದ ಬಗ್ಗೆ ಆಟಗಾರರು ಅಸಮಾಧಾನ ತೋರಿದ್ದರಿಂದ ಈ ವರ್ಷ ಪಿಂಕ್ ಬಾಲ್ ಪಂದ್ಯಗಳನ್ನು ಕೈಬಿಡಲಾಯಿತು. ಸದ್ಯ ಭಾರತ ತಂಡದಲ್ಲಿರುವ ಮಯಾಂಕ್ ಅಗರ್‌ವಾಲ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ ಪಿಂಕ್ ಬಾಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಕೋಲ್ಕತಾದಲ್ಲಿ ಪ್ರತಿ ವರ್ಷ ಪಂದ್ಯ?
ಕ್ರಿಕೆಟ್ ಆಸ್ಪ್ರೇಲಿಯಾ ಆಯೋಜಿಸುವಂತೆ ಭಾರತದಲ್ಲೂ ಪ್ರತಿ ವರ್ಷ ಹಗಲು-ರಾತ್ರಿ ಟೆಸ್ಟ್ ನಡೆಸಬೇಕು ಎನ್ನುವುದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಕನಸಾಗಿದ್ದು, ಕೋಲ್ಕತಾವನ್ನೇ ಆತಿಥ್ಯ ತಾಣವಾಗಿ ನಿಗದಿಪಡಿಸಲು ಮುಂದಾಗಿದ್ದಾರೆ. ಆಸ್ಪ್ರೇಲಿಯಾ ತಂಡ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಲು ಪಿಂಕ್ ಬಾಲ್ ಪಂದ್ಯವನ್ನು ಬಳಸಿಕೊಳ್ಳಲಿದೆ. ಅದೇ ರೀತಿ ಯಾವುದಾದರೂ ಸದುದ್ದೇಶದೊಂದಿಗೆ ಪಂದ್ಯ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪಿಂಕ್ ಬಾಲ್ ಪೂರೈಕೆ ಬಿಸಿಸಿಐಗೆ ಸವಾಲು?
ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಪಿಂಕ್ ಬಾಲ್ ಹೊಂದಿಸುವುದೇ ಬಿಸಿಸಿಐ ಮುಂದಿರುವ ಸವಾಲೆನಿಸಿದೆ. ಭಾರತದಲ್ಲಿ ಬಳಕೆಯಾಗುವ ಎಸ್‌ಜಿ ಚೆಂಡಿನ ಗುಣಮಟ್ಟದ ಬಗ್ಗೆ ಆಟಗಾರರು ಪದೇ ಪದೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಸ್ಪ್ರೇಲಿಯಾದಿಂದ ಕೂಕಬುರ್ರಾ ಚೆಂಡನ್ನು ತರಿಸಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಲಿದೆ. ತಂಡಗಳ ಅಭ್ಯಾಸ ಹಾಗೂ ಪಂದ್ಯಕ್ಕೆ ಕನಿಷ್ಠ 24 ಚೆಂಡುಗಳ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಂದ್ಯದ ಮಧ್ಯ ಚೆಂಡು ಬದಲಿಸಬೇಕಾದರೆ, ಆಟ ಎಷ್ಟುಓವರ್ ನಡೆದಿರುತ್ತದೆಯೋ ಅಷ್ಟೇ ಓವರ್ಗಳಿಗೆ ಬಳಕೆಯಾಗಿರುವ ಚೆಂಡನ್ನೇ ಅಂಪೈರ್‌ಗಳು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಚೆಂಡುಗಳನ್ನು ಸಂಗ್ರಹಿಸಿಡುವುದು ಸವಾಲಾಗಿ ಪರಿಣಮಿಸಲಿದೆ.
ಪಿಂಕ್ ಬಾಲ್ ಬಳಕೆ ಶುರುವಾಗಿದ್ದು ಹೇಗೆ?
ಟೆಸ್ಟ್ ಕ್ರಿಕೆಟ್ ಅನ್ನು ಮತ್ತಷ್ಟುಜನಪ್ರಿಯಗೊಳಿಸಲು ಹಗಲು-ರಾತ್ರಿ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದಾಗ ಕೆಂಪು ಚೆಂಡಿನ ಬಳಕೆ ಕಷ್ಟ ಎನ್ನುವ ಅಭಿಪ್ರಾಯಗಳು ಮೂಡಿದವು. ಹೀಗಾಗಿ ಚೆಂಡು ತಯಾರಕ ಸಂಸ್ಥೆಗಳು ಹಳದಿ, ಕಿತ್ತಳೆ ಬಣ್ಣದ ಚೆಂಡುಗಳನ್ನು ಪರಿಚಯಿಸಿದವು. ಆದರೆ ಪಿಚ್ ಕಂದು ಬಣ್ಣವಿರುವ ಕಾರಣ, ಚೆಂಡು ಸರಿಯಾಗಿ ಕಾಣುವುದಿಲ್ಲ ಎಂದು ಬ್ಯಾಟ್ಸ್‌ಮನ್‌ಗಳು ಹೇಳಿದ ಕಾರಣ, ಕೊನೆಗೆ ಗುಲಾಬಿ (ಪಿಂಕ್) ಬಣ್ಣದ ಚೆಂಡನ್ನು ಪರಿಚಯಿಸಲಾಯಿತು. ಈ ಚೆಂಡಿನ ಮೇಲಿನ ಸೀಮ್ (ದಾರ) ಮೊದಲು ಹಸಿರು ಬಣ್ಣದಲ್ಲಿತ್ತು. ಬಳಿಕ ಬಿಳಿಗೆ ಬದಲಿಸಲಾಯಿತು. ಆಟಗಾರರ ಸಲಹೆ ಮೇರೆಗೆ ಈಗ ಕಪ್ಪು ಬಣ್ಣದ ದಾರವನ್ನು ಬಳಕೆ ಮಾಡಲಾಗುತ್ತಿದೆ. 2015ರ ನವೆಂಬರ್‌ನಲ್ಲಿ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಿತು. ಇದು ವರೆಗೂ ಒಟ್ಟು 11 ಪಂದ್ಯಗಳು ನಡೆದಿವೆ. ಎಲ್ಲಾ 11 ಪಂದ್ಯಗಳು ಫಲಿತಾಂಶ ನೀಡಿವೆ.
ಇಷ್ಟುದಿನ ಭಾರತ ಏಕೆ ಒಪ್ಪಿರಲಿಲ್ಲ?
ಭಾರತೀಯರು ಪಿಂಕ್ ಬಾಲ್ ಟೆಸ್ಟ್ ಅನ್ನು ವಿರೋಧಿಸಲು ಹಲವು ಕಾರಣಗಳಿವೆ. ಚೆಂಡಿನ ಗೋಚರತೆಯಲ್ಲಿ ಸಮಸ್ಯೆಗಳಿದ್ದವು. 2016ರ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಪೂಜಾರ, ಮಯಾಂಕ್ ಸೇರಿದಂತೆ ಅನೇಕ ಆಟಗಾರರು ಧನಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ. ಚೆಂಡು ವೇಗಿಗಳಿಗೆ ಯಾವುದೇ ರೀತಿಯಲ್ಲಿ ಸಹಕಾರ ಕೊಟ್ಟಿರಲಿಲ್ಲ. ಆರಂಭಿಕ 20 ಓವರ್‌ಗಳ ಬಳಿಕ ಚೆಂಡಿನ ಆಕಾರ ಗಣನೀಯ ಪ್ರಮಾಣದಲ್ಲಿ ಬದಲಾಗಿತ್ತು. ರಿವರ್ಸ್ ಸ್ವಿಂಗ್ ಸಾಧ್ಯವಾಗಿರಲಿಲ್ಲ. ಚೆಂಡು ಬಣ್ಣ ಬಿಡಲಿದ್ದು, ಬೆಳಕಿನಲ್ಲಿ ಸರಿಯಾಗಿ ಕಾಣುವುದಿಲ್ಲ ಎಂದು ಆಟಗಾರರು ತಿಳಿಸಿದ್ದರು. ಹೀಗಾಗಿ ಬಿಸಿಸಿಐ ಹಗಲು-ರಾತ್ರಿ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕಳೆದ ವರ್ಷ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಕ್ರಿಕೆಟ್ ಆಸ್ಪ್ರೇಲಿಯಾದ ಮನವಿಯನ್ನು ಬಿಸಿಸಿಐ ಒಪ್ಪಿರಲಿಲ್ಲ.