ಇಂದಿನಿಂದ ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭ
ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
ಸರಣಿ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ ಪಡೆ
ಪೋರ್ಟ್ ಆಫ್ ಸ್ಪೇನ್(ಜು.20): ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 2ನೇ ಟೆಸ್ಟ್ ಗುರುವಾರದಿಂದ ಆರಂಭಗೊಳ್ಳಲಿದ್ದು, ಉಭಯ ರಾಷ್ಟ್ರಗಳ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಮುಖಾಮುಖಿಯಲ್ಲಿ ಭಾಗಿಯಾಗಲು ಎರಡೂ ತಂಡಗಳನ್ನು ಉತ್ಸುಕಗೊಂಡಿವೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ ಈ ಪಂದ್ಯವನ್ನೂ ಗೆದ್ದು, ವಿಂಡೀಸ್ ವಿರುದ್ಧ ಸತತ 9ನೇ ಟೆಸ್ಟ್ ಸರಣಿ ಜಯಿಸುವ ನಿರೀಕ್ಷೆಯಲ್ಲಿದ್ದರೆ, 2002ರ ಬಳಿಕ ಮೊದಲ ಬಾರಿಗೆ ಭಾರತ ವಿರುದ್ಧ ಟೆಸ್ಟ್ ಗೆಲ್ಲಲು ವಿಂಡೀಸ್ ಹಪಹಪಿಸುತ್ತಿದೆ.
2002ರಿಂದ ವಿಂಡೀಸ್ ವಿರುದ್ಧ ಭಾರತ ಸೋತಿಲ್ಲ!
ಭಾರತ ವಿರುದ್ಧ ವಿಂಡೀಸ್ ಕೊನೆ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದ್ದು 2002ರಲ್ಲಿ. ಭಾರತ ಕೈಗೊಂಡಿದ್ದ ಪ್ರವಾಸದಲ್ಲಿ ನಡೆದಿದ್ದ 5 ಪಂದ್ಯಗಳ ಪೈಕಿ ವಿಂಡೀಸ್ 2ರಲ್ಲಿ ಗೆದ್ದರೆ, ಭಾರತ 1 ಪಂದ್ಯ ಜಯಿಸಿತ್ತು. 2-1ರಲ್ಲಿ ವಿಂಡೀಸ್ ಸರಣಿ ತನ್ನದಾಗಿಸಿಕೊಂಡಿತ್ತು. ಆ ಬಳಿಕ ಉಭಯ ದೇಶಗಳ ನಡುವೆ 8 ಟೆಸ್ಟ್ ಸರಣಿಗಳು ನಡೆದಿದ್ದು, 8ರಲ್ಲೂ ಭಾರತವೇ ಗೆದ್ದಿದೆ. 8 ಸರಣಿಗಳಲ್ಲಿ ಒಟ್ಟು 23 ಪಂದ್ಯಗಳು ನಡೆದಿದ್ದು, ಭಾರತ 14ರಲ್ಲಿ ಗೆಲುವು ಸಾಧಿಸಿ ಇನ್ನುಳಿದ 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಎರಡೂ ತಂಡಗಳು ಕನಿಷ್ಠ ಮುಂದಿನ 5 ತಿಂಗಳು ಟೆಸ್ಟ್ ಆಡುವುದಿಲ್ಲ. ಹೀಗಾಗಿ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಸಂಪಾದಿಸಲು ಎದುರು ನೋಡುತ್ತಿವೆ. ವೆಸ್ಟ್‌ಇಂಡೀಸ್ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಣಲು ಕಾಯುತ್ತಿದ್ದರೆ, ಭಾರತ ತನ್ನ ಯುವ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್, ಇಶಾನ್ ಕಿಶನ್ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವುದನ್ನು ನೋಡಲು ಆಸಕ್ತಿ ಹೊಂದಿದೆ.
4ನೇ ಆ್ಯಷಸ್ ಟೆಸ್ಟ್: ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಆಸೀಸ್..!
ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ನಿರೀಕ್ಷೆ ಇಲ್ಲ. ಯಶಸ್ವಿ ಜೈಸ್ವಾಲ್ ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಸ್ಥಿರತೆ ಕಾಯ್ದುಕೊಳ್ಳಬೇಕಿದೆ.
ಮತ್ತೊಂದೆಡೆ ವಿಂಡೀಸ್ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆ ಇದೆ. ರೇಮನ್ ರೀಫರ್ ತಂಡದಿಂದ ಹೊರಬಿದ್ದಿದ್ದು, ಅವರ ಬದಲು ಎಡಗೈ ಬ್ಯಾಟರ್ ಕರ್ಕ್ ಮೆಕೆನ್ಜಿ ಆಡಬಹುದು. ಜೊಮೆನ್ ವಾರ್ರಿಕನ್ ಅಥವಾ ರಕ್‌ಹೀಮ್ ಕಾರ್ನ್‌ವಾಲ್ ಬದಲು ವೇಗಿ ಶ್ಯಾನನ್ ಗೇಬ್ರಿಯಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಜೀವನೋಪಾಯಕ್ಕಾಗಿ ಯಶಸ್ವಿ ಜೈಸ್ವಾಲ್ ಎಂದೂ ಪಾನಿಪೂರಿ ಮಾರಿಲ್ಲ..! ಶಾಕಿಂಗ್ ವಿಚಾರ ಬಾಯ್ಬಿಟ್ಟ ಕೋಚ್..!
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಜಡೇಜಾ, ಇಶಾನ್ ಕಿಶನ್, ಅಶ್ವಿನ್, ಶಾರ್ದೂಲ್, ಉನಾದ್ಕತ್, ಸಿರಾಜ್.
ವಿಂಡೀಸ್: ಕ್ರೆಗ್ ಬ್ರಾಥ್‌ವೇಟ್(ನಾಯಕ), ಚಂದ್ರಪಾಲ್, ಅಥನಾಜ್, ಬ್ಲ್ಯಾಕ್‌ವುಡ್, ಮೆಕೆನ್ಜಿ, ಹೋಲ್ಡರ್, ಜೋಸ್ವಾ ಸಿಲ್ವಾ, ಕಾರ್ನ್‌ವಾಲ್/ಸಿಂಕ್ಲೇರ್, ಜೋಸೆಫ್, ರೋಚ್, ಗೇಬ್ರಿಯಲ್/ವಾರ್ರಿಕನ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಫ್ಯಾನ್ ಕೋಡ್
ಪಿಚ್ ರಿಪೋರ್ಟ್
ಕ್ವೀನ್ಸ್ ಪಾರ್ಕ್‌ನಲ್ಲಿ ಕೊನೆ ಬಾರಿಗೆ ಟೆಸ್ಟ್ ನಡೆದಿದ್ದು 2018ರಲ್ಲಿ. ಸಂಪ್ರದಾಯಿಕವಾಗಿ ಇಲ್ಲಿನ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಿದೆ. ಈ ಪಂದ್ಯದಲ್ಲೂ ವೇಗಿಗಳೇ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಹೆಚ್ಚು.
ಪಂದ್ಯಕ್ಕೆ ಮಳೆ ಭೀತಿ: 2ನೇ ಟೆಸ್ಟ್‌ಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಗುರುವಾರದಿಂದ 5 ದಿನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮಳೆ ಮುನ್ಸೂಚನೆ ಇದೆ ಎಂದು ವರದಿಯಾಗಿದೆ.