Ind vs SL: ಟೀಂ ಇಂಡಿಯಾಗಿಂದು ಲಂಕಾ ಮಣಿಸಿ ಟಿ20 ಸರಣಿ ಗೆಲ್ಲುವ ತವಕ..!

By Kannadaprabha News  |  First Published Feb 26, 2022, 7:35 AM IST

* ಇಂಡೋ-ಲಂಕಾ ಎರಡನೇ ಟಿ20 ಪಂದ್ಯಕ್ಕಿಂದು ಧರ್ಮಶಾಲಾ ಆತಿಥ್ಯ

* 2ನೇ ಪಂದ್ಯ ಗೆದ್ದು ಟಿ20 ಸರಣಿ ಗೆಲ್ಲುವ ತವಕದಲ್ಲಿದೆ ಟೀಂ ಇಂಡಿಯಾ

* ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವಿನ ಹೊಸ್ತಿಲಲ್ಲಿದೆ ಭಾರತ ಕ್ರಿಕೆಟ್ ತಂಡ


ಧರ್ಮಶಾಲಾ(ಫೆ.26): ಐಸಿಸಿ ಟಿ20 ವಿಶ್ವಕಪ್‌ಗೆ (ICC T20 World Cup) ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧದ ಸರಣಿಯನ್ನೂ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಲಖನೌನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು 62 ರನ್‌ಗಳಿಂದ ಗೆದ್ದುಕೊಂಡಿದ್ದ ಭಾರತ, ಶನಿವಾರ 2ನೇ ಪಂದ್ಯವನ್ನಾಡಲಿದ್ದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ತೋರಿದ್ದ ಭಾರತ, 2ನೇ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ಮುಂದುವರಿಸಲು ಎದುರು ನೋಡುತ್ತಿದೆ. 

ಆರಂಭಿಕನಾಗಿ ಉತ್ತಮ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಲು ಕಷ್ಟಪಡುತ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್‌ ಕಿಶನ್‌ (Ishan Kishan), ಮೊದಲ ಪಂದ್ಯದಲ್ಲಿ ಸ್ಫೋಟಕ ಆಟವಾಡಿದ್ದರು. ಶ್ರೇಯಸ್‌ ಅಯ್ಯರ್‌ (Shreyas Iyer) ತಮಗೆ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್‌, ವೆಂಕಟೇಶ್‌ ಅಯ್ಯರ್‌, ರವೀಂದ್ರ ಜಡೇಜಾ (Ravindra Jadeja) ಇನ್ನಷ್ಟು ಸಮಯ ಕ್ರೀಸ್‌ನಲ್ಲಿ ಕಳೆಯಲು ಎದುರು ನೋಡುತ್ತಿದ್ದಾರೆ. ಇದುವರೆಗೂ ಟೀಂ ಇಂಡಿಯಾ ತವರಿನಲ್ಲಿ ಸತತ 6 ಟಿ20 ಸರಣಿ ಜಯಿಸಿದ್ದು, ಇದೀಗ ಎರಡನೇ ಪಂದ್ಯವನ್ನು ಜಯಿಸಿದರೆ, ಭಾರತ ತವರು ನೆಲದಲ್ಲಿ ಸತತ 7 ಟಿ20 ಸರಣಿ ಜಯಿಸಿದ ಸಾಧನೆ ಮಾಡಿದಂತಾಗಲಿದೆ. 

Latest Videos

ಇನ್ನು ಬೌಲಿಂಗ್‌ ಪಡೆ ಅನುಭವಿ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ(Jasprit Bumrah), ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್‌ರನ್ನು ಹೊಂದಿದೆ. ಮೊದಲ ಪಂದ್ಯದಲ್ಲಿ ಭಾರತ ವೆಂಕಟೇಶ್‌ ಹಾಗೂ ದೀಪಕ್‌ ಹೂಡಾಗೂ ಬೌಲಿಂಗ್‌ ನೀಡಿತ್ತು. ಇರುವ ಆಯ್ಕೆಗಳನ್ನೆಲ್ಲಾ ಪರೀಕ್ಷೆ ನಡೆಸಲು ರೋಹಿತ್‌ ಶರ್ಮಾಗೆ ಮತ್ತೊಂದು ಅವಕಾಶ ಸಿಗಲಿದೆ.

Ind vs SL : ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಜಯ

ಎಲ್ಲಾ ಮೂರೂ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಶ್ರೀಲಂಕಾ, ಸುಧಾರಿತ ಆಟವಾಡುವ ವಿಶ್ವಾಸದಲ್ಲಿದೆ. ಚರಿತ್‌ ಅಸಲಂಕ, ದುಶ್ಮಾಂತ ಚಮೀರ ಸೇರಿ ಕೆಲವೇ ಕೆಲವರು ಭಾರತೀಯರಿಗೆ ಪ್ರತಿರೋಧವೊಡ್ಡಲು ಯಶಸ್ವಿಯಾಗಿದ್ದರು. ತನ್ನ ಬ್ಯಾಟರ್‌ಗಳು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿದರಷ್ಟೇ ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎನ್ನುವುದನ್ನು ನಾಯಕ ದಸುನ್‌ ಶಾನಕ ಒಪ್ಪಿಕೊಂಡಿದ್ದಾರೆ.

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 23 ಪಂದ್ಯಗಳ ಪೈಕಿ ಟೀಂ ಇಂಡಿಯಾ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಶ್ರೀಲಂಕಾ ತಂಡವು 7 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಶ್ರೇಯಸ್ ಅಯ್ಯರ್‌, ಸಂಜು ಸ್ಯಾಮ್ಸನ್‌, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್‌, ದೀಪಕ್ ಹೂಡಾ, ಹರ್ಷಲ್‌ ಪಟೇಲ್, ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್‌.

ಲಂಕಾ: ಕಮಿಲ್ ಮಿಶ್ರಾ, ಪತುಮಾ ನಿಸ್ಸಾಂಕ, ಮೆಂಡಿಸ್‌, ಚರಿತ್ ಅಸಲಂಕ, ದಿನೇಶ್ ಚಾಂಡಿಮಲ್(ವಿಕೆಟ್ ಕೀಪರ್), ಜನಿತ್ ಲಿಯಾಂಗೆ ದಶುನ್ ಶನಕ(ನಾಯಕ), ಜೆಫ್ರಿ ವೆಂಡರ್ಸೆ, ಚಮಿಕಾ ಕರುಣರತ್ನೆ, ದುಸ್ಮಂತ ಚಮೀರ, ಪ್ರವೀಣ್ ಜಯವಿಕ್ರಮ,ದುಸ್ಮಂತ ಚಮಿರಾ, ಲಹೀರು ಕುಮಾರ

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಕ್ರೀಡಾಂಗಣ ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರದಲ್ಲಿರುವ ಕಾರಣ ಇಲ್ಲಿನ ಪಿಚ್‌ ವೇಗದ ಬೌಲಿಂಗ್‌ಗೆ ಹೆಚ್ಚು ಸಹಕಾರ ನೀಡಲಿದೆ. ಇಲ್ಲಿ 9 ಅಂ.ರಾ.ಟಿ20 ಪಂದ್ಯಗಳು ನಡೆದಿದ್ದು, 3 ಪಂದ್ಯಗಳು ಮಳೆಯಿಂದ ರದ್ದಾಗಿವೆ. ಉಳಿದ 6 ಪಂದ್ಯಗಳಲ್ಲಿ 4ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆಲುವು ಸಾಧಿಸಿದೆ.

click me!