391 ರನ್ ಟಾರ್ಗೆಟ್ ಪಡೆದ ಶ್ರೀಲಂಕಾಗೆ ಮೊಹಮ್ಮದ್ ಸಿರಾಜ್ ಹಾಗೂ ಟೀಂ ಇಂಡಿಯಾ ದಾಳಿಗೆ ಬೆಚ್ಚಿಬಿದ್ದಿತು. ಇದರ ಪರಿಣಾಮ 73 ರನ್‌ಗೆ ಲಂಕಾ ಆಲೌಟ್ ಆಗಿದೆ. 317 ರನ್ ಭರ್ಜರಿ ಗೆಲುವಿನ ಮೂಲಕ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ತಿರುವಂತಪುರಂ(ಜ.15): ಟೀಂ ಇಂಡಿಯಾದ ಅಬ್ಬರದ ಬ್ಯಾಟಿಂಗ್, ಬಳಿಕ ಮಾರಕ ಬೌಲಿಂಗ್‌ಗೆ ಶ್ರೀಲಂಕಾ ಬಳಿ ಉತ್ತರವೇ ಇರಲಿಲ್ಲ. 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 391ರನ್ ಬೃಹತ್ ಮೊತ್ತ ಚೇಸ್ ಮಾಡಲು ಸಾಧ್ಯವಾಗದ ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 317 ರನ್ ಭರ್ಜರಿ ಗೆಲುವು ದಾಖಲಿಸಿದೆ. ಇಷ್ಟೇ ಅಲ್ಲ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕೈವಶ ಮಾಡಿದೆ.
ಶಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಸೆಂಚುರಿ ನರೆವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 390 ರನ್ ಸಿಡಿಸಿತ್ತು. ಬೃಹತ್ ಗುರಿ ನೋಡಿ ಕಂಗಾಲಾದ ಶ್ರೀಲಂಕಾ ರನ್ ಗಳಿಕೆ ಮಾತ್ರವಲ್ಲ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೇಗಿ ಮೊಹಮ್ಮದ್ ಸಿರಾಜ್ ದಾಳಿಗೆ ಆರಂಭದಿಂದಲೇ ಪತರುಗುಟ್ಟಿತು. ಸಿರಾಜ್ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಗೆ ಶ್ರೀಲಂಕಾ ಒಂದೊಂದೆ ವಿಕೆಟ್ ಕಳಚಿತು.
IND vs SL ಮತ್ತೊಂದು ಶತಕ ಸಿಡಿಸಿದ ವಿರಾಟ್, ಹೊಸ ವರ್ಷದಲ್ಲಿ ಹೊಸ ದಾಖಲೆ!
ಶ್ರೀಲಂಕಾ 7ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆವಿಷ್ಕಾ ಫರ್ನಾಂಡೋ ಕೇವಲ 1 ರನ್ ಸಿಡಿಸಿ ಔಟಾದರು. ನುವಾನಿಂಡು ಫರ್ನಾಂಡೋ ಹೋರಾಟದ ಸೂಚನೆ ನೀಡಿದರು. ಆದರೆ ಕುಸಾಲ್ ಮೆಂಡೀಸ್ 4 ರನ್ ಗಳಿಸಿ ನಿರ್ಗಮಿಸಿದರು. 22ರನ್‌ಗೆ ಶ್ರೀಲಂಕಾ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಚಾರಿತ್ ಅಸಲಂಕ 1 ರನ್‌ಗೆ ಸುಸ್ತಾದರು.
19 ರನ್ ಸಿಡಿಸಿದ ನುವಾನಿಂಡು ಫರ್ನಾಂಡೋ ವಿಕೆಟ್ ಪತನಗೊಂಡಿತು. ಇತ್ತ ಕುಸಿದ ತಂಡಕ್ಕೆ ನಾಯಕ ದಸೂನ್ ಶನಕ ಆಸರೆಯಾದರು. ಆದರೆ ನಾಯಕನಿಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ವಾನಿಂಡು ಹಸರಂಗ ಕೇವಲ 1 ರನ್ ಸಿಡಿಸಿ ಔಟಾದರು. ಚಾಮಿಕ ಕರುಣಾರತ್ನೆ 1 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಶ್ರೀಲಂಕಾ 39 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು.
ಲಂಕಾ ಸಂಕಷ್ಟಕ್ಕೆ ಸಿಲುಕಿದಾಗ ಏಕಾಂಗಿಯಾಗಿ ಹೋರಾಡಿ ಪಂದ್ಯಕ್ಕೆ ಆಸರೆಯಾಗಿರುವ ನಾಯಕ ದಸೂನ್ ಶನಕ ಈ ಬಾರಿಯೂ ತಂಡದ ಜವಾಬ್ದಾರಿ ಹೊತ್ತು ಬ್ಯಾಟ್ ಬೀಸಿದರು. ಆದರೆ ಈ ಹೋರಾಟ ಕೇವಲ 11 ರನ್‌ಗೆ ಅಂತ್ಯವಾಯಿತು. ವೇಗಿಗಳಿಗೆ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ಶನಕ, ಕುಲ್ದೀಪ್ ಸ್ಪಿನ್ ಮೋಡಿಗೆ ಬಲಿಯಾದರು. ಈ ಮೂಲಕ ಕಾಂಗ್ರೆಸ್ ಅರ್ಧಶತಕ ಪೂರೈಸುವಾಗ ಪ್ರಮುಖ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತದ ಭೀತಿ ಎದುರಿಸಿತು.
2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!
ದುನೀತ್ ವೆಲ್ಲಾಲೆಗಾ 3 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಲಹೀರು ಕುಮಾರ 9 ರನ್ ಸಿಡಿಸಿ ಔಟಾದರು. ಕಸೂನ್ ರಾಜೀತ ಅಜೇಯ 13 ರನ್ ಸಿಡಿಸಿದರೆ, ಅಶೇನ್ ಬಂಡಾರ ಗಾಯಗೊಂಡು ಹೊರನಡೆದರು. ಈ ಮೂಲಕ ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗೆ ಆಲೌಟ್ ಆಯಿತು. ಭಾರತ 317ರನ್ ಗೆಲುವು ದಾಖಲಿಸಿತು. ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.