ಬಾಂಗ್ಲಾದೇಶ ತಂಡದ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮೇಲೆ ಐಸಿಸಿ 2 ವರ್ಷಗಳ ಕಾಲ ನಿಷೇಧ ಹೇರಿದೆ. ಹೀಗಾಗಿ ಭಾರತ ಪ್ರವಾಸ, ಐಪಿಎಲ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಶಕೀಬ್ ವಂಚಿತರಾಗಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ಢಾಕಾ(ಅ.30): ಬಾಂಗ್ಲಾದೇಶ ಟೆಸ್ಟ್ ಹಾಗೂ ಟಿ20 ತಂಡದ ನಾಯಕ, ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಆಲ್ರೌಂಡರ್ ಶಕೀಬ್ ಅಲ್ ಹಸನ್ ಬುಕ್ಕಿಗಳನ್ನು ತಮ್ಮನ್ನು ಸಂಪರ್ಕಿಸಿದ ವಿಚಾರವನ್ನು ಮುಚ್ಚಿಟ್ಟ ಕಾರಣ, ಅವರನ್ನು ಐಸಿಸಿ 2 ವರ್ಷಗಳಿಗೆ ನಿಷೇಧಿಸಿದೆ. ಭಾರತದ ಶಂಕಾಸ್ಪದ ಬುಕ್ಕಿ ದೀಪಕ್ ಅಗರ್‌ವಾಲ್ ಐಪಿಎಲ್ ಸೇರಿದಂತೆ 3 ಬಾರಿ ಸಂಪರ್ಕಿಸಿ, ತಂಡದ ಆಂತರಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದರೂ, ಶಕೀಬ್ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತಂದಿರಲಿಲ್ಲ. ಇದು ಐಸಿಸಿಯ ನಿಯಮ ಉಲ್ಲಂಘನೆಯಾಗಿದ್ದು, ತಾರಾ ಆಲ್ರೌಂಡರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಶಕೀಬ್ ಐಸಿಸಿಯ ಭ್ರಷ್ಟಾಚಾರ ತಡೆ ನಿಯಮವನ್ನು ಪಾಲಿಸಿದರೆ ಅವರ ನಿಷೇಧ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗುತ್ತದೆ. ಅ.29, 2020ರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಬಹುದು ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ಹೀಗಾಗಿ ಕನಿಷ್ಠ 1 ವರ್ಷ ಶಕೀಬ್ ಎಲ್ಲಾ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿರಬೇಕಿದೆ. ಅಲ್ಲದೇ ಐಸಿಸಿ ಆಯೋಜಿಸುವ ಕಾರ್ಯಾಗಾರ, ತರಬೇತಿ ಶಿಬಿರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ.
undefined
ಬುಕ್ಕಿಗಳ ಮಾಹಿತಿ ಗೌಪ್ಯವಾಗಿಟ್ಟ ಶಕೀಬ್; ICCಯಿಂದ ನಿಷೇಧದ ಭೀತಿ!
ಆಗಿದ್ದೇನು?
2017ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಬುಕ್ಕಿ ಅಗರ್‌ವಾಲ್, ಶಕೀಬ್‌ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದು ತಂಡದ ಆಂತರಿಕ ವಿಚಾರಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾನೆ. ಈ ಘಟನೆಯನ್ನು ಶಕೀಬ್, ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಿಳಿಸಿಲ್ಲ. ಬಳಿಕ 2018ರ ಬಾಂಗ್ಲಾ, ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿ, 2018ರ ಏ.26ರಂದು ಸನ್ರೈಸರ್ಸ್-ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಪಂದ್ಯದ ವೇಳೆ ಬುಕ್ಕಿ ಅಗರ್‌ವಾಲ್ ಮತ್ತೊಮ್ಮೆ ಸಂಪರ್ಕಿಸಿದ್ದಾನೆ. ಆದರೂ ಶಕೀಬ್, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ರವಾನಿಸಿಲ್ಲ.
2019ರ ಜ. 23 ಹಾಗೂ ಆ.27ರಂದು ಐಸಿಸಿ ವಿಚಾರಣೆಗೆ ಶಕೀಬ್ ಹಾಜರಾಗಿದ್ದರು. ಆ ಸಂದರ್ಭದಲ್ಲಿ ತಾವು ನೀಡಿದ ಮಾಹಿತಿ ತಪ್ಪಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದಾಗ ಶಕೀಬ್, ದೀಪಕ್ ಅಗರ್‌ವಾಲ್ ಎನ್ನುವ ಬುಕ್ಕಿ ತಮ್ಮನ್ನು 3 ಬಾರಿ ಸಂಪರ್ಕಿಸಿದ ವಿಷಯವನ್ನು ಮುಚ್ಚಿಟ್ಟದ್ದಾಗಿ ತಪ್ಪೊಪ್ಪಿಕೊಂಡರು. ಜತೆಗೆ ತಾವು ಯಾವುದೇ ಮಾಹಿತಿ ನೀಡಿಲ್ಲ, ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಕೀಬ್ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಐಸಿಸಿ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಪ್ರವಾಸದಿಂದ ಔಟ್!
ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಟಿ20 ಹಾಗೂ ಟೆಸ್ಟ್ ಸರಣಿಯಿಂದ ಶಕೀಬ್ ಹೊರಬಿದ್ದಿದ್ದಾರೆ. ಅವರ ಬದಲಿಗೆ ಟೆಸ್ಟ್ ತಂಡಕ್ಕೆ ಮೊಮಿನುಲ್ ಹಕ್ ಹಾಗೂ ಟಿ20 ತಂಡಕ್ಕೆ ಮಹಮದ್ದುಲ್ಲಾರನ್ನು ನಾಯಕರನ್ನಾಗಿ ನೇಮಿಸಲಾಗಿದೆ. 2020ರ ಐಪಿಎಲ್ ಹಾಗೂ ಅ.18ರಿಂದ ನ.15ರ ವರೆಗೂ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದಲೂ ಶಕೀಬ್ ಹೊರಗುಳಿಯಲಿದ್ದಾರೆ.
ನಾನು ಪ್ರೀತಿಸುವ ಕ್ರೀಡೆಯಿಂದ ನಿಷೇಧಕ್ಕೊಳಗಾಗಿರುವುದಕ್ಕೆ ತುಂಬಾ ನೋವಾಗಿದೆ. ಆದರೆ ನಾನು ಐಸಿಸಿ ನೀಡಿರುವ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತೇನೆ. ಕ್ರಿಕೆಟ್ ಆಟವನ್ನು ಭ್ರಷ್ಟಾಚಾರದಿಂದ ದೂರವಿಡಲು ಐಸಿಸಿ, ಆಟಗಾರರ ಮೇಲೆ ಅವಲಂಬಿತಗೊಂಡಿದೆ. ಆದರೆ ನಾನು ನನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲ.
- ಶಕೀಬ್-ಅಲ್ ಹಸನ್, ನಿಷೇಧಿತ ಬಾಂಗ್ಲಾ ಕ್ರಿಕೆಟಿಗ