ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ, ಪಡಿಕ್ಕಲ್ ಇನ್, ಕರುಣ್ ನಾಯರ್ ಔಟ್!

Published : Sep 26, 2025, 09:09 AM IST
Team India Squad For West Indies Test

ಸಾರಾಂಶ

ವೆಸ್ಟ್‌ಇಂಡೀಸ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲರಾಗಿದ್ದ ಕರ್ನಾಟಕದ ಕರುಣ್ ನಾಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ದುಬೈ: ವೆಸ್ಟ್‌ಇಂಡೀಸ್ ವಿರುದ್ಧ ಅಕ್ಟೋಬರ್ 2ರಿಂದ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ಭಾರತ ತಂಡ ಪ್ರಕಟಗೊಂಡಿತು. ನಿರೀಕ್ಷೆಯಂತೆಯೇ ಯಾವುದೇ ಅಚ್ಚರಿಯ ಆಯ್ಕೆ ನಡೆಸದ ಬಿಸಿಸಿಐ, ಉಪನಾಯಕತ್ವ ಜವಾಬ್ದಾರಿಯನ್ನು ಆಲ್ರೌಂಡರ್ ರವೀಂದ್ರ ಜಡೇಜಾಗೆ ವಹಿಸಿದೆ. ಈಗಾಗಲೇ ಕೆಲ ಏಕದಿನ, ಟಿ20 ಪಂದ್ಯಗಳಲ್ಲಿ ಉಪನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಜಡೇಜಾ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿದ್ದ ಕರ್ನಾಟಕದ ಕರುಣ್ ನಾಯರ್, ಬಂಗಾಳದ ಅಭಿಮನ್ಯು ಈಶ್ವರನ್‌ರನ್ನು ಕೈಬಿಡಲಾಗಿದೆ. ದೇವ್‌ದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಕೆ.ಎಲ್. ರಾಹುಲ್ ಹಾಗೂ ಪ್ರಸಿದ್ ಕೃಷ್ಣ ತಂಡದಲ್ಲಿರುವ ಮತ್ತಿಬ್ಬರು ರಾಜ್ಯದ ಆಟಗಾರರು. ವೇಗಿ ಜಸ್‌ಪ್ರೀತ್‌ ಬುಮ್ರಾ ಎರಡೂ ಪಂದ್ಯಗಳಿಗೆ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮೂವರು ಸ್ಪಿನ್ ಬೌಲಿಂಗ್ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಜೊತೆ ಮತ್ತೊಬ್ಬ ಸ್ಪಿನ್ನರ್ ಕುಲ್ದೀಪ್ ಯಾದವ್ ಸಹ ತಂಡದಲ್ಲಿದ್ದಾರೆ. ಮೊಹಮ್ಮದ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ಜೊತೆಗೆ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ನಿತೀಶ್ ರೆಡ್ಡಿ ಸ್ಥಾನ ಪಡೆದಿದ್ದಾರೆ.

ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಧೃವ್ ಜುರೆಲ್ ತಂಡದಲ್ಲಿದ್ದಾರೆ. ಎನ್.ಜಗದೀಶನ್ ಮೀಸಲು ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 2ರಿಂದ ಅಹಮದಾಬಾದ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಅ.10ರಂದು ಆರಂಭಗೊಳ್ಳಲಿರುವ 2ನೇ ಪಂದ್ಯಕ್ಕೆ ನವದೆಹಲಿ ಆತಿಥ್ಯ ವಹಿಸಲಿದೆ.

ಕರುಣ್ ನಾಯರ್‌ಗೆ ಬಾಗಿಲು ಬಂದ್?

8 ವರ್ಷ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಕರುಣ್ ನಾಯರ್, ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. 4 ಟೆಸ್ಟ್‌ಗಳ 8 ಇನ್ನಿಂಗ್ಸ್‌ಗಳಲ್ಲಿ ಕೇವಲ 205 ರನ್ ಗಳಿಸಿದರು. ಹೀಗಾಗಿ ಅವರನ್ನು ವಿಂಡೀಸ್ ವಿರುದ್ಧದ ಸರಣಿಗೆ ಪರಿಗಣಿಸಿಲ್ಲ. ಕರುಣ್‌ಗೆ ಭಾರತ ತಂಡದ ಬಾಗಿಲು ಬಂದ್ ಆಗಿದ್ದು, ಮತ್ತೆ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಗುರುವಾದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, 'ಇಂಗ್ಲೆಂಡ್‌ನಲ್ಲಿ ಕರುಣ್‌ರಿಂದ ಹೆಚ್ಚಿನ ನಿರೀಕ್ಷೆ ಇತ್ತು. ನಿರೀಕ್ಷೆ ಉಳಿಸಿಕೊಳ್ಳದ ಕಾರಣದಿಂದಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ' ಎಂದರು.

ವಿಂಡೀಸ್ ಸರಣಿಗೆ ಭಾರತ ತಂಡ:

ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಎನ್.ಜಗದೀಶನ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಕುಲ್ದೀಪ್ ಯಾದವ್.

ಏಕದಿನ: ಭಾರತ 'ಎ'ಗೆ ಶ್ರೇಯಸ್‌ ನಾಯಕ

ನವದೆಹಲಿ: ಆಸ್ಟ್ರೇಲಿಯಾ 'ಎ' ವಿರುದ್ಧ ಸೆ.30ರಿಂದ ಕಾಸ್ಟುರದಲ್ಲಿ ನಡೆಯಲಿರುವ 3 ಪಂದ್ಯಗಳ ಅನಧಿಕೃತ ಏಕದಿನ ಸರಣಿಗೆ ಭಾರತ 'ಎ' ತಂಡ ಪ್ರಕಟಗೊಂಡಿದ್ದು, ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರರಿಗೆ ಸ್ಥಾನ ಸಿಕ್ಕಿಲ್ಲ. ಇದೇ ವೇಳೆ ಇರಾನಿ ಕಪ್‌ ಬಿಸಿಸಿಐ ತಂಡ

ಪ್ರಕಟಿಸಿದ್ದು, ಹಾಲಿ ರಣಜಿ ಚಾಂಪಿಯನ್ ವಿದರ್ಭ ವಿರುದ್ಧದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ರಜತ್‌ ಪಾಟೀದಾರ್ ಮುನ್ನಡೆಸಲಿದ್ದಾರೆ. ಈ ತಂಡದಲ್ಲೂ ಕರ್ನಾಟಕದ ಯಾವುದೇ ಆಟಗಾರರಿಲ್ಲ. ಇನ್ನು, ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಕಾರಣ, 6 ತಿಂಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ರಜೆ ಪಡೆದಿರುವುದಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿ, ಶ್ರೇಯಸ್ ಮುಂಬರುವ ರಣಜಿ ಟ್ರೋಫಿಯಲ್ಲೂ ಆಡುವುದಿಲ್ಲ ಎಂದು ತಿಳಿದುಬಂದಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ