Ind vs SL: ಲಂಕಾ ಎದುರಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ..!

By Naveen KodaseFirst Published Dec 28, 2022, 9:27 AM IST
Highlights

ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಟೀಂ ಇಂಡಿಯಾ ಪ್ರಕಟ
ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ
ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಾಯಕ

ನವದೆಹಲಿ(ಡಿ.28): ಮುಂದಿನ ವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ತವರಿನ ಟಿ20 ಸರಣಿಗೆ ನಿರೀಕ್ಷೆಯಂತೆಯೇ ಭಾರತ ತಂಡಕ್ಕೆ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ಖಾಯಂ ನಾಯಕ ರೋಹಿತ್‌ ಶರ್ಮಾ ಟಿ20 ಸರಣಿಯಿಂದ ಹೊರಬಿದ್ದಿದ್ದು, ಏಕದಿನ ಸರಣಿಗೆ ಮರಳಲಿದ್ದಾರೆ.

ಟಿ20 ತಂಡದಲ್ಲಿ ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಸೇರಿದಂತೆ ಹಿರಿಯರಿಗೆ ಕೊಕ್‌ ನೀಡಲಾಗಿದ್ದು, ಹಲವು ಯುವ ಆಟಗಾರರು 16 ಮಂದಿಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಸೂರ್ಯಕುಮಾರ್‌ ಟಿ20 ಸರಣಿಯಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಶಾನ್‌ ಕಿಶನ್‌, ಋುತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆದಿದ್ದು, ರಾಹುಲ್‌ ತ್ರಿಪಾಠಿ ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ಗೂ ಅವಕಾಶ ನೀಡಲಾಗಿದೆ. ಅಶ್‌ರ್‍ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌ ಜೊತೆ ಯುವ ವೇಗಿಗಳಾದ ಶಿವಂ ಮಾವಿ, ಮುಖೇಶ್‌ ಕುಮಾರ್‌ ಮೊದಲ ಬಾರಿ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಕದಿನಕ್ಕೆ ರೋಹಿತ್‌ ವಾಪಸ್‌:

ಏಕದಿನ ಸರಣಿಗೆ ರೋಹಿತ್‌ ಶರ್ಮಾ ಮರಳಲಿದ್ದು, ತಂಡದ ನಾಯಕತ್ವ ವಹಿಸಲಿದ್ದಾರೆ. ಸರಣಿಗೆ ಹಾರ್ದಿಕ್‌ ಪಾಂಡ್ಯ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ರಿಷಭ್‌ ಪಂತ್‌ ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದು, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಗಿಲ್‌, ಇಶಾನ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ಆಟಗಾರ ಶಿಖರ್‌ ಧವನ್‌ ತಂಡದಿಂದ ಹೊರಬಿದ್ದಿದ್ದಾರೆ. ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ ಆಲ್ರೌಂಡರ್‌ ಹೊಣೆ ನಿಭಾಯಿಸಲಿದ್ದು, ಶಮಿ, ಅಶ್‌ರ್‍ದೀಪ್‌, ಸಿರಾಜ್‌, ಉಮ್ರಾನ್‌ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟಿ20 ಪಂದ್ಯ ಜನವರಿ 3, 5, 7ಕ್ಕೆ ನಡೆಯಲಿದ್ದು, ಏಕದಿನ ಸರಣಿಯ 3 ಪಂದ್ಯಗಳು 10, 12, 15ಕ್ಕೆ ನಿಗದಿಯಾಗಿದೆ.

ಟೀಂ ಇಂಡಿಯಾದಲ್ಲಿ ಮಹತ್ವದ ಬೆಳವಣಿಗೆ, ಟಿ20ಯಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್ ಕೊಹ್ಲಿ!

ಟಿ20 ತಂಡ: ಹಾರ್ದಿಕ್‌ ಪಾಂಡ್ಯ(ನಾಯಕ), ಇಶಾನ್‌ ಕಿಶನ್, ಋುತುರಾಜ್‌ ಗಾಯಕ್ವಾಡ್, ಶುಭ್‌ಮನ್ ಗಿಲ್‌, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್, ಯುಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್, ಅಶ್‌ರ್‍ದೀಪ್‌ ಸಿಂಗ್, ಹರ್ಷಲ್‌ ಪಟೇಲ್, ಉಮ್ರಾನ್‌ ಮಲಿಕ್, ಶಿವಂ ಮಾವಿ, ಮುಕೇಶ್‌ ಕುಮಾರ್.

ಏಕದಿನ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಯುಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್, ಅಕ್ಷರ್‌ ಪಟೇಲ್, ಮೊಹಮ್ಮದ್ ಶಮಿ, ಸಿರಾಜ್‌, ಉಮ್ರಾನ್‌, ಅಶ್‌ರ್‍ದೀಪ್‌.

ಮುಖೇಶ್‌ ಕುಮಾರ್, ಶಿವಂ ಮಾವಿಗೆ ಚೊಚ್ಚಲ ಟಿ20 ಕ್ಯಾಪ್‌

ಇತ್ತೀಚೆಗಷ್ಟೇ ಐಪಿಎಲ್‌ ಮಿನಿ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾಗಿದ್ದ ವೇಗಿಗಳಾದ ಶಿವಂ ಮಾವಿ ಹಾಗೂ ಮುಕೇಶ್‌ ಕುಮಾರ್‌ಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಶಿವಂ 6 ಕೋಟಿ ರು.ಗೆ ಗುಜರಾತ್‌ ಪಾಲಾಗಿದ್ದರೆ, ಮುಕೇಶ್‌ರನ್ನು ಡೆಲ್ಲಿ ತಂಡ 5.5 ಕೋಟಿ ರು.ಗೆ ತನ್ನದಾಗಿಸಿಕೊಂಡಿತ್ತು.

click me!