ICC U-19 world Cup: ಏರ್ಪೋರ್ಟ್‌ನಲ್ಲೇ ಭಾರತ ಕಿರಿಯರನ್ನು ತಡೆದು ನಿಲ್ಲಿಸಿದ್ದ ಅಧಿಕಾರಿಗಳು..!

By Kannadaprabha NewsFirst Published Feb 23, 2022, 9:52 AM IST
Highlights

* ಅಂಡರ್ 19 ವಿಶ್ವಕಪ್ ಟೂರ್ನಿಯ ಕರಾಳ ಘಟನೆ ಬಿಚ್ಚಿಟ್ಟ ಮ್ಯಾನೇಜರ್

* 7 ಆಟಗಾರರನ್ನು ಕೋವಿಡ್‌ ಲಸಿಕೆ ಹಾಕಲಿಲ್ಲ ಎಂಬ ಕಾರಣಕ್ಕೆ ಕೆರಿಬಿಯನ್‌ನಲ್ಲಿ ವಿಮಾನ ನಿಲ್ದಾಣದಲ್ಲೇ ತಡೆದು ನಿಲ್ಲಿಸಲಾಗಿತ್ತು

* ಭಾರತ ಹಾಗೂ ಟ್ರೆನಿಡಾಡ್‌ ಸರ್ಕಾರ ಮಧ್ಯ ಪ್ರವೇಶಿಸಿದ ಬಳಿಕ ಸಮಸ್ಯೆ ಇತ್ಯರ್ಥ

ನವದೆಹಲಿ(ಫೆ.23): ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ (ICC U-19 World Cup) ಆಡಲು ತೆರಳಿದ್ದ ಭಾರತದ 7 ಆಟಗಾರರನ್ನು ಕೋವಿಡ್‌ ಲಸಿಕೆ (COVID Vaccine) ಹಾಕಲಿಲ್ಲ ಎಂಬ ಕಾರಣಕ್ಕೆ ಕೆರಿಬಿಯನ್‌ನಲ್ಲಿ ವಿಮಾನ ನಿಲ್ದಾಣದಲ್ಲೇ ತಡೆದು ನಿಲ್ಲಿಸಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ‘ಅಧಿಕಾರಿಗಳು 24 ಗಂಟೆಗೂ ಹೆಚ್ಚು ಸಮಯ ಆಟಗಾರರನ್ನು ತಡೆದಿದ್ದು, ಭಾರತಕ್ಕೆ ಹಿಂದಿರುಗಲು ಹೇಳಿದ್ದರು. ಆದರೆ ಸರ್ಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರವಾಯಿತು’ ಎಂದು ತಂಡದ ಮ್ಯಾನೇಜರ್‌ ಲೊಬ್ಜಂಗ್‌ ತೇನ್ಸಿಂಗ್‌ ಮಂಗಳವಾರ ತಿಳಿಸಿದ್ದಾರೆ.

'ಏರ್ಪೋರ್ಟ್‌ ಆಫ್‌ ಸ್ಪೇನ್‌ಗೆ ತಲುಪಿದ ನಾವು ಗಯಾನಾಕ್ಕೆ ಖಾಸಗಿ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ರವಿ ಕುಮಾರ್‌, ರಘುವನ್ಶಿ ಸೇರಿದಂತೆ 7 ಮಂದಿಯನ್ನು ತಡೆದು ನಿಲ್ಲಿಸಿ ಭಾರತಕ್ಕೆ ಹಿಂದಿರುಗಲು ಹೇಳಿದ್ದರು. ನಾವು ಓಡಿ ಹೋಗದಂತೆ ನಮ್ಮ ಸುತ್ತಲೂ ಭದ್ರತೆ ಕೈಗೊಂಡಿದ್ದರು. ಭಾರತದಲ್ಲಿ 18 ವರ್ಷದ ಕೆಳಗಿನವರಿಗೆ ಲಸಿಕೆ ನೀಡುವುದನ್ನು ಆರಂಭಿಸಿಲ್ಲ ಎಂದರೂ ಕೇಳಲಿಲ್ಲ. ಬಳಿಕ ಭಾರತ ಹಾಗೂ ಟ್ರೆನಿಡಾಡ್‌ ಸರ್ಕಾರ ಮಧ್ಯಪ್ರವೇಶಿಸಿತು. ಅದೊಂದು ಭಯಾನಕ ಅನುಭವ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಕಿರಿಯರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿದ ಯಶ್‌ ಧುಳ್‌ (Yash Dhull) ನಾಯಕತ್ವದ ತಂಡ 5ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಭಾರತ ವಿರುದ್ಧ ನ್ಯೂಜಿಲೆಂಡ್‌ ವನಿತೆಯರಿಗೆ 4-0 ಮುನ್ನಡೆ

ಕ್ವೀನ್ಸ್‌ಟೌನ್‌: ನ್ಯೂಜಿಲೆಂಡ್‌ ವಿರುದ್ಧದ 4ನೇ ಏಕದಿನ ಪಂದ್ಯದಲ್ಲೂ ಸೋಲನುಭವಿಸಿದ ಭಾರತ ಮಹಿಳಾ ತಂಡ 5 ಪಂದ್ಯಗಳ ಸರಣಿಯಲ್ಲಿ 0-4 ಹಿನ್ನಡೆ ಅನುಭವಿಸಿದ್ದು, ವೈಟ್‌ವಾಷ್‌ ಭೀತಿಗೆ ಸಿಲುಕಿದೆ. ಮಂಗಳವಾರ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಆತಿಥೇಯ ಕಿವೀಸ್‌ 63 ರನ್‌ಗಳಲ್ಲಿ ಜಯಗಳಿಸಿತು.

ಮಳೆಯಿಂದಾಗಿ ಪಂದ್ಯವನ್ನು 20 ಓವರ್‌ಗೆ ಇಳಿಸಲಾಯಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 5 ವಿಕೆಟ್‌ಗೆ ಬರೋಬ್ಬರಿ 191 ರನ್‌ ಕಲೆ ಹಾಕಿತು. ಅಮೇಲಿಯಾ ಕೇರ್‌ 33 ಎಸೆತಗಳಲ್ಲಿ 68 ರನ್‌ ಸಿಡಿಸಿದರು. ಸುಜೀ ಬೇಟ್ಸ್‌ (41) ಕೂಡಾ ತಂಡಕ್ಕೆ ನೆರವಾದರು. ಕಠಿಣ ಗುರಿ ಬೆನ್ನತ್ತಿದ ಭಾರತ, 17.5 ಓವರ್‌ಗಳಲ್ಲಿ 128 ರನ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ರಿಚಾ ಘೋಷ್‌(29 ಎಸೆತಗಳಲ್ಲಿ 52) ಏಕಾಂಗಿ ಹೋರಾಟ ನಡೆಸಿದರೆ, ನಾಯಕಿ ಮಿಥಾಲಿ ರಾಜ್‌ 30 ರನ್‌ ಗಳಿಸಿದರು. ಸರಣಿಯ ಕೊನೆ ಪಂದ್ಯ ಫೆ.24ಕ್ಕೆ ನಡೆಯಲಿದೆ.

IPL Player Salaries : ಐಪಿಎಲ್ ಅಂದ್ರೆ ಸುಮ್ನೆ ಅಲ್ಲ, ಇವ್ರು ಕೊಡೋ ಸ್ಯಾಲರಿ ಮುಂದೆ ಬೇರೆ ಟಿ20 ಲೀಗ್ ಇಲ್ಲ!

ರಿಚಾ ದಾಖಲೆ: ಮಹಿಳಾ ಏಕದಿನದಲ್ಲಿ ಭಾರತದ ಪರ ವೇಗದ ಅರ್ಧಶಕಕ ಸಿಡಿಸಿದ ಹಿರಿಮೆಗೆ ರಿಚಾ ಪಾತ್ರರಾಗಿದ್ದಾರೆ. ಅವರು ಕೇವಲ 26 ಎಸೆತಗಳಲ್ಲಿ 50 ರನ್‌ ಪೂರೈಸಿದ್ದಾರೆ. ಇದಕ್ಕೂ ಮೊದಲು 2008ರಲ್ಲಿ ಶ್ರೀಲಂಕಾ ವಿರುದ್ಧ ರುಮೇಲಿ ಧಾರ್‌ 29 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.

ಏಕದಿನ ರ‍್ಯಾಂಕಿಂಗ್‌‌: ದೀಪ್ತಿ ರಿಚಾ, ಮೇಘನಾ ಜಿಗಿತ

ದುಬೈ: ಐಸಿಸಿ ಮಹಿಳಾ ಏಕದಿನ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದ್ದು, ಭಾರತದ ದೀಪ್ತಿ ಶರ್ಮಾ 2 ಸ್ಥಾನ ಜಿಗಿತ ಕಂಡು 18ನೇ ಸ್ಥಾನಕ್ಕೇರಿದ್ದಾರೆ. ಯುವ ಆಟಗಾರ್ತಿ ರಿಚಾ ಘೋಷ್‌ 15 ಸ್ಥಾನ ಮೇಲೇರಿದ್ದು, 54ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದ ನಾಯಕಿ ಮಿಥಾಲಿ ರಾಜ್‌ (Mithali Raj) 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಸಬ್ಬನೇನಿ ಮೇಘನಾ 67ನೇ ಸ್ಥಾನಕ್ಕೇರಿದರೆ, ಸ್ಮೃತಿ ಮಂಧನಾ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಬೌಲಿಂಗ್‌ ಗೋಸ್ವಾಮಿ ಬೌಲಿಂಗ್‌ ವಿಭಾಗದಲ್ಲಿ 8ನೇ ಸ್ಥಾನ ಭದ್ರ ಪಡಿಸಿಕೊಂಡಿದ್ದು, ಅಗ್ರ 10ರಲ್ಲಿ ಸ್ಥಾನ ಗಳಿಸಿಕೊಂಡ ಭಾರತದ ಏಕೈಕ ಆಟಗಾರ್ತಿ ಎನಿಸಿಕೊಂಡಿದ್ದಾರೆ. 3ನೇ ಪಂದ್ಯದಲ್ಲಿ ಅಜೇಯ 69 ರನ್‌ ಗಳಿಸುವ ಜೊತೆಗೆ, 2ನೇ ಏಕದಿನದಲ್ಲಿ 4 ವಿಕೆಟ್‌ ಉರುಳಿಸಿದ್ದ ದೀಪ್ತಿ ಶರ್ಮಾ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲೂ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ 18ನೇ ಸ್ಥಾನಕ್ಕೇರಿದ್ದರೆ, ಬೌಲಿಂಗ್‌ನಲ್ಲಿ 6 ಸ್ಥಾನ ಮೇಲೇರಿ 13ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್‌ಗಳ ವಿಭಾದಲ್ಲಿ 4 ರ‍್ಯಾಂಕ್ ಪಡೆದಿದ್ದಾರೆ.
 

click me!