Ranji Trophy: ಸಮರ್ಥ್ ಆಕರ್ಷಕ ಶತಕ, ಗೋವಾ ಎದುರು ಬೃಹತ್ ಮೊತ್ತದತ್ತ ಕರ್ನಾಟಕ..!

Published : Dec 28, 2022, 08:45 AM IST
Ranji Trophy: ಸಮರ್ಥ್ ಆಕರ್ಷಕ ಶತಕ, ಗೋವಾ ಎದುರು ಬೃಹತ್ ಮೊತ್ತದತ್ತ ಕರ್ನಾಟಕ..!

ಸಾರಾಂಶ

ಗೋವಾ ಎದುರು ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ ರವಿಕುಮಾರ್ ಸಮರ್ಥ್ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಆರಂಭಿಕ ಬ್ಯಾಟರ್ ಸಮರ್ಥ್ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ ಕರ್ನಾಟಕ

ಪಣಜಿ(ಡಿ.28): ರವಿಕುಮಾರ್‌ ಸಮರ್ಥ್ ಹ್ಯಾಟ್ರಿಕ್‌ ಶತಕದ ನೆರವಿನಿಂದ 2022-23ರ ರಣಜಿ ಟ್ರೋಫಿ ಕ್ರಿಕೆಟ್‌ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಮಂಗಳವಾರ ಗೋವಾ ವಿರುದ್ಧ ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಮೊದಲ ದಿನದಂತ್ಯಕ್ಕೆ ತಂಡ 3 ವಿಕೆಟ್‌ಗೆ 294 ರನ್‌ ಕಲೆ ಹಾಕಿದೆ.

ಪೊರ್ವೊರಿಮ್‌ನಲ್ಲಿರುವ ಗೋವಾ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ಶತಕದ ಜೊತೆಯಾಟ ಪಡೆಯಿತು. ಮೊದಲ ವಿಕೆಟ್‌ಗೆ ಸಮರ್ಥ್‌ ಹಾಗೂ ನಾಯಕ ಮಯಾಂಕ್‌ ಅಗರ್‌ವಾಲ್‌ 116 ರನ್‌ ಸೇರಿಸಿದರು. ರಾಜ್ಯ ತಂಡದ ಪರ ರಣಜಿಯಲ್ಲಿ 16ನೇ ಅರ್ಧಶತಕ ಬಾರಿಸಿದ ಮಯಾಂಕ್‌ 50 ರನ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಸಮರ್ಥ್‌ ಯುವ ಬ್ಯಾಟರ್‌ ವಿಶಾಲ್‌ ಜೊತೆಗೂಡಿ 2ನೇ ವಿಕೆಟ್‌ಗೆ 143 ರನ್‌ ಕಲೆಹಾಕಿದರು.

ಕರ್ನಾಟಕ ಪರ ರಣಜಿಯಲ್ಲಿ 12ನೇ ಶತಕ ಸಿಡಿಸಿ ಅಬ್ಬರಿಸುತ್ತಿದ್ದ ಸಮರ್ಥ್‌ಗೆ ಅರ್ಜುನ್‌ ತೆಂಡುಲ್ಕರ್‌ ಪೆವಿಲಿಯನ್‌ ಹಾದಿ ತೋರಿಸಿದರು. ಸಮರ್ಥ್‌ 238 ಎಸೆತಗಳಲ್ಲಿ 14 ಬೌಂಡರಿ ಒಳಗೊಂಡ 140 ರನ್‌ ಗಳಿಸಿ ಔಟಾದರು. ಚೊಚ್ಚಲ ಅರ್ಧಶತಕ ಸಿಡಿಸಿದ ವಿಶಾಲ್‌ 73 ರನ್‌ಗಳಿಸಿ ಕ್ರೀಸ್‌ನಲ್ಲಿದ್ದು, ಶತಕದ ತವಕದಲ್ಲಿದ್ದಾರೆ. ಗೋವಾ ಪರ ದರ್ಶನ್‌, ಅರ್ಜುನ್‌, ಲಕ್ಷ್ಯ ತಲಾ 1 ವಿಕೆಟ್‌ ಪಡೆದರು.

Ranji Trophy ಕರ್ನಾಟಕಕ್ಕೆ ಗೋವಾ ಚಾಲೆಂಜ್‌! ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿ ಮಯಾಂಕ್ ಪಡೆ

ಸ್ಕೋರ್‌: ಕರ್ನಾಟಕ 294/3 (ಸಮರ್ಥ್‌ 140, ವಿಶಾಲ್‌ 73*, ಅರ್ಜುನ್‌ 1-30)

4000 ರನ್‌: ಸಮರ್ಥ್ ರಾಜ್ಯದ 13ನೇ ಬ್ಯಾಟರ್‌

ರಣಜಿ ಕ್ರಿಕೆಟ್‌ನಲ್ಲಿ 4000 ರನ್‌ ಪೂರ್ತಿಗೊಳಿಸಿದ ರವಿಕುಮಾರ್ ಸಮರ್ಥ್, ಈ ಸಾಧನೆ ಮಾಡಿದ ಕರ್ನಾಟಕದ 13ನೇ ಬ್ಯಾಟರ್‌ ಎಂಬ ಖ್ಯಾತಿಗೆ ಪಾತ್ರರಾದರು. ಅವರು 58 ಪಂದ್ಯಗಳಲ್ಲಿ 101 ಇನ್ನಿಂಗ್‌್ಸ ಮೂಲಕ ಈ ಮೈಲಿಗಲ್ಲು ತಲುಪಿದರು. ಇನ್ನು ಶತಕ ಗಳಿಕೆಯಲ್ಲಿ ಅವರು 12 ಶತಕದೊಂದಿಗೆ ಜಂಟಿ 8ನೇ ಸ್ಥಾನಕ್ಕೇರಿದರು. ತಲಾ 11 ಶತಕ ಸಿಡಿಸಿದ್ದ ಕರುಣ್‌ ನಾಯರ್‌, ರೋಜರ್‌ ಬಿನ್ನಿಯನ್ನು ಹಿಂದಿಕ್ಕಿದ ಸಮರ್ಥ್, ಅರುಣ್‌ ಕುಮಾರ್‌, ವಿಜಯ್‌ ಭಾರದ್ವಾಜ್‌ ಜೊತೆ 8ನೇ ಸ್ಥಾನ ಹಂಚಿಕೊಂಡರು.

ಟೆಸ್ಟ್‌: ಪಾಕಿಸ್ತಾನ 438/10, ನ್ಯೂಜಿಲೆಂಡ್‌ ದಿಟ್ಟ ಉತ್ತರ

ಕರಾಚಿ: ಆಘಾ ಸಲ್ಮಾನ್‌ ಚೊಚ್ಚಲ ಶತಕದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ 438 ರನ್‌ಗೆ ಆಲೌಟಾಗಿದೆ. ಆದರೆ ಇದಕ್ಕೆ ದಿಟ್ಟತಿರುಗೇಟು ನೀಡಿರುವ ನ್ಯೂಜಿಲೆಂಡ್‌ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 165 ರನ್‌ ಕಲೆ ಹಾಕಿದೆ.

ಮೊದಲ ದಿನ 5 ವಿಕೆಟ್‌ಗೆ 317 ರನ್‌ ಗಳಿಸಿದ್ದ ಪಾಕ್‌ ಮಂಗಳವಾರ ಆರಂಭದಲ್ಲೇ ಬಾಬರ್‌ ಆಜಂ(161) ವಿಕೆಟ್‌ ಕಳೆದುಕೊಂಡಿತು. ಆದರೆ ಸಲ್ಮಾನ್‌ 103 ರನ್‌ ಸಿಡಿಸಿ ತಂಡ ಬೃಹತ್‌ ಮೊತ್ತ ಕಲೆಹಾಕಲು ನೆರವಾದರು. ಸೌಥಿ 3 ವಿಕೆಟ್‌ ಕಿತ್ತರು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ಗೆ ಆರಂಭಿಕರಾದ ಟಾಮ್‌ ಲೇಥಮ್‌(78), ಡೆವೋನ್‌ ಕಾನ್‌ವೇ(82) ಆಸರೆಯಾದರು. ಈ ಜೋಡಿ ಪಾಕ್‌ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದು, ಇನ್ನಿಂಗ್‌್ಸ ಮುನ್ನಡೆ ಪಡೆಯಲು ಎದುರು ನೋಡುತ್ತಿದೆ.

ಟಿ20 ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ ತಾತ್ಕಾಲಿಕ ಬ್ರೇಕ್‌?

ನವದೆಹಲಿ: ಮುಂದಿನ ವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿ ಸೇರಿದಂತೆ ಟಿ20 ಕ್ರಿಕೆಟ್‌ನಿಂದ ಕೆಲ ತಿಂಗಳುಗಳ ಕಾಲ ವಿರಾಟ್‌ ಕೊಹ್ಲಿ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ಈ ಬಗ್ಗೆ ಈಗಾಗಲೇ ಬಿಸಿಸಿಐ ಜೊತೆ ಚರ್ಚೆ ನಡೆಸಿದ್ದು, ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಟಿ20 ಕ್ರಿಕೆಟ್‌ನಿಂದ ತಾತ್ಕಾಲಿಕ ವಿರಾಮ ಪಡೆಯಲಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.  ವಿರಾಟ್ ಕೊಹ್ಲಿ ಕೊನೆ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದು, ನ್ಯೂಜಿಲೆಂಡ್‌ ಸರಣಿಗೆ ವಿಶ್ರಾಂತಿ ಪಡೆದಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?