ಎಜ್‌ಬಾಸ್ಟನ್‌ನಲ್ಲಿ ನಿಲ್ಲದ ರನ್ ಮಳೆ, ಯಾರ ಪಾಲಾಗುತ್ತೆ ಎರಡನೇ ಟೆಸ್ಟ್?

Published : Jul 05, 2025, 08:44 AM IST
Mohammed Siraj

ಸಾರಾಂಶ

ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ರೋಚಕ ಕದನ ಕಂಡುಬಂದಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಗಿ ಫಾಲೋಆನ್‌ನಿಂದ ಪಾರಾಯಿತು. 

ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್‌ನ ಪಿಚ್ ನಿರೀಕ್ಷೆಯಂತೆಯೇ 'ಹೈವೇ' ರೀತಿ ವರ್ತಿಸುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ಬ್ಯಾಟರ್‌ಗಳು ಹಬ್ಬ ಆಚರಿಸುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 587 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಸಾಧಿಸಿದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನಕ್ಕೆ 1 ವಿಕೆಟ್‌ಗೆ 64 ರನ್ ಗಳಿಸಿ 244 ರನ್ ಮುನ್ನಡೆ ಪಡೆದಿದೆ. ಆತಿಥೇಯರಿಗೆ ದೊಡ್ಡ ಗುರಿ ನೀಡಲು ಹೋರಾಟ ನಡೆಸುತ್ತಿದೆ. ಇದೀಗ ನಾಲ್ಕನೇ ದಿನದಾಟದಲ್ಲಿ ಕನ್ನಡಿಗರಾದ ಕರುಣ್ ನಾಯರ್ ಹಾಗೂ ಕೆ ಎಲ್ ರಾಹುಲ್ ಜತೆಯಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

2ನೇ ದಿನ 77 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ 3ನೇ ದಿನವಾದ ಶುಕ್ರವಾರ ಆರಂಭಿಕ ಆಘಾತ ಎದುರಾಯಿತು. ಜೋ ರೂಟ್ (22) ಹಾಗೂ ಬೆನ್ ಸ್ಟೋಕ್ಸ್ (0)ರನ್ನು ಮೊಹಮ್ಮದ್ ಸಿರಾಜ್ ಸತತ 2 ಎಸೆತಗಳಲ್ಲಿ ಔಟ್ ಮಾಡಿದರು. ಇಂಗ್ಲೆಂಡ್ 85ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

 

ಈ ಹಂತದಲ್ಲಿ ಜೊತೆಯಾದ ಜೇಮಿ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್, ಭಾರತೀಯ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು. ದಿನದಾಟದ ಮೊದಲ ಅವಧಿಯಲ್ಲೇ ಇಂಗ್ಲೆಂಡ್ 172 ರನ್ ಚಚ್ಚಿತು.ಅಲ್ಲದೇ ಸ್ಮಿತ್‌ ಶತಕವನ್ನೂ ಪೂರೈಸಿದರು. 6ನೇ ವಿಕೆಟ್‌ಗೆ ದಾಖಲೆಯ 303 ರನ್ ಸೇರಿಸಿ, ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದರು.

158 ರನ್ ಗಳಿಸಿದ ಬ್ರೂಕ್‌ರನ್ನು ಆಕಾಶ್‌ದೀಪ್ ಬೌಲ್ಡ್ ಮಾಡುತ್ತಿದ್ದಂತೆ, ಭಾರತೀಯ ಪಾಳಯದಲ್ಲಿ ಮತ್ತೆ ಸಂತಸ ಮೂಡಿತು. 387 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 20 ರನ್‌ಗೆ ಕೊನೆ 5 ವಿಕೆಟ್ ನಷ್ಟ ಅನುಭವಿಸಿತು. ಸಿರಾಜ್ 6 ವಿಕೆಟ್ ಕಬಳಿಸಿದರೆ, ಆಕಾಶ್‌ದೀಪ್ 4 ವಿಕೆಟ್ ಉರುಳಿಸಿದರು.

2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ, 8 ಓವರಲ್ಲೇ 50 ರನ್ ತಲುಪಿತು. ಯಶಸ್ವಿ ಜೈಸ್ವಾಲ್ 28 ರನ್ ಗಳಿಸಿ ಔಟಾದರು. ಕೆ.ಎಲ್.ರಾಹುಲ್ ಔಟಾಗದೆ 28, ಕರುಣ್ ನಾಯರ್ ಔಟಾಗದೆ 7 ರನ್ ಗಳಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ.

ಸ್ಕೋರ್:

ಭಾರತ 587 ಹಾಗೂ 64/1 (ರಾಹುಲ್ 28* ಜೈಸ್ವಾಲ್ 28, ಟಂಗ್ 1-7)

ಇಂಗ್ಲೆಂಡ್ 407 (ಸ್ಮಿತ್ 184*, ಬೂಕ್ 158, ಸಿರಾಜ್ 6-70, ಆಕಾಶ್ 4-88)

6 ಮಂದಿ ಡಕೌಟ್‌ ಆದ್ರೂ 400+ ರನ್‌: ದಾಖಲೆ!

ಇಂಗ್ಲೆಂಡ್‌ ಇನ್ನಿಂಗ್ಸಲ್ಲಿ 6 ಬ್ಯಾಟರ್‌ಗಳು ಡಕೌಟ್‌ ಆದರೂ ತಂಡ 407 ರನ್‌ ಕಲೆಹಾಕಿತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ತಂಡವೊಂದು 6 ಬ್ಯಾಟರ್‌ಗಳು ಡಕೌಟ್‌ ಆದಾಗ 400ಕ್ಕೂ ಹೆಚ್ಚು ರನ್‌ ಗಳಿಸಿದ್ದು ಇದೇ ಮೊದಲು. ಶ್ರೀಲಂಕಾ ವಿರುದ್ಧ 2022ರಲ್ಲಿ ಮೀರ್‌ಪುರ್‌ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ 6 ಬ್ಯಾಟರ್‌ಗಳು ಡಕೌಟ್‌ ಆದರೂ ತಂಡ 365 ರನ್‌ ಕಲೆಹಾಕಿದ್ದು ಈ ಹಿಂದಿನ ಅತಿದೊಡ್ಡ ಮೊತ್ತದ ದಾಖಲೆ ಎನಿಸಿತ್ತು.

10,000ನೇ ಡಕೌಟ್‌: ಇಂಗ್ಲೆಂಡ್‌ನ ಬ್ರೈಡನ್‌ ಕಾರ್ಸ್‌, ಸಿರಾಜ್‌ರ ಬೌಲಿಂಗ್‌ನಲ್ಲಿ ಸೊನ್ನೆಗೆ ಔಟಾದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ 10000ನೇ ಡಕೌಟ್‌ ಎನಿಸಿತು.

01ನೇ ಬಾರಿ: ಬೆನ್‌ ಸ್ಟೋಕ್ಸ್‌ ತಮ್ಮ ಟೆಸ್ಟ್‌ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಗೋಲ್ಡನ್‌ ಡಕ್‌ (ಎದುರಿಸಿದ ಮೊದಲ ಎಸೆತದಲ್ಲೇ ಔಟಾಗುವುದು) ಆದರು.

04ನೇ ಬಾರಿ: ಮೊಹಮದ್‌ ಸಿರಾಜ್‌ ಟೆಸ್ಟ್‌ನಲ್ಲಿ 4ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!