
ಬೆಂಗಳೂರು: ಇಂಡಿಯನ್ ಪೊಲೀಸರು ಬೇರೆ, ಅಮೆರಿಕಾ ಪೊಲೀಸರೇ ಬೇರೆ. ಇಲ್ಲಿ ಮೈದಾನಕ್ಕೆ ನುಗ್ಗಿದ್ರೆ ಲಾಠಿ ಏಟು ಬೀಳುತ್ತೆ. ಅಲ್ಲಿ ಸ್ಟೇಡಿಯಂಗೆ ಬಂದ್ರೆ ಜೈಲೇ ಗತಿ. ಯಾರೇ ಹೇಳಿದ್ರೂ ಪೊಲೀಸರು ಕೇಳಲಿಲ್ಲ. ಹಾಗಾದ್ರೆ ಭಾರತ-ಬಾಂಗ್ಲಾ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಏನಾಯ್ತು ಅನ್ನೋದನ್ನ ನೋಡಿಕೊಂಡು ಬರೋಣ ಬನ್ನಿ.
ಅಭಿಮಾನಿ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡ ರೋಹಿತ್..!
ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರನನ್ನ ನೋಡುವುದು, ಅಪ್ಪಿಕೊಳ್ಳುವುದು ಕಾಲಿಗೆ ಬೀಳುವುದು. ಆಟೋಗ್ರಾಫ್ ಹಾಕಿಸಿಕೊಳ್ಳುವುದು ಅಂದ್ರೆ ಅದೇನು ಇಷ್ಟನೋ ಗೊತ್ತಿಲ್ಲ ಕಂಡ್ರಿ. ಚಾನ್ಸ್ ಸಿಕ್ಕರೆ ಸಾಕು ಮೈದಾನಕ್ಕೆ ನುಗ್ಗಿ ಆಟಗಾರರನ್ನ ಅಪ್ಪಿ ಮುಂದಾಡುತ್ತಾರೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ.. ಅಮೆರಿಕಾದಲ್ಲೂ ಇದೆ. ಹೌದು, ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ಅಮೆರಿಕದಲ್ಲೂ ಅಭಿಮಾನಿಗಳ ಹಾವಳಿ ಮುಂದುವರೆದಿದೆ.
ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಅಭಿಯಾನ ಆರಂಭಕ್ಕೂ ಮುನ್ನವೇ ನಮ್ಮ ಆಟಗಾರರಿಗೆ ಅಭಿಮಾನಿಗಳ ಕಾಟ ಶುರುವಾಗಿದೆ. ಮೊನ್ನೆ ನಡೆದ ಅಭ್ಯಾಸ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬ, ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ನುಗ್ಗಿದ್ದಾನೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ತಕ್ಷಣವೇ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ.
ಪಂದ್ಯದ 2ನೇ ಇನಿಂಗ್ಸ್ ವೇಳೆ ಅಭಿಮಾನಿಯೊಬ್ಬ ಗ್ಯಾಲರಿಯಿಂದ ಮೈದಾನಕ್ಕೆ ಓಡಿಬಂದ. ನೇರವಾಗಿ ಬಂದು ರೋಹಿತ್ ಅವರನ್ನು ತಬ್ಬಿಕೊಂಡ. ಆತನ ಬೆನ್ನ ಹಿಂದೆಯೇ ಓಡಿ ಬಂದ ಭದ್ರತಾ ಸಿಬ್ಬಂದಿಗಳು ಬಲ ಪ್ರಯೋಗಿಸಿ ಅಭಿಮಾನಿಯನ್ನು ವಶಕ್ಕೆ ಪಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸರಿಗೆ ಉಗ್ರರ ಭಯ, ಅಭಿಮಾನಿಗೆ ರೋಹಿತ್ ಅಭಯ..!
ಇತ್ತ ಅಮೆರಿಕನ್ ಪೊಲೀಸ್ ಸಿಬ್ಬಂದಿಗಳು ಬಲ ಪ್ರಯೋಗಿಸುವುದನ್ನು ಕಂಡ ರೋಹಿತ್ ಶರ್ಮಾ, ಏನೂ ಮಾಡದಂತೆ ಪರಿ ಪರಿಯಾಗಿ ಕೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಭದ್ರತಾ ಸಿಬ್ಬಂದಿಗಳು ನಾಯಕನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಟೀಂ ಇಂಡಿಯಾ ಪಂದ್ಯಗಳ ವೇಳೆ ದಾಳಿ ನಡೆಸುವುದಾಗಿ ಐಸಿಸ್-ಕೆ ಉಗ್ರ ಸಂಘಟನೆಯೊಂದು ಬೆದರಿಕೆಯೊಡ್ಡಿದೆ. ಇದರ ನಡುವೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳನ್ನೇ ವಂಚಿಸಿ ಮೈದಾನಕ್ಕೆ ನುಗ್ಗಿರುವುದರಿಂದ ಪೊಲೀಸರು ಕೂಡ ಹೈರಾಣರಾಗಿದ್ದಾರೆ. ಹೀಗಾಗಿಯೇ ಭಾರತದ ಮುಂದಿನ ಪಂದ್ಯಗಳ ವೇಳೆ ಮತ್ತಷ್ಟು ಕಟ್ಟೆಚ್ಚರ ವಹಿಸುವ ಸಾಧ್ಯತೆಯಿದೆ.
ಅಭ್ಯಾಸ ಪಂದ್ಯದಲ್ಲಿ ಭಾರತೀಯರು ಅಬ್ಬರ
ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವರ್ಲ್ಡ್‌ಕಪ್ ಆಡಲು ಬಂದ ಟೀಂ ಇಂಡಿಯಾ, ಮೊನ್ನೆ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವಾಡಿ ಜಯ ಸಾಧಿಸಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ ಭಾರತ, 5 ವಿಕೆಟ್ಗೆ 182 ರನ್ ಗಳಿಸಿತು. ರಿಷಬ್ ಪಂತ್ 53, ಸೂರ್ಯ 32, ಪಅಂಡ್ಯ 40, ರೋಹಿತ್ 23 ರನ್ ಹೊಡೆದರು. ಬಳಿಕ ಬಾಂಗ್ಲಾ 122 ರನ್ ಗಳಿಸಿ 60 ರನ್ಗಳಿಂದ ಸೋಲು ಅನುಭವಿಸ್ತು.ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಪಡೆದ್ರು. ಈ ಆಟ ನೋಡಲು ಬಂದಿದ್ದ ಅಭಿಮಾನಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.