IND vs SL T20: ಶ್ರೇಯಸ್ ಅಯ್ಯರ್ ಸೂಪರ್ ಬ್ಯಾಟಿಂಗ್, ಸರಣಿ ಗೆದ್ದ ಭಾರತ!

Suvarna News   | Asianet News
Published : Feb 26, 2022, 10:32 PM ISTUpdated : Feb 26, 2022, 10:54 PM IST
IND vs SL T20: ಶ್ರೇಯಸ್ ಅಯ್ಯರ್ ಸೂಪರ್ ಬ್ಯಾಟಿಂಗ್, ಸರಣಿ ಗೆದ್ದ ಭಾರತ!

ಸಾರಾಂಶ

2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಶ್ರೇಯಸ್ ಅಯ್ಯರ್ ಸತತ 2ನೇ ಅರ್ಧಶತಕ ಬ್ಯಾಟಿಂಗ್ ನಲ್ಲಿ ಮಿಂಚಿದ ರವೀಂದ್ರ ಜಡೇಜಾ

ಧರ್ಮಶಾಲಾ (ಫೆ. 26): ಬ್ಯಾಟಿಂಗ್ ವಿಭಾಗದಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆದ ಭಾರತ (India) ತಂಡ ಪ್ರವಾಸಿ ಶ್ರೀಲಂಕಾ (Sri Lanka) ವಿರುದ್ಧದ 2ನೇ ಟಿ20 (T20I) ಪಂದ್ಯವನ್ನು 7 ವಿಕೆಟ್ ಗಳಿಂದ ಜಯಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್‌ ಅಯ್ಯರ್ (Shreyas Iyer) ಸತತ 2ನೇ ಪಂದ್ಯದಲ್ಲಿ ಬಾರಿಸಿದ ಅರ್ಧಶತಕ ಹಾಗೂ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಗೆಲುವಿನ ದಡ ಸೇರಿತು.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ( Himachal Pradesh Cricket Association Stadium) ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಪಥುಮ್ ನಿಸ್ಸಾಂಕ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಇನ್ನಿಂಗ್ಸ್ ನ ಕೊನೆಯಲ್ಲಿ ನಾಯಕ ದಸುನ್ ಶನಾಕ (Dasun Shanaka) ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ 5 ವಿಕೆಟ್ ಗೆ 183 ರನ್ ಗಳ ಸವಾಲಿನ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. 

ಆದರೆ, ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗಕ್ಕೆ ಈ ಮೊತ್ತ ಸವಾಲೆನಿಸಲಿಲ್ಲ. ಶ್ರೇಯಸ್ ಅಯ್ಯರ್ (74*ರನ್, 44 ಎಸೆತ, 6 ಬೌಂಡರಿ, 4 ಸಿಕ್ಸರ್)  ಹಾಗೂ ರವೀಂದ್ರ ಜಡೇಜಾ (45*ರನ್, 18 ಎಎಸೆತ, 7 ಬೌಂಡರಿ, 1 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್ ಆಡುವುದರೊಂದಿಗೆ ಭಾರತ ತಂಡ 17.1 ಓವರ್ ಗಳಲ್ಲಿ 3 ವಿಕೆಟ್ ಗೆ 186 ರನ್ ಬಾರಿಸಿ ಗೆಲುವು ಕಂಡಿತು.  ಇದು ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸತತ 11ನೇ ಗೆಲುವು ಎನಿಸಿದ್ದರೆ, ಸತತ 2ನೇ ಸರಣಿ ಗೆಲುವಾಗಿದೆ. 


ಚೇಸಿಂಗ್ ವೇಳೆ ಮೊದಲ 8 ಓವರ್ ಗಳ ಕಾಲ ಶ್ರೀಲಂಕಾ ಪ್ರತಿರೋಧ ಒಡ್ಡಲು ಯಶಸ್ವಿಯಾಗಿತ್ತು. ಆದರೆ, ಪ್ರವೀಣ್ ಜಯವಿಕ್ರಮ ಓವರ್ ನಲ್ಲಿ ಶ್ರೇಯಸ್ ಅಯ್ಯರ್ ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯ ಭಾರತದ ಕಡೆಗೆ ವಾಲಿತು. ಅಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಂ ಇಂಡಿಯಾ ಗೆಲುವಿನ ದಡ ಸೇರುವವರೆಗೂ ಈ ಪಟ್ಟು ಬಿಡಲಿಲ್ಲ. 184 ರನ್ ಗಳನ್ನು ಚೇಸಿಂಗ್ ಮಾಡುವ ವೇಳೆ 17 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿದ್ದು ತಂಡದ ಬಲಾಢ್ಯ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿಯಾಗಿತ್ತು.

Sri Lanka Cricket Squad: ಭಾರತ ವಿರುದ್ಧ ಟೆಸ್ಟ್‌ ಸರಣಿಗೆ ಬಲಿಷ್ಠ ಶ್ರೀಲಂಕಾ ತಂಡ ಪ್ರಕಟ
ಮೊದಲ ಇನ್ನಿಂಗ್ಸ್ ನಂತೆ 2ನೇ ಇನ್ನಿಂಗ್ಸ್ ನಲ್ಲೂ ಹೊಸ ಚೆಂಡಿನಲ್ಲಿ ಸಾಕಷ್ಟು ವೇಗ ಹಾಗೂ ಸ್ವಿಂಗ್ ಕಾಣಸಿಕ್ಕಿತು. ಅದರೊಂದಿಗೆ ದುಷ್ಮಂತ ಚಾಮೀರ ಹಾಗೂ ಲಹಿರು ಕುಮಾರ ಅವರ ವೇಗ ಭಾರತಕ್ಕೆ ಇನ್ನಷ್ಟು ಹಾನಿ ಮಾಡಿದವು. ಕೇವಲ 1 ರನ್ ಬಾರಿಸಿ ನಾತಕ ರೋಹಿತ್ ಶರ್ಮ (Rohit Sharma), ಚಾಮೀರ ಎಸೆತದಲ್ಲಿ ಬೌಲ್ಡ್ ಆದರೆ, ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ ಅನುಭವಿ ಬೌಲರ್ ಗಳ ವೇಗದ ಎಸೆತಗಳ ಮುಂದೆ ಪರದಾಟ ನಡೆಸಿ 15 ಎಸೆತಗಳಲ್ಲಿ 16 ರನ್ ಬಾರಿಸಿದರು. ಒಮ್ಮೆ ಹೆಲ್ಮೆಟ್ ಗೆ ಬಲವಾದ ಏಟು ತಿಂದ ಇಶಾನ್ ಕಿಶನ್ (Ishan Kishan), ಬಹುತೇಕ ಮರು ಎಸೆತದಲ್ಲಿಯೇ ವಿಕೆಟ್ ನೀಡಿ ನಿರ್ಗಮಿಸಿದರು.

ಈ ಹಂತದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ 3ನೇ ವಿಕೆಟ್ ಗೆ 84 ರನ್ ಜೊತೆಯಾಟವಾಡಿದರು. ಶ್ರೇಯಸ್ ಅಯ್ಯರ್ ಬಹಳ ಸರಳವಾಗಿ ಬೌಂಡರಿಗಳನ್ನು ಬಾರಿಸಲು ಯಶಸ್ವಿಯಾದರೆ, ಸಂಜು ಸ್ಯಾಮ್ಸನ್ (36 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಕೂಡ ಇವರಿಗೆ ಉತ್ತಮ ಸಾಥ್ ನೀಡಿದರು. ಈ ವೇಳೆ ಬಿನುರಾ ಹಿಡಿದ ಆಕರ್ಷಕ ಕ್ಯಾಚ್ ಗೆ  ಸಂಜು ಸ್ಯಾಮ್ಸನ್ (Sanju Samson) ವಿಕೆಟ್ ಒಪ್ಪಿಸಿದರೆ, ನಂತರ ಬಂದ ರವೀಂದ್ರ ಜಡೇಜಾ ಶ್ರೀಲಂಕಾ ಬೌಲಿಂಗ್ ಅನ್ನು ಧ್ವಂಸ ಮಾಡಿದರು.

IND vs SL T20 ಧರ್ಮಶಾಲಾದಲ್ಲಿ ಲಂಕಾ ಹೋರಾಟ, ಟೀಂ ಇಂಡಿಯಾಗೆ 184 ರನ್ ಟಾರ್ಗೆಟ್!
ರವೀಂದ್ರ ಜಡೇಜಾ ಬ್ಯಾಟಿಂಗ್ ಗೆ ಇಳಿದ ಹಂತದಲ್ಲೇ ಶ್ರೀಲಂಕಾ ತಂಡದ ಕಳಪೆ ಫೀಲ್ಡಿಂಗ್ ಗೋಚರವಾದವು. ಸಾಕಷ್ಟು ಕ್ಯಾಚ್ ಗಳನ್ನು ಫೀಲ್ಡರ್ ಗಳು ಕೈಚೆಲ್ಲಿದರೆ, ಇದರ ಲಾಭ ಪಡೆದ ಜಡೇಜಾ, ಬೆನ್ನುಬೆನ್ನಿಗೆ ಬೌಂಡರಿಗಳನ್ನು ಬಾರಿಸಿ ಅಬ್ಬರಿಸಿದರು.  ಭಾರತ ತಂಡ ಮೊದಲ 56 ರನ್ ಗಳನ್ನು 48 ಎಸೆತಗಳಲ್ಲಿ ಬಾರಿಸಿದರೆ, ನಂತರದ 130 ರನ್ ಗಳನ್ನು ಕೇವಲ 55 ಎಸೆತಗಳಲ್ಲಿ ಬಾರಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?