2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಭಾರತದ 12 ನಗರಗಳಲ್ಲಿ ನಡೆಯಲಿದೆ ಕ್ರಿಕೆಟ್ ಮಹಾಸಂಗ್ರಾಮ
ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ
ಬೆಂಗಳೂರು(ಮಾ.22): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮುಂಬರುವ ಅಕ್ಟೋಬರ್ 05ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಜರುಗಲಿದೆ. ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ದೇಶದ 12 ನಗರಗಳಲ್ಲಿ ಕ್ರಿಕೆಟ್ ಮಹಾಸಂಗ್ರಾಮ ಜರುಗಲಿದೆ ಎಂದು ಖ್ಯಾತ ಕ್ರಿಕೆಟ್ ವೆಬ್‌ಸೈಟ್ ವರದಿ ಮಾಡಿದೆ.
2011ರ ಬಳಿಕ ಭಾರತದಲ್ಲಿ ಮತ್ತೊಮ್ಮೆ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ದೊರಕಿದೆ. ಒಟ್ಟು 10 ಬಲಾಢ್ಯ ಕ್ರಿಕೆಟ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲು ವೇದಿಕೆ ಸಜ್ಜಾಗುತ್ತಿದೆ. 2019ರಲ್ಲಿ ನಡೆದ ನಡೆದ ರೀತಿಯಲ್ಲಿಯೇ ರೌಂಡ್ ರಾಬಿನ್ ಮಾದರಿಯಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ.
ಖ್ಯಾತ ಕ್ರಿಕೆಟ್ ವೆಬ್‌ಸೈಟ್ EspnCricinfo ವರದಿಯ ಪ್ರಕಾರ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಟೂರ್ನಿಯು ನಡೆಯುವ ಸ್ಥಳಗಳ ಕುರಿತಂತೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಬೇಕಿದೆ. ದೇಶದಲ್ಲಿ ಆ ಸಂದರ್ಭದಲ್ಲಿ ಮಾನ್ಸೂನ್ ಮಳೆಯನ್ನು ಗಮನದಲ್ಲಿಟ್ಟಿಕೊಂಡು ವೇಳಾಪಟ್ಟಿ ಪ್ರಕಟಿಸಬೇಕಿದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಒಂದು ವರ್ಷ ಮುಂಚಿತವಾಗಿಯೇ ಘೋಷಿಸುತ್ತದೆ. ಆದರೆ ಐಸಿಸಿಯು ಬಿಸಿಸಿಐನಿಂದ ತೆರಿಗೆ ವಿನಾಯಿತಿ ಹಾಗೂ ಪಾಕಿಸ್ತಾನ ತಂಡಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ವೀಸಾ ನೀಡುವ ಕುರಿತಂತೆ ಭಾರತ ಸರ್ಕಾರದ ಅಧಿಕೃತ ಒಪ್ಪಿಗೆಯ ಬಳಿಕವಷ್ಟೇ ವೇಳಾಪಟ್ಟಿಯನ್ನು ಪ್ರಕಟಿಸಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಇಂಡೋ-ಪಾಕ್ ಪಂದ್ಯ ನಡೆಯಲು ಮೋದಿ ಸಾಹೇಬ್ ಅವಕಾಶ ಮಾಡಿಕೊಡಿ: ಅಫ್ರಿದಿ ಮನವಿ
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿರುವ ನಾಲ್ಕನೇ ಏಕದಿನ ವಿಶ್ವಕಪ್ ಟೂರ್ನಿ ಎನಿಸಲಿದೆ. ಆದರೆ ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸುತ್ತಿದೆ. ಈ ಮೊದಲು 1987ರಲ್ಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳು ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಿದ್ದವು. ಇದಾದ ಬಳಿಕ 1996ರಲ್ಲಿ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳು ಜಂಟಿಯಾಗಿ ಟೂರ್ನಿಗೆ ಆತಿಥ್ಯವನ್ನು ವಹಿಸಿದ್ದವು. ಇನ್ನು ಕೊನೆಯ ಬಾರಿಗೆ 2011ರಲ್ಲಿ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಒಟ್ಟಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಿದ್ದವು. ಇದೀಗ 2023ರ ಬಳಿಕ 2031ರಲ್ಲಿ ಮತ್ತೊಮ್ಮೆ ಭಾರತ ಹಾಗೂ ಬಾಂಗ್ಲಾದೇಶಗಳು ಒಟ್ಟಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಲಿವೆ.
ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ 1,30,000 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸುವ ಸಾಮರ್ಥ್ಯವಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲು ಭಾರತದಲ್ಲಿ 1987ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಹಾಗೂ 2011ರಲ್ಲಿ ಮುಂಬೈನ ವಾಂಖೇಡೆ ಮೈದಾನದಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದಿದ್ದವು. 2011ರಲ್ಲಿ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾವನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಷ್ಟೇ ಅಲ್ಲದೇ ತವರಿನಲ್ಲಿ ವಿಶ್ವಕಪ್ ಜಯಿಸಿದ ಮೊದಲ ತಂಡ ಎನ್ನುವ ಹಿರಿಮೆಗೂ ಟೀಂ ಇಂಡಿಯಾ ಪಾತ್ರವಾಗಿತ್ತು.