ಅಂಧರ ಕ್ರಿಕೆಟ್‌ನಲ್ಲೂ ಟ್ರೋಫಿ ಕದ್ದೊಯ್ದ ಪಾಕಿಸ್ತಾನ! ವಿಶ್ವ ಮಂಡಳಿಯನ್ನೇ ಬಹಿಷ್ಕರಿಸಿ ಹೊಸ ಸಂಸ್ಥೆ ಕಟ್ಟಲು ಮುಂದಾದ ಭಾರತ

Kannadaprabha News   | Kannada Prabha
Published : Nov 21, 2026, 09:14 AM IST
Men's Blind Cricket Asia Cup 2026

ಸಾರಾಂಶ

ಭಾರತ-ಪಾಕಿಸ್ತಾನ ಅಂಧರ ಏಷ್ಯಾಕಪ್ ಫೈನಲ್ ಮಳೆಯಿಂದ ರದ್ದಾಗಿದ್ದರೂ, ನಿಯಮ ಉಲ್ಲಂಘಿಸಿ ಪಾಕಿಸ್ತಾನಕ್ಕೆ ಟ್ರೋಫಿ ಹಸ್ತಾಂತರಿಸಲಾಗಿದೆ. ಇದನ್ನು ವಿರೋಧಿಸಿ ಭಾರತ ತಂಡ ಸಮಾರಂಭವನ್ನು ಬಹಿಷ್ಕರಿಸಿದೆ. ವಿಶ್ವ ಅಂಧರ ಕ್ರಿಕೆಟ್ ಮಂಡಳಿಯ ವಿರುದ್ಧ ಹೊಸ ಒಕ್ಕೂಟ ರಚಿಸಲು ಭಾರತ ಚಿಂತಿಸುತ್ತಿದೆ.

ಢಾಕಾ(ನ.21): ಕಳೆದ ವರ್ಷ ಭಾರತ ಪುರುಷರ ತಂಡ ಏಷ್ಯಾಕಪ್‌(Asia Cup 2025) ಗೆದ್ದಾಗ ತಂಡಕ್ಕೆ ಕೊಡಬೇಕಿದ್ದ ಟ್ರೋಫಿಯನ್ನು ಪಾಕಿಸ್ತಾನದ ಸಚಿವ, ಏಷ್ಯನ್‌ ಕ್ರಿಕೆಟ್‌ ಅಧ್ಯಕ್ಷ ಮೊಹ್ಸಿನ್‌ ನಖ್ವಿ(Pakistan Minister and Asian Cricket Council President Mohsin Naqvi) ಹೊತ್ತೊಯ್ದಿದ್ದರು. ಈಗ ಅಂಧರ ಏಷ್ಯಾಕಪ್‌ ಕ್ರಿಕೆಟ್‌(Asia Cup Cricket for the Blind)ನಲ್ಲೂ ಪಾಕಿಸ್ತಾನ(Pakistan)ದಿಂದ ‘ಟ್ರೋಫಿ ಚೋರಿ’ ನಡೆದಿದೆ.

ಏಷ್ಯಾ ಕಪ್ ಭಾರತ-ಪಾಕಿಸ್ತಾನ ಅಂಧರ ಫೈನಲ್‌ ಪಂದ್ಯ

ಶುಕ್ರವಾರದ ಭಾರತ-ಪಾಕಿಸ್ತಾನ ಅಂಧರ ಫೈನಲ್‌ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, ನಿಯಮ ಪ್ರಕಾರ 2 ತಂಡಗಳನ್ನೂ ಜಂಟಿ ವಿಜೇತರು ಎಂದು ಘೋಷಿಸಬೇಕಿತ್ತು. ಆದರೆ ವಿಶ್ವ ಅಂಧರ ಕ್ರಿಕೆಟ್‌ ಮಂಡಳಿ(WBCC) ಹಾಗೂ ಪಾಕ್ ಅಂಧ ಕ್ರಿಕೆಟ್‌ ಅಧ್ಯಕ್ಷರಾಗಿರುವ ಸುಲ್ತಾನ್‌ ಶಾ(Sultan Shah, President of Pakistan Blind Cricket) ತಮ್ಮ ಸರ್ವಾಧಿಕಾರ ಬಳಸಿ ಪಾಕ್‌ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ಮೂಲಕ ಉದ್ಧಟತನ ತೋರಿದ್ದಾರೆ. ಡಬ್ಲ್ಯುಬಿಸಿಸಿಯ ತಾಂತ್ರಿಕ ಸಮಿತಿಯು 2 ತಂಡಗಳಿಗೆ ಟ್ರೋಫಿ ಹಂಚಬೇಕು ಎಂದು ನಿರ್ದೇಶಿಸಿದರೂ, ಅದನ್ನೂ ಕಡೆಗಣಿಸಿ ಪಾಕ್‌ಗೆ ಟ್ರೋಫಿ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನಿಯಮ ಉಲ್ಲಂಘನೆ:

ಟೂರ್ನಿಯಲ್ಲಿ ಭಾರತ, ಪಾಕ್‌, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಪಾಲ್ಗೊಂಡಿದ್ದವು. ಲೀಗ್‌ ಹಂತದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಿತ್ತು. ಪಾಕ್‌ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದು 6 ಅಂಕ ಗಳಿಸಿದರೆ, ಭಾರತ 2ರಲ್ಲಿ ಜಯಗಳಿಸಿ 4 ಅಂಕದೊಂದಿಗೆ ಫೈನಲ್‌ಗೇರಿತ್ತು. ನೆಟ್‌ ರನ್‌ರೇಟ್‌ನಲ್ಲೂ ಪಾಕ್‌ ಮೇಲುಗೈ ಸಾಧಿಸಿತ್ತು. ಶುಕ್ರವಾರ ಫೈನಲ್‌ನಲ್ಲಿ ಭಾರತ-ಪಾಕ್‌ ಆಡಬೇಕಿತ್ತು. ಆದರೆ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ನಿಯಮ ಪ್ರಕಾರ ಮತ್ತು ತಾಂತ್ರಿಕ ಸಮಿತಿ ನಿರ್ದೇಶನದ ಅನುಸಾರ 2 ತಂಡಗಳನ್ನೂ ಜಂಟಿ ವಿಜೇತರು ಎಂದು ಘೋಷಿಸಬೇಕಿತ್ತು. ಆದರೆ ನಿಯಮ ಮತ್ತು ತಾಂತ್ರಿಕ ಸಮಿತಿಯ ನಿರ್ದೇಶನವನ್ನು ಧಿಕ್ಕರಿಸಿದ ಪಾಕ್‌ನ ಸುಲ್ತಾನ್‌ ಶಾ ಪಾಕ್‌ ತಂಡವನ್ನು ವಿಜೇತ ಎಂದು ಘೋಷಿಸಿದ್ದಾರೆ. ನೆಟ್‌ ರನ್‌ರೇಟ್‌ನಲ್ಲಿ ಭಾರತಕ್ಕಿಂತ ಪಾಕ್‌ ಮುಂದಿದೆ. ಹೀಗಾಗಿ ಪಾಕ್‌ಗೆ ಟ್ರೋಫಿ ನೀಡಲಾಗಿದೆ ಎಂದು ಸುಲ್ತಾನ್‌ ಶಾ ಸಮರ್ಥಿಸಿಕೊಂಡಿದ್ದಾರೆ.

ಟ್ರೋಫಿ, ಸಮಾರಂಭ ಬಹಿಷ್ಕರಿಸಿದ ಭಾರತ

ನಿಯಮ ಉಲ್ಲಂಘಿಸಿ ಪಾಕ್‌ಗೆ ಟ್ರೋಫಿ ನೀಡಿರುವ ಕ್ರಮವನ್ನು ಭಾರತ ತಂಡ ಪ್ರತಿಭಟಿಸಿ, ಟ್ರೋಫಿ ಹಸ್ತಾಂತರ ಕಾರ್ಯಕ್ರಮ ಬಹಿಷ್ಕರಿಸಿತು. ರನ್ನರ್‌-ಅಪ್‌ ಟ್ರೋಫಿ, ಮೆಡಲ್‌ ಹಾಗೂ ಕೆಲ ಆಟಗಾರರಿಗೆ ಸಿಗಬೇಕಿದ್ದ ವೈಯಕ್ತಿಕ ಪ್ರಶಸ್ತಿಗಳನ್ನೂ ಆಟಗಾರರು ಸ್ವೀಕರಿಸಲಿಲ್ಲ.

ವಿಶ್ವ ಮಂಡಳಿಯನ್ನೇ ಬಹಿಷ್ಕರಿಸಿ ಹೊಸ ಸಂಸ್ಥೆ ಕಟ್ಟಲು ಭಾರತ ಚಿಂತನೆ!

ವಿಶ್ವ ಅಂಧರ ಕ್ರಿಕೆಟ್‌ ಮಂಡಳಿ ಅಧ್ಯಕ್ಷರೇ ನಿಯಮ ಉಲ್ಲಂಘಿಸಿ ಭಾರತಕ್ಕೆ ದ್ರೋಹ ಎಸಗಿದ್ದಾರೆ. ಹೀಗಾಗಿ ಆ ಮಂಡಳಿಯನ್ನೇ ಬಹಿಷ್ಕರಿಸಿ ಹೊಸದಾಗಿ ವಿಶ್ವ ಮಟ್ಟದಲ್ಲಿ ಅಂಧರ ಒಕ್ಕೂಟ ರಚಿಸಲು ಭಾರತೀಯ ಅಂಧ ಕ್ರಿಕೆಟ್‌ ಮಂಡಳಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಭಾರತ ತಂಡದ ಮ್ಯಾನೇಜರ್‌ ಧೀರಜ್‌ ‘ಕನ್ನಡಪ್ರಭ’ಕ್ಕೆ ಸುಳಿವು ನೀಡಿದ್ದಾರೆ. ‘ಇಂತದ ಸರ್ವಾಧಿಕಾರವನ್ನು ಸಹಿಸಲು ಸಾಧ್ಯವಿಲ್ಲ. ಭಾರತ ಸಂಸ್ಥೆ ವಿಶ್ವದಲ್ಲೇ ಪವರ್‌ಫುಲ್‌. ವಿಶ್ವ ಅಂಧರ ಕ್ರಿಕೆಟ್‌ ಮಂಡಳಿಯಿಂದ ಹೊರಬರುವ ಬಗ್ಗೆ ನಮ್ಮ ಸಂಸ್ಥೆಯ ಅಧಿಕಾರಿಗಳು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಒಪ್ಪಲು ಸಾಧ್ಯವಿಲ್ಲ

ಫೈನಲ್‌ ಪಂದ್ಯ ಟೈ ಆಗಿ, ಸೂಪರ್‌ ಓವರ್ ಸಾಧ್ಯವಾಗದೇ ಇದ್ದರೆ ಆಗ ನೆಟ್‌ ರನ್‌ರೇಟ್ ಅನ್ವಯ ಒಂದು ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಆದರೆ ಇಲ್ಲಿ ಪಂದ್ಯವೇ ನಡೆದಿಲ್ಲ. ತಾಂತ್ರಿಕ ಸಮಿತಿ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಿ 2 ತಂಡಗಳನ್ನೂ ವಿಜೇತ ಎಂದು ಘೋಷಿಸಬೇಕು ಎಂದಿದ್ದರು. ಅದನ್ನೂ ಸುಲ್ತಾನ್‌ ಶಾ ಧಿಕ್ಕರಿಸಿದ್ದಾರೆ. ಇದು ಒಪ್ಪಲು ಸಾಧ್ಯವಿಲ್ಲ.

- ಧೀರಜ್‌, ಭಾರತ ತಂಡದ ಮ್ಯಾನೇಜರ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Australia Ball Tampering: ಎಷ್ಟು ವಿಶ್ವಕಪ್’ಗಳನ್ನು ಗೆದ್ದರೇನು..? ನೀವು ಎಂದೆಂದಿಗೂ ಮೋಸಗಾರರೇ..!
ಮಾಜಿ ವಿಶ್ವ ಸುಂದರಿ ಮೇಲೆ ಪ್ರೀತಿಯ ಸುರಿಮಳೆ ಸುರಿಸಿದ ಲಲಿತ್ ಮೋದಿ; 'ನೀವು ಇನ್ನೂ ಬಿಟ್ಟಿಲ್ವಾ' ಎಂದ ಫ್ಯಾನ್ಸ್