Ind vs SL ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದು ನಮಗೆ ದೊಡ್ಡ ಹೊಡೆತ: ರೋಹಿತ್ ಶರ್ಮಾ

By Suvarna News  |  First Published Feb 23, 2022, 5:55 PM IST

* ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಫೆಬ್ರವರಿ 24ರಿಂದ ಆರಂಭ

* ಲಂಕಾ ಎದುರಿನ ಸರಣಿಯಿಂದ ಹೊರಬಿದ್ದ ಸೂರ್ಯಕುಮಾರ್ ಯಾದವ್, ದೀಪಕ್ ಚಹರ್

* ಸಂಜು ಸ್ಯಾಮ್ಸನ್‌ ಅವರು ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದ ಹಿಟ್‌ಮ್ಯಾನ್


ಲಖನೌ(ಫೆ.23): ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಇದೀಗ ಲಂಕಾ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ಗಾಯದ ಸಮಸ್ಯೆಯಿಂದಾಗಿ ಸೂರ್ಯಕುಮಾರ್ ಯಾದವ್ ತಂಡದಿಂದ ಹೊರಬಿದ್ದಿರುವುದು ಭಾರತ ಕ್ರಿಕೆಟ್ ತಂಡದ (Indian Cricket Team) ಪಾಲಿಗೆ ದೊಡ್ಡ ಹಿನ್ನಡೆಯಾದಂತೆ ಆಗಿದೆ. ಯಾಕೆಂದರೆ ಸೂರ್ಯ ಉತ್ತಮ ಫಾರ್ಮ್‌ನಲ್ಲಿದ್ದರು. ಇದೀಗ ಸೂರ್ಯ ಅನುಪಸ್ಥಿತಿಯಲ್ಲಿ ಮಿಂಚಲು ಹಲವು ಪ್ರತಿಭಾನ್ವಿತ ಆಟಗಾರರು ರೆಡಿಯಾಗಿದ್ದಾರೆ ಎಂದು ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.

ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯು ಫೆಬ್ರವರಿ 24ರಿಂದ ಲಖನೌದಲ್ಲಿ ಆರಂಭವಾಗಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹರ್ (Deepak Chahar) ಹಾಗೂ ಸೂರ್ಯಕುಮಾರ್ ಯಾದವ್‌ ಲಂಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದು, ಈ ಇಬ್ಬರು ಆಟಗಾರರು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

Latest Videos

undefined

ಸೂರ್ಯಕುಮಾರ್ ಯಾದವ್‌, ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಕುರಿತಂತೆ ಮಾತನಾಡಿದ ಟೀಂ ಇಂಡಿಯಾ (Team India) ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ (Suryakumar Yadav) ಅನುಪಸ್ಥಿತಿ, ನಮ್ಮ ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾದಂತೆ ಆಗಿದೆ. ಅವರು ಒಳ್ಳೆಯ ಫಾರ್ಮ್‌ನಲ್ಲಿದ್ದರು. ಇನ್ನು ಹಲವು ಮಂದಿ ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಸಂಜು ಸ್ಯಾಮ್ಸನ್‌ಗೆ (Sanju Samson) ತಂಡದಲ್ಲಿ ಸ್ಥಾನ ನೀಡಿರುವ ಕುರಿತಂತೆ ಮಾತನಾಡಿದ ರೋಹಿತ್ ಶರ್ಮಾ, ಕೇರಳದ ವಿಕೆಟ್ ಕೀಪರ್‌ ಬ್ಯಾಟರ್ ಸಾಕಷ್ಟು ಪ್ರತಿಭಾನ್ವಿತ ಆಟಗಾರನಾಗಿದ್ದು, ಒಳ್ಳೆಯ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್‌ ಅವರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದ್ದಾರೆ.

Ind vs SL: ಲಂಕಾ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್‌ ಶಾಕ್‌...!

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದ ಪರ ಕಳೆದ ಜುಲೈನಲ್ಲಿ ಶ್ರೀಲಂಕಾ ವಿರುದ್ದದ ಚುಟುಕು ಕ್ರಿಕೆಟ್‌ ಸರಣಿಯಲ್ಲಿ ಕಣಕ್ಕಿಳಿದಿದ್ದರು. 2015ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ 27 ವರ್ಷದ ಸಂಜು ಸ್ಯಾಮ್ಸನ್, ಇದುವರೆಗೂ ಭಾರತ ಪರ ಕೇವಲ 10 ಪಂದ್ಯಗಳನ್ನು ಆಡಿದ್ದು 11.70 ರ ಬ್ಯಾಟಿಂಗ್ ಸರಾಸರಿಯಲ್ಲಿ 117 ರನ್ ಬಾರಿಸಿದ್ದಾರೆ. 

ಸಂಜು ಸ್ಯಾಮ್ಸನ್ ಅವರೊಬ್ಬ ಪ್ರತಿಭಾನ್ವಿತ ಅಟಗಾರ. ಯಾವಾಗೆಲ್ಲಾ ಅವರು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದಾರೋ ಆಗೆಲ್ಲಾ ಸಮಯದಲ್ಲೂ ಒಳ್ಳೆಯ ಇನಿಂಗ್ಸ್‌ ಕಟ್ಟಿದ್ದಾರೆ. ತಮ್ಮ ಬ್ಯಾಟಿಂಗ್ ಕಲೆಯನ್ನು ಮತ್ತೊಮ್ಮೆ ಅನಾವರಣ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರನ್ನು ಮ್ಯಾನೇಜ್‌ಮೆಂಟ್ ಪರಿಗಣಿಸುವ ಸಾಧ್ಯತೆಯಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಫೆಬ್ರವರಿ 24ರಂದು ಲಖನೌದಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಫೆಬ್ರವರಿ 26 ಹಾಗೂ 27ರಂದು ಧರ್ಮಶಾಲಾದಲ್ಲಿ ಉಳಿದೆರಡು ಟಿ20 ಪಂದ್ಯಗಳ ನಡೆಯಲಿದೆ.

click me!