Asia Cup 2025 ಭಾರತದ ಆರ್ಭಟಕ್ಕೆ ಬಾಂಗ್ಲಾದೇಶ ಧೂಳೀಪಟ, ಸೂರ್ಯ ಪಡೆ ಅಜೇಯವಾಗಿ ಫೈನಲ್‌ಗೆ ಲಗ್ಗೆ

Published : Sep 24, 2025, 11:40 PM IST
Ind vs ban asia cup super four

ಸಾರಾಂಶ

2025ರ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಮಣಿಸಿದ ಭಾರತ, ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿದೆ. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನವು ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಕಾರಣವಾಯಿತು.

ದುಬೈ: ಹಾಲಿ ಚಾಂಪಿಯನ್‌ ಟೀಂ ಇಂಡಿಯಾ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೂಪರ್-4 ಹಂತದ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರು 41 ರನ್ ಅಂತರದ ಅನಾಯಾಸದ ಗೆಲುವು ದಾಖಲಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಷ್ಯಾಕಪ್‌ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಅಭಿಷೇಕ್ ಶರ್ಮಾ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಸಂಘಟಿತ ಪ್ರದರ್ಶನಕ್ಕೆ ಈ ಗೆಲುವು ಲಭಿಸಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.

ಭಾರತ ನೀಡಿದ್ದ 169 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಜಸ್ಪ್ರೀತ್ ಬುಮ್ರಾ ತಾವೆಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಶಾಕ್ ನೀಡಿದರು. ತಂಜಿದ್ ಹಸನ್ ತಮೀಮ್ ಒಂದು ರನ್ ಗಳಿಸಿ ಶಿವಂ ದುಬೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆದರೆ ಇದಾದ ಬಳಿಕ ಎರಡನೇ ವಿಕೆಟ್‌ಗೆ ಸೈಫ್ ಹಸನ್ ಹಾಗೂ ಪರ್ವೇಜ್ ಹೊಸೈನ್ ಎರಡನೇ ವಿಕೆಟ್‌ಗೆ 44 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಕುಲ್ದೀಪ್ ಯಾದವ್ ಬೇರ್ಪಡಿಸಿದರು. ಪರ್ವೇಜ್ 21 ರನ್ ಗಳಿಸಿದರೆ, ತೌಹಿದ್ ಹೃದಯ್(7) ಹಾಗೂ ಶಮೀಮ್ ಹೊಸೈನ್ ಖಾತೆ ತೆರೆಯದೇ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸೈಫ್ ಹಸನ್ ದಿಟ್ಟ ಹೋರಾಟ ನಡೆಸಿದರು. ಆರಂಭಿಕನಾಗಿ ಕಣಕ್ಕಿಳಿದ ಸೈಫ್ ಹಸನ್ 51 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 69 ರನ್ ಸಿಡಿಸಿ ಒಂಬತ್ತನೆಯವರಾಗಿ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ ಪರ ಸೈಫ್ ಹಸನ್ ಹಾಗೂ ಪರ್ವೇಜ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಭಾರತದ ಸಂಘಟಿತ ಬೌಲಿಂಗ್ ದಾಳಿ

ಭಾರತ ಪರ ಶಿಸ್ತುಬದ್ದ ದಾಳಿ ನಡೆಸಿದ ಕುಲ್ದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಮತ್ತೊಮ್ಮೆ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜೋಡಿ ಕೇವಲ 6.2 ಓವರ್‌ಗಳಲ್ಲಿ 77 ರನ್‌ಗಳ ಜತೆಯಾಟ ಪಡೆಯಿತು. ಉಪನಾಯಕ ಶುಭ್‌ಮನ್ ಗಿಲ್ ಕೇವಲ 19 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 29 ರನ್ ಸಿಡಿಸಿ ರಿಶಾದ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಮ್ಮೆ ಸಿಡಿಸಿದ ಅಭಿಷೇಕ್ ಶರ್ಮಾ

ಕಳೆದ ಪಾಕಿಸ್ತಾನ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಏಷ್ಯಾಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ, ತಮ್ಮ ಫಾರ್ಮ್‌ ಮತ್ತೊಮ್ಮೆ ಮುಂದುವರೆಸಿದರು. ಕೇವಲ 37 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ, 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ ವಿಸ್ಪೋಟಕ 75 ರನ್ ಚಚ್ಚಿದರು. ಆದರೆ ಇಲ್ಲದ ರನ್ ಕದಿಯಲು ಹೋಗಿ ಅಭಿಷೇಕ್ ಶರ್ಮಾ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಕೈಕೊಟ್ಟ ದುಬೆ, ಸೂರ್ಯ: ಇನ್ನು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್ ಮಾಡಲಿಳಿದ ಶಿವಂ ದುಬೆ(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಸೂರ್ಯ 5 ರನ್ ಗಳಿಸಲು ಬರೋಬ್ಬರಿ 11 ಎಸೆತಗಳನ್ನು ವ್ಯರ್ಥ ಮಾಡಿದರು. ಇನ್ನು ಕಳೆದ ಪಂದ್ಯದ ಹೀರೋ ತಿಲಕ್ ವರ್ಮಾ ಕೂಡಾ ಕೇವಲ 5 ರನ್ ಗಳಿಸಿ ತಂಜೀಮ್ ಹಸನ್ ಶಕಿಬ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 29 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಬಾರಿಸಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ