ಜಿಂಬಾಬ್ವೆ ಎದುರು ಮೂವರ ಪಾದಾರ್ಪಣೆಗೆ ವೇದಿಕೆ ಸಜ್ಜು! ಭಾರತ-ಜಿಂಬಾಬ್ವೆ ಮ್ಯಾಚ್ ಆರಂಭದ ಸಮಯದಲ್ಲೂ ಮಹತ್ವದ ಬದಲಾವಣೆ

Published : Jul 23, 2026, 12:56 PM IST
India vs Zimbabwe

ಸಾರಾಂಶ

ಇಂದು ಹರಾರೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡದಲ್ಲಿ ರಿಂಕು ಸಿಂಗ್ ಕಮ್‌ಬ್ಯಾಕ್ ಮಾಡಲಿದ್ದು, ಹಲವು ಯುವ ಆಟಗಾರರು ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಇಂದು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ದಯನೀಯ ಸೋಲು ಅನುಭವಿಸಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಇದೀಗ ಜಿಂಬಾಬ್ವೆ ಎದುರು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಅಂದಹಾಗೆ ಜಿಂಬಾಬ್ವೆ ತಂಡವನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯನ್ನರಿಗೆ ಸೋಲಿನ ಶಾಕ್ ನೀಡುವಲ್ಲಿ ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡವು ಯಶಸ್ವಿಯಾಗಿತ್ತು. ಹೀಗಾಗಿ ಇಂದು ಭಾರತ ತಂಡವು ಬಲಿಷ್ಠ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.

ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಆರಂಭಿರಾಗಿ ಅಭಿಷೇಕ್ ಶರ್ಮಾ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಇನ್ನು ಬ್ಯಾಕ್‌ಅಪ್ ಓಪನ್ನರ್ ಆಗಿ ಪ್ರಭ್‌ಸಿಮ್ರನ್ ಸಿಂಗ್ ಅವರಿದ್ದರೂ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಐದನೇ ಕ್ರಮಾಂಕದಲ್ಲಿ ಉಪನಾಯಕ ತಿಲಕ್ ವರ್ಮಾ ಮೈದಾನಕ್ಕಿಳಿಯೋದು ಬಹುತೇಕ ಕನ್ಫರ್ಮ್.

ರಿಂಕು ಸಿಂಗ್‌ ಕಮ್‌ಬ್ಯಾಕ್‌ಗೆ ವೇದಿಕೆ ಸಜ್ಜು!

ಇನ್ನು 2026ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಭಾರತ ತಂಡದಿಂದ ಹೊರಬಿದ್ದಿರುವ ರಿಂಕು ಸಿಂಗ್ ಇದೀಗ ಜಿಂಬಾಬ್ವೆ ಎದುರಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಆರನೇ ಕ್ರಮಾಂಕದಲ್ಲಿ ಶಿವಂ ದುಬೆ ಕಣಕ್ಕಿಳಿದರೇ, ಏಳನೇ ಕ್ರಮಾಂಕದಲ್ಲಿ ಮ್ಯಾಚ್ ಫಿನಿಶರ್ ರಿಂಕು ಸಿಂಗ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಹೀಗಾದಲ್ಲಿ ಸೂರ್ಯಾನ್ಶ್‌ ಶೆಡ್ಗೆ ಬೆಂಚ್ ಕಾಯಿಸಬೇಕಾಗಿ ಬರಬಹುದು.

ಇಂದು ಮೂವರು ಕ್ರಿಕೆಟಿಗರು ಭಾರತ ತಂಡಕ್ಕೆ ಪಾದಾರ್ಪಣೆ?

ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಪರ ಮೂವರು ಯುವ ಕ್ರಿಕೆಟಿಗರು ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಶೋಕ್ ಶರ್ಮಾ, ಹರ್ಷ್ ದುಬೆ ಹಾಗೂ ಯಶ್ ಠಾಕೂರ್ ಭಾರತ ಟಿ20 ತಂಡದಲ್ಲಿ ಮೊದಲ ಬಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಭಾರತ-ಜಿಂಬಾಬ್ವೆ ಟಿ20 ಸರಣಿಯ ಪಂದ್ಯ ಆರಂಭದ ಸಮಯದಲ್ಲೂ ಮಹತ್ವದ ಬದಲಾವಣೆ:

ಸಾಮಾನ್ಯವಾಗಿ ಭಾರತ ತವರಿನಲ್ಲಿ ಹಾಗೂ ತವರಿನಾಚೆ ಆಡುವ ಟಿ20 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಅಥವಾ 7.30ರಿಂದ ಆರಂಭವಾಗಲಿದೆ. ಆದರೆ ಇದೀಗ ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಪಂದ್ಯಗಳು ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ. ಹೌದು, ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಭಾರತೀಯ ಕಾಲಮಾನ ಸಂಜೆ 4.30ರಿಂದ ಆರಂಭವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ ಸಂಜೆ 4 ಗಂಟೆಗೆ ನಡೆಯಲಿದೆ. ಈ ಬಾರಿ ಜಿಯೋ ಫೈಬರ್‌ ಸಂಪರ್ಕ ಹೊಂದಿರುವವರು ಯುನೈಟ್8 (Unite8) ಚಾನೆಲ್‌ನಲ್ಲಿ ಈ ಮ್ಯಾಚ್ ವೀಕ್ಷಿಸಬಹುದು. ಇದರ ಜತೆಗೆ ಡಿಡಿ ಸ್ಪೋರ್ಟ್ಸ್ ಹಾಗೂ ಓಟಿಟಿಯಲ್ಲಿ ಫ್ಯಾನ್‌ಕೋಡ್‌ನಲ್ಲೂ ಟಿ20 ಮ್ಯಾಚ್‌ಗಳನ್ನು ವೀಕ್ಷಿಸಬಹುದಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಚಿನ್‌ ದಾಖಲೆ ಮುರಿದು ವೈಭವ್‌ ಸೂರ್ಯವಂಶಿ ಚರಿತ್ರೆ, ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ನಿಟ್ಟುಸಿರು ಬಿಟ್ಟ ಶ್ರೇಯಸ್‌ ಅಯ್ಯರ್‌
ಅಣ್ಣನ ತ್ಯಾಗ, ತಮ್ಮನ ಕನಸು; 160 KMPH ವೇಗದ ಟೀಂ ಇಂಡಿಯಾದ ಹೊಸ ಅಸ್ತ್ರ ಅಶೋಕ್ ಶರ್ಮಾ!