
ಧರ್ಮಶಾಲಾ (ಫೆ.27): ಸತತ ಮೂರನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ (Shreyas Iyer) ಬಾರಿಸಿದ ಆಕರ್ಷಕ ಅರ್ಧಶತಕದ (Half Century) ನೆರವಿನಿಂದ ಟೀಂ ಇಂಡಿಯಾ (Team India) ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ (Sri Lanka) ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನ 3-0ಯಿಂದ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ (Clean Sweep) ಸಾಧನೆ ಮಾಡಿದೆ.
ಟಿ20 ವಿಶ್ವಕಪ್ ನಲ್ಲಿ ನಿರಾಶಾದಾಯಕ ನಿರ್ವಹಣೆಯ ಬಳಿಕ ಟೀಮ್ ಇಂಡಿಯಾ ರೋಹಿತ್ ಶರ್ಮ ನೇತೃತ್ವದಲ್ಲಿ ಅದ್ಭುತ ನಿರ್ವಹಣೆ ತೋರಿದೆ. ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ತವರಿನಲ್ಲಿ ನಡೆದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಆ ಬಳಿಕ ವೆಸ್ಟ್ ಇಂಡೀಸ್ ತಂಡದ ವಿರುದ್ಧವೂ ಇದೇ ಅಂತರದ ಗೆಲುವು ದಾಖಲಿಸಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತ್ತು. ಈಗ ಶ್ರೀಲಂಕಾ ವಿರುದ್ಧ ಮತ್ತೊಮ್ಮೆ ಸರಣಿ ಜಯ ಸಾಧಿಸುವ ಮೂಲಕ ನಂ.1 ಸ್ಥಾನದಲ್ಲಿಯೇ ಮುಂದುವರಿಯಲಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ನಾಯಕ ದಸನ್ ಶನಕ (74ರನ್, 38 ಎಸೆತ, 9 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ 5 ವಿಕೆಟ್ ಗೆ 146 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಆದರೆ, ಬಲಿಷ್ಠ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗಕ್ಕೆ ಇದು ಸವಾಲಾಗಲೇ ಇಲ್ಲ. ಶ್ರೇಯಸ್ ಅಯ್ಯರ್ (73*ರನ್, 45 ಎಸೆತ, 9 ಬೌಂಡರಿ, 1 ಸಿಕ್ಸರ್) ನೆರವಿನಿಂದ 16.5 ಓವರ್ ಗಳಲ್ಲಿ 4 ವಿಕೆಟ್ ಗೆ 148 ರನ್ ಬಾರಿಸಿ ಗೆಲುವು ಕಂಡಿತು.
ಇದು ಟಿ20 ಕ್ರಿಕೆಟ್ ನಲ್ಲಿ ಭಾರತದ ಸತತ 12ನೇ ಗೆಲುವು ಎನಿಸಿದೆ. ಆ ಮೂಲಕ ಸತತವಾಗಿ ಗರಿಷ್ಠ ಅಂತಾರಾಷ್ಟ್ರೀಯ ಟಿ20 (International T20) ಪಂದ್ಯಗಳಲ್ಲಿ ಗೆಲುವು ಸಾಧಿಸಿದ ದಾಖಲೆಯನ್ನು ಭಾರತ ಸರಿಗಟ್ಟಿದಂತಾಗಿದೆ. ಆ ಮೂಲಕ ಸತತ 12 ಟಿ20 ಗೆಲುವಿನ ವಿಶ್ವದಾಖಲೆ ಹೊಂದಿರುವ ಅಫ್ಘಾನಿಸ್ತಾನ (Afghanistan) ತಂಡದ ದಾಖಲೆಯನ್ನು ಭಾರತ ಸಮಗೊಳಿಸಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 57, 74 ಹಾಗೂ 73 ರನ್ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಇಡೀ ಸರಣಿಯಲ್ಲಿ 204 ರನ್ ಬಾರಿಸಿದ ಶ್ರೇಯಸ್ ಅಯ್ಯರ್ ಏಕಾಂಗಿಯಾಗಿ ಶ್ರೀಲಂಕಾ ತಂಡವನ್ನು ಸರಣಿಯಲ್ಲಿ ಬಗ್ಗುಬಡಿದರು.
IND vs SL T20: ಶ್ರೇಯಸ್ ಅಯ್ಯರ್ ಸೂಪರ್ ಬ್ಯಾಟಿಂಗ್, ಸರಣಿ ಗೆದ್ದ ಭಾರತ!
ಶ್ರೀಲಂಕಾ ತಂಡ ನೀಡಿದ ಗುರಿ ಭಾರತ ತಂಡಕ್ಕೆ ಸವಾಲಿನದಾಗಿರಲಿಲ್ಲ. ದುಷ್ಮಂತ ಚಾಮೀರ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಮೇಲೆ ತಮ್ಮ ಪ್ರಾಬಲ್ಯವನ್ನು ಮತ್ತೆ ಮುಂದುವರಿಸಿದರು. ಟಿ20 ಮಾದರಿಯಲ್ಲಿ ರೋಹಿತ್ ಗೆ ಎಸೆದ 30 ಎಸೆತಗಳ ಪೈಕಿ 6ನೇ ಬಾರಿಗೆ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಇಶಾನ್ ಕಿಶನ್ ಗ ವಿಶ್ರಾಂತಿ ನೀಡಿದ್ದರಿಂದ ಅವರು ಬದಲು ರೋಹಿತ್ ಜೊತೆ ಆರಂಭಿಕರಾಗಿ ಆಡಲಿಳಿದ ಸಂಜು ಸ್ಯಾಮ್ಸನ್ (18) ಅಲ್ಪ ಮೊತ್ತಕ್ಕೆ ಔಟಾದರು. ಆ ನಂತರ ಶ್ರೇಯಸ್ ಅಯ್ಯರ್ ಗೆ ಜೊತೆಯಾದ ದೀಪಕ್ ಹೂಡಾ (21) 3ನೇ ವಿಕೆಟ್ ಗೆ 38 ರನ್ ಜೊತೆಯಾಟವಾಡಿ ಬೇರ್ಪಟ್ಟರು. ದೀಪಕ್ ಹೂಡಾ (Deepak Hooda)ನಿರ್ಗಮನದ ಬಳಿಕ ವೆಂಕಟೇಶ್ ಅಯ್ಯರ್ (5) ಅವರಿಂದ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಕೊನೆಗೆ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ 4ನೇ ವಿಕೆಟ್ ಗೆ 45 ರನ್ ಜೊತೆಯಾಟವಾಡಿ ತಂಡವನ್ನು ಗೆಲುವು ದಡ ಸೇರಿಸಿದರು. ರವೀಂದ್ರ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ ಇದ್ದ 22 ರನ್ ಸಿಡಿಸುವ ಮೂಲಕ ಗಮನಸೆಳೆದರು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪೈಕಿ ದಸನ್ ಶನಕ (Dasun Shanaka) ಹೊರತುಪಡಿಸಿ ಉಳಿದವರಿಂದ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಅನುಭವಿ ವಿಕೆಟ್ ಕೀಪರ್ ದಿನೇಶ್ ಚಾಂಡಿಮಲ್ ಪರದಾಡುತ್ತಾ 27 ಎಸೆತಗಳಲ್ಲಿ 22 ರನ್ ಬಾರಿಸಿದರೆ, ಚಾಮಿಕಾ ಕರುಣರತ್ನೆ 19 ಎಸೆತಗಳಲ್ಲಿ 12 ರನ್ ಸಿಡಿಸಿದರು. ಉಳಿದಂತೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ನೀಡಿದ್ದರು. ಭಾರತದ ಪರವಾಗಿ ಆವೇಶ್ ಖಾನ್ 2 ವಿಕೆಟ್ ಉರುಳಿಸಿ ಗಮನಸೆಳೆದರು.
Ind vs SL : ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಜಯ
ಶ್ರೀಲಂಕಾ: 5 ವಿಕೆಟ್ ಗೆ 146 (ನಿಸ್ಸಂಕಾ 1, ಗುಣತಿಲಕ 0, ಅಸಲಂಕಾ 4, ಜನಿತ್ 9, ಚಾಂಡಿಮಲ್ 22, ಶನಕ 74*, ಕರುಣರತ್ನೆ 12*, ಆವೇಶ್ ಖಾನ್ 23ಕ್ಕೆ 2, ಸಿರಾಜ್ 22ಕ್ಕೆ 1, ಹರ್ಷಲ್ ಪಟೇಲ್ 29ಕ್ಕೆ 1, ರವಿ ಬಿಷ್ಣೋಯಿ 32ಕ್ಕೆ 1), ಭಾರತ: 16.5 ಓವರ್ ಗಳಲ್ಲಿ 4 ವಿಕೆಟ್ ಗೆ 148 (ಸಂಜು ಸ್ಯಾಮ್ಸನ್ 18, ರೋಹಿತ್ ಶರ್ಮ 5, ಶ್ರೇಯಸ್ ಅಯ್ಯರ್ 73*, ದೀಪಕ್ ಹೂಡಾ 21, ವೆಂಕಟೇಶ್ ಅಯ್ಯರ್ 5, ರವೀಂದ್ರ ಜಡೇಜಾ 22*, ಲಹಿರು ಕುಮಾರ 39ಕ್ಕೆ 2, ದುಷ್ಮಂತ ಚಾಮೀರ 19ಕ್ಕೆ 1, ಚಾಮಿಕ ಕರುಣರತ್ನೆ 31ಕ್ಕೆ 1) ಪಂದ್ಯಶ್ರೇಷ್ಠ. ಸರಣಿಶ್ರೇಷ್ಠ: ಶ್ರೇಯಸ್ ಅಯ್ಯರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.