
ನ್ಯೂಜಿಲೆಂಡ್‌ನ ಬರ್ಟ್ ಸಟ್ಕ್ಲಿಫ್ ಓವಲ್ ಮೈದಾನದಲ್ಲಿ ಆರಂಭವಾಗಿರುವ ನ್ಯೂಜಿಲೆಂಡ್ 'ಎ' ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ 'ಎ' ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 'ಎ', ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದೆ.
ಭಾರತ 'ಎ' ತಂಡದ ಆರಂಭಿಕ ಬ್ಯಾಟಿಂಗ್ ಸಂಪೂರ್ಣವಾಗಿ ನೆಲಕಚ್ಚಿತು. ಆರಂಭಿಕ ಆಟಗಾರ ಅನುಭವಿ ಕೆ.ಎಲ್. ರಾಹುಲ್ 8 ಎಸೆತ ಎದುರಿಸಿ ಶೂನ್ಯಕ್ಕೆ ಔಟ್ ಆದರು. ಇವರ ಬೆನ್ನಲ್ಲೇ ಭರವಸೆಯ ಆಟಗಾರ ಸಾಯಿ ಸುದರ್ಶನ್ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ನಾಯಕ ಹಾಗೂ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೇವಲ 1 ರನ್ ಗಳಿಸಿ ಔಟಾದರೆ, ಇಡೀ ಇನ್ನಿಂಗ್ಸ್‌ನಲ್ಲಿ ತಂಡದ ಐದು ಆಟಗಾರರು ಶೂನ್ಯಕ್ಕೆ ವಿಕೆಟ್ ಚೆಲ್ಲಿದ್ದು ತೀವ್ರ ಹಿನ್ನಡೆಗೆ ಕಾರಣವಾಯಿತು.
ತಂಡ ತೀವ್ರ ಸಂಕಷ್ಟದಲ್ಲಿದ್ದಾಗ ನಾಗ್ಪುರದ ಬೌಲಿಂಗ್ ಆಲ್‌ರೌಂಡರ್ ಯಶ್ ಠಾಕೂರ್ ಚೇತರಿಕೆಯ ಆಟ ಪ್ರದರ್ಶಿಸಿದರು. ಅವರು 49 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇವರಿಗೆ ಉತ್ತಮ ಬೆಂಬಲ ನೀಡಿದ ಕನ್ನಡಿಗ ದೇವದತ್ ಪಡಿಕ್ಕಲ್ 77 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ತಾಳ್ಮೆಯ 32 ರನ್ ಬಾರಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 45 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಇವರನ್ನು ಹೊರತುಪಡಿಸಿ ಬೇರಾವ ಆಟಗಾರನೂ ಎರಡಂಕಿಯ ಮೊತ್ತ ತಲುಪಲು ಸಾಧ್ಯವಾಗಲಿಲ್ಲ.
ಭಾರತ 'ಎ' ಮತ್ತು ನ್ಯೂಜಿಲೆಂಡ್ 'ಎ' ನಡುವಿನ ಈ ಅನಧಿಕೃತ ಟೆಸ್ಟ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಧ್ರುವ್ ಜುರೆಲ್ (ನಾಯಕ/ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಸ್ಮರಣ್ ರವಿಚಂದ್ರನ್, ವಾಷಿಂಗ್ಟನ್ ಸುಂದರ್, ಅನ್ಶುಲ್ ಕಾಂಬೋಜ್, ಆಕಾಶ್ ದೀಪ್, ಮುಖೇಶ್ ಕುಮಾರ್, ಮಾನವ್ ಸುತಾರ್, ಕುಮಾರ್ ಕುಶಾಗ್ರಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.