2ನೇ ಟಿ20: ಅಭಿಷೇಕ್‌ ಸೂಪರ್‌ ಸೆಂಚುರಿಗೆ ನಡುಗಿದ ಜಿಂಬಾಬ್ವೆ

Published : Jul 08, 2024, 10:35 AM IST
2ನೇ ಟಿ20: ಅಭಿಷೇಕ್‌ ಸೂಪರ್‌ ಸೆಂಚುರಿಗೆ ನಡುಗಿದ ಜಿಂಬಾಬ್ವೆ

ಸಾರಾಂಶ

ಅಭಿಷೇಕ್‌ ಶರ್ಮಾರ ಸ್ಫೋಟಕ ಸೆಂಚುರಿ, ಋತುರಾಜ್‌ ಗಾಯಕ್ವಾಡ್‌ ಹಾಗೂ ರಿಂಕು ಸಿಂಗ್‌ರ ಆರ್ಭಟ, ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ ಪಡೆ 100 ರನ್‌ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ಭಾರತ 1-1 ಸಮಬಲಗೊಳಿಸಿತು.

ಹರಾರೆ: ಟಿ20 ವಿಶ್ವಕಪ್‌ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಸೋಲಿನ ಆಘಾತಕ್ಕೊಳಗಾಗಿದ್ದ ಭಾರತ ತಂಡ ಈಗ ಪುಟಿದೆದ್ದಿದೆ. ತಾನೇಕೆ ವಿಶ್ವ ಚಾಂಪಿಯನ್‌ ಎಂಬುದನ್ನು ಭಾನುವಾರ ಜಿಂಬಾಬ್ವೆ ವಿರುದ್ಧದ 2ನೇ ಪಂದ್ಯದಲ್ಲಿ ಪ್ರದರ್ಶಿಸಿದೆ.

ಅಭಿಷೇಕ್‌ ಶರ್ಮಾರ ಸ್ಫೋಟಕ ಸೆಂಚುರಿ, ಋತುರಾಜ್‌ ಗಾಯಕ್ವಾಡ್‌ ಹಾಗೂ ರಿಂಕು ಸಿಂಗ್‌ರ ಆರ್ಭಟ, ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ ಪಡೆ 100 ರನ್‌ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ಭಾರತ 1-1 ಸಮಬಲಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ಆರಂಭಿಕ ಆಘಾತದ ಹೊರತಾಗಿಯೂ ಬರೋಬ್ಬರಿ 234 ರನ್‌ ಕಲೆಹಾಕಿತು. ಕಳೆದುಕೊಂಡಿದ್ದು ಕೇವಲ 2 ವಿಕೆಟ್‌. ಇಷ್ಟು ದೊಡ್ಡ ಮೊತ್ತವನ್ನು ಜಿಂಬಾಬ್ವೆ ಬೆನ್ನತ್ತಿ ಗೆಲ್ಲುವುದು ಅಸಾಧ್ಯ ಎಂಬುದನ್ನು ಭಾರತೀಯ ಬೌಲರ್‌ಗಳು ನಿರೂಪಿಸಿದರು. ಆತಿಥೇಯ ತಂಡವನ್ನು 18.4 ಓವರಲ್ಲಿ 134 ರನ್‌ಗೆ ಆಲೌಟ್‌ ಮಾಡಿ ಬೃಹತ್‌ ಗೆಲುವನ್ನು ಒಲಿಸಿಕೊಂಡರು.

ವಿಶ್ವಕಪ್‌ ಗೆದ್ದ ಬಳಿಕ ಆಡಿದ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು!

ಮೊದಲ ಓವರ್‌ನಲ್ಲೇ ಇನೊಸೆಂಟ್‌ ವಿಕೆಟ್‌ ಕಿತ್ತ ಮುಕೇಶ್‌ ಭಾರತದ ಮುನ್ನಡೆಗೆ ಕಾರಣರಾದರು. ಬಳಿಕ 2.5 ಓವರಲ್ಲಿ 40 ರನ್‌ ಗಳಿಸಿದ್ದ ಜಿಂಬಾಬ್ವೆ ದಿಢೀರ್‌ ಕುಸಿತಕ್ಕೊಳಗಾಯಿತು. ಆ ಬಳಿಕ ಯಾವೊಬ್ಬ ಬ್ಯಾಟರ್‌ಗೂ ಕ್ರೀಸ್‌ ಕಚ್ಚಿ ನಿಲ್ಲಲಾಗಲಿಲ್ಲ. ವೆಸ್ಲಿ ಮಧೆವೆರೆ(43 ರನ್‌) ಕೆಲ ಹೊತ್ತು ಹೋರಾಟ ಪ್ರದರ್ಶಿಸಿದರೂ ಭಾರತ ನೀಡಿದ್ದ ಬೃಹತ್‌ ಮೊತ್ತದ ಹತ್ತಿರಕ್ಕೂ ತಂಡವನ್ನು ತಲುಪಿಸಲಾಗಲಿಲ್ಲ. ಮುಕೇಶ್‌ ಕುಮಾರ್‌, ಆವೇಶ್‌ ಖಾನ್‌ ತಲಾ 3, ರವಿ ಬಿಷ್ಣೋಯ್‌, ವಾಷಿಂಗ್ಟನ್‌ ಸುಂದರ್‌ ತಲಾ 1 ವಿಕೆಟ್‌ ಕಿತ್ತರು.

ಸ್ಫೋಟಕ ಆಟ: ಭಾರತದ ಆರಂಭ ಗಮನಿಸಿದರೆ ಈ ಪಂದ್ಯದಲ್ಲೂ ಜಿಂಬಾಬ್ವೆ ಮೇಲುಗೈ ಸಾಧಿಸುವ ಲಕ್ಷಣವಿತ್ತು. 2ನೇ ಓವರ್‌ನಲ್ಲೇ ಶುಭ್‌ಮನ್‌ ವಿಕೆಟ್‌ ಕಳೆದುಕೊಂಡ ಭಾರತ, ಪವರ್‌-ಪ್ಲೇನಲ್ಲಿ ಕೇವಲ 36 ರನ್‌ ಗಳಿಸಿತು. 10 ಓವರಲ್ಲಿ ತಂಡದ ಸ್ಕೋರ್‌ 1 ವಿಕೆಟ್‌ಗೆ 74 ರನ್‌. ಆದರೆ ಡಿಯಾನ್‌ ಮೈರ್ಸ್ ಎಸೆದ 11ನೇ ಓವರ್‌ನಲ್ಲಿ 26 ರನ್‌ ಚಚ್ಚಿದ ಅಭಿಷೇಕ್‌ ಪಂದ್ಯ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿಬಿಟ್ಟರು.

33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್‌, ಬಳಿಕ ಕೇವಲ 13 ಎಸೆತಗಳನ್ನು ತೆಗೆದುಕೊಂಡು ಸೆಂಚುರಿ ಪೂರ್ಣಗೊಳಿಸಿದರು. ಅವರು 47 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ನೊಂದಿಗೆ 100 ರನ್‌ ಸಿಡಿಸಿ ಔಟಾದರು. ಆ ಬಳಿಕ ಮುರಿಯದ 3ನೇ ವಿಕೆಟ್‌ಗೆ ಜೊತೆಯಾದ ಋತುರಾಜ್‌-ರಿಂಕು ಸಿಂಗ್‌ 36 ಎಸೆತಗಳಲ್ಲಿ 87 ರನ್‌ ಸೇರಿಸಿದರು. ಋತುರಾಜ್‌ 47 ಎಸೆತಗಳಲ್ಲಿ ಔಟಾಗದೆ 77 ರನ್‌ ಸಿಡಿಸಿದರೆ, ರಿಂಕು 22 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್‌ನೊಂದಿಗೆ 48 ರನ್‌ ಚಚ್ಚಿ ಔಟಾಗದೆ ಉಳಿದರು.

ಕೇಕ್ ಕತ್ತರಿಸಿ, ತಿಂದ ನಂತರ ಪತ್ನಿಗೆ ಧೋನಿ ಕೇಳಿದ್ದೇನು? ಉತ್ತರದಿಂದ ಮಹಿ ನಿರಾಳ!

ಸ್ಕೋರ್: ಭಾರತ 20 ಓವರಲ್ಲಿ 234/2 (ಅಭಿಷೇಕ್‌ 100, ಋತುರಾಜ್‌ 77*, ರಿಂಕು 48*, ಮಸಕಜ 1-29), ಜಿಂಬಾಬ್ವೆ 18.4 ಓವರಲ್ಲಿ 134/10 (ಮಧೆವೆರೆ 43, ಬೆನೆಟ್‌ 26, ಆವೇಶ್‌ ಖಾನ್‌ 3-15, ಮುಕೇಶ್‌ 3-37)

ಪಂದ್ಯಶ್ರೇಷ್ಠ: ಅಭಿಷೇಕ್‌ ಶರ್ಮಾ

2ನೇ ಪಂದ್ಯದಲ್ಲೇ ಸೆಂಚುರಿ: ಅಭಿಷೇಕ್ ದಾಖಲೆ

ಅಭಿಷೇಕ್‌ ತಾವಾಡಿದ 2ನೇ ಅಂ.ರಾ. ಟಿ20 ಪಂದ್ಯದಲ್ಲೇ ಶತಕ ಬಾರಿಸಿದರು. ಈ ಮೂಲಕ ಕಡಿಮೆ ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ದೀಪಕ್‌ ಹೂಡಾ 3ನೇ, ಕೆ.ಎಲ್‌.ರಾಹುಲ್‌ 4ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು.

ಕೊನೆ 10 ಓವರಲ್ಲಿ 160 ರನ್‌: ಭಾರತ ದಾಖಲೆ

ಭಾರತ ಇನ್ನಿಂಗ್ಸ್‌ನ ಕೊನೆ 10 ಓವರಲ್ಲಿ 160 ರನ್‌ ಸಿಡಿಸಿತು. ಇದು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಗರಿಷ್ಠ. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 159 ರನ್‌ ಕಲೆಹಾಕಿದ್ದು ಈ ವರೆಗಿನ ದಾಖಲೆ.

ಜಂಟಿ 3ನೇ ವೇಗದ ಶತಕ

ಅಭಿಷೇಕ್‌ ಶತಕ ಪೂರ್ಣಗೊಳಿಸಲು 46 ಎಸೆತ ತೆಗೆದುಕೊಂಡರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್‌ನ ಜಂಟಿ 3ನೇ ವೇಗದ ಶತಕ. ರೋಹಿತ್‌ 2017ರಲ್ಲಿ ಶ್ರೀಲಂಕಾ ವಿರುದ್ಧ 35, ಸೂರ್ಯಕುಮಾರ್‌ 2023ರಲ್ಲಿ ಶ್ರೀಲಂಕಾ ವಿರುದ್ಧ 45 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.

ಟಿ20ಯಲ್ಲಿ ಶತಕ ಬಾರಿಸಿದ ಭಾರತದ 4ನೇ ಅತಿ ಕಿರಿಯ

ಅಭಿಷೇಕ್‌ ಭಾರತ ಪರ ಟಿ20 ಶತಕ ಸಿಡಿಸಿದ 4ನೇ ಅತಿ ಕಿರಿಯ. ಅವರಿಗೆ ಈಗ 23 ವರ್ಷ 307 ದಿನ. ಕಳೆದ ವರ್ಷ ಯಶಸ್ವಿ ಜೈಸ್ವಾಲ್‌ ತಮಗೆ 21 ವರ್ಷ 279 ದಿನಗಳಾಗಿದ್ದಾಗ ನೇಪಾಳ ವಿರುದ್ಧ ಶತಕ ಬಾರಿಸಿದ್ದರು.

01ನೇ ಬ್ಯಾಟರ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸುವ ಮೂಲಕ ಶತಕ ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟರ್‌ ಅಭಿಷೇಕ್‌.

13 ಎಸೆತ: 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್‌, ಬಳಿಕ ಕೇವಲ 13 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದರು.

14 ಸಿಕ್ಸರ್‌: ಭಾರತ 14 ಸಿಕ್ಸರ್‌ ಸಿಡಿಸಿತು. ಇದು ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್‌ನಲ್ಲಿ ತಂಡವೊಂದರ 2ನೇ ಗರಿಷ್ಠ. 2019ರಲ್ಲಿ ಅಫ್ಘಾನಿಸ್ತಾನ 15 ಸಿಕ್ಸರ್‌ ಬಾರಿಸಿತ್ತು.

02ನೇ ಬಾರಿ: ಜಿಂಬಾಬ್ವೆ ಟಿ20 ಕ್ರಿಕೆಟ್‌ನಲ್ಲಿ 2ನೇ ಬಾರಿ 100 ರನ್‌ ಅಂತರದಲ್ಲಿ ಸೋತಿತು. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 100 ರನ್‌ ಅಂತರದಲ್ಲಿ ಪರಾಭವಗೊಂಡಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!