Ind vs SA Boxing Day Test: ದಕ್ಷಿಣ ಆಫ್ರಿಕಾ ಭದ್ರಕೋಟೆ ಭೇದಿಸುತ್ತಾ ಟೀಂ ಇಂಡಿಯಾ?

By Kannadaprabha NewsFirst Published Dec 26, 2021, 9:50 AM IST
Highlights

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಕ್ಷಣಗಣನೆ

* 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಸೆಂಚೂರಿಯನ್‌ ಆತಿಥ್ಯ

* ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಪಡೆ

ಸೆಂಚೂರಿಯನ್(ಡಿ.26)‌: ಒಂದು ಕಡೆ ತಂಡವೊಂದು ತನ್ನ ಭದ್ರಕೋಟೆಯಲ್ಲಿ ಆಡಲಿದೆ. ಮತ್ತೊಂದೆಡೆ ಇದೇ ವರ್ಷ ಆಸ್ಪ್ರೇಲಿಯಾದ ಭದ್ರಕೋಟೆಯನ್ನು ಛಿದ್ರಗೊಳಿಸಿದ ತಂಡ ಕಣಕ್ಕಿಳಿಯಲು ಸಜ್ಜಾಗಿದೆ. ಬಹುನಿರೀಕ್ಷಿತ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಭಾನುವಾರ ಚಾಲನೆ ಸಿಗಲಿದ್ದು, ಬಾಕ್ಸಿಂಗ್‌ ಡೇ ಟೆಸ್ಟ್‌ (Boxing Day Test) ಎಂದು ಕರೆಸಿಕೊಳ್ಳುತ್ತಿರುವ ಮೊದಲ ಪಂದ್ಯ ಇಲ್ಲಿನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ವರ್ಷ ತಲಾ 18 ಟೆಸ್ಟ್‌ಗಳನ್ನು ಆಡಿವೆ. ದಕ್ಷಿಣ ಆಫ್ರಿಕಾ ತವರಿನಲ್ಲಿ ಕೇವಲ 5 ಪಂದ್ಯಗಳನ್ನಾಡಿದ್ದು, ತನ್ನ ಮನೆಯಂಗಳದಲ್ಲಿ ಕೊನೆ ಪಂದ್ಯವನ್ನು ಜನವರಿಯಲ್ಲಿ ಆಡಿತ್ತು. ಆಗಿನ ತಂಡಕ್ಕೂ ಈಗಿನ ತಂಡಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಬಹುತೇಕ ತಾರಾ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ.

ಮತ್ತೊಂದೆಡೆ ಭಾರತ ಈ ವರ್ಷ 4 ಮಹತ್ವದ ಟೆಸ್ಟ್‌ ಸರಣಿಗಳಲ್ಲಿ ಆಡಿದೆ. 2 ಐಪಿಎಲ್‌ ಚರಣಗಳು, ಟಿ20 ವಿಶ್ವಕಪ್‌ನಲ್ಲೂ (ICC T20 World Cup) ಸೆಣಸಿದೆ. ತಂಡದಲ್ಲಿ ಕೆಲ ದಣಿದ ಆಟಗಾರರೂ ಇರಬಹುದು. ಅಸ್ಥಿರ ಮಧ್ಯಮ ಕ್ರಮಾಂಕದೊಂದಿಗೆ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಆದರೆ ಆತಿಥೇಯ ತಂಡಕ್ಕೆ ಹೋಲಿಸಿದರೆ ಭಾರತ ಬಲಿಷ್ಠವಾಗಿ ತೋರುತ್ತಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಅಲ್ಲಿನ ವಾತಾವರಣದಲ್ಲಿ ಪಂದ್ಯಗಳನ್ನು ಗೆಲ್ಲಿಸಬಲ್ಲ ಬೌಲಿಂಗ್‌ ಪಡೆಗಳನ್ನು ಹೊಂದಿವೆ. ಎರಡೂ ತಂಡಗಳ ಬ್ಯಾಟಿಂಗ್‌ ಪಡೆಯ ಬಲಾಬಲವನ್ನು ಸರಣಿ ಆರಂಭಕ್ಕೂ ಮೊದಲೇ ಅಳೆಯುವುದು ಕಷ್ಟ. ಆದರೆ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ತಂಡದ ಬ್ಯಾಟಿಂಗ್‌ ಪ್ರದರ್ಶನ ಗಣನೀಯ ಪ್ರಮಾಣದಲ್ಲಿ ವೃದ್ಧಿಯಾಗಿದೆ ಎನ್ನುವುದಂತೂ ನಿಜ. ಮೊದಲ ಪಂದ್ಯದಲ್ಲಿ ಯಾವ ತಂಡ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ ಎನ್ನುವುದನ್ನು ಅಂದಾಜಿಸುವುದು ಕಷ್ಟ.

ತಂಡಗಳ ಸಂಯೋಜನೆ ಹೇಗೆ?

ಭಾರತ ಐವರು ಬೌಲರ್‌ಗಳನ್ನು ಆಡಿಸುವುದು ಬಹುತೇಕ ಖಚಿತ. ಹೀಗಾಗಿ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲ ಶಾರ್ದೂಲ್‌ ಠಾಕೂರ್‌ (Shardul Thakur) ಸಹಜವಾಗಿಯೇ ಸ್ಥಾನ ಗಳಿಸಲಿದ್ದಾರೆ. ಒಂದು ಸ್ಥಾನಕ್ಕೆ ಅಜಿಂಕ್ಯ ರಹಾನೆ(Ajinkya Rahane), ಶ್ರೇಯಸ್‌ ಅಯ್ಯರ್‌(Shreyas Iyer), ಹನುಮ ವಿಹಾರಿ ನಡುವೆ ಪೈಪೋಟಿ ಇದೆ. ವಿಹಾರಿಯನ್ನು ಭಾರತ ‘ಎ’ ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ಅವರು ಉತ್ತಮ ಆಟವಾಡಿ ಆಯ್ಕೆ ಸಮರ್ಥಿಸಿಕೊಂಡಿದ್ದರು. ಶ್ರೇಯಸ್‌, ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಇಬ್ಬರನ್ನು ಹಿಂದಿಕ್ಕಿ ಅನುಭವದ ಆಧಾರದ ಮೇಲೆ ರಹಾನೆ ಆಡುವ ಹನ್ನೊಂದರಲ್ಲಿ ಸ್ಥಾನ ಗಳಿಸಿದರೆ ಅಚ್ಚರಿಯಿಲ್ಲ.

Boxing Day Test : ಡಿ. 26ಕ್ಕೆ ಆರಂಭವಾಗುವ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದ್ಯಾಕೆ?

ಇನ್ನು ದಕ್ಷಿಣ ಆಫ್ರಿಕಾ ವಿಯಾನ್‌ ಮುಲ್ಡರ್‌ರನ್ನು 4ನೇ ವೇಗಿಯಾಗಿ ಆಡಿಸಬಹುದು. 7ನೇ ಕ್ರಮಾಂಕದಲ್ಲಿ ಅವರು ಉತ್ತಮ ಆಯ್ಕೆ ಕೂಡ ಹೌದು. ರಬಾಡ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಓಲಿವರ್‌ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. ಎನ್‌ಗಿಡಿಗೆ 3ನೇ ವೇಗಿ ಸ್ಥಾನ ಸಿಗುವುದು ಖಚಿತ.

ದಕ್ಷಿಣ ಆಫ್ರಿಕಾದಲ್ಲಷ್ಟೇ ಭಾರತ ಸರಣಿ ಗೆದ್ದಿಲ್ಲ!

ಭಾರತ ತಂಡ ದ.ಆಫ್ರಿಕಾದಲ್ಲಿ ಮಾತ್ರ ಟೆಸ್ಟ್‌ ಸರಣಿ ಗೆದ್ದಿಲ್ಲ. 1992ರಿಂದ ಈ ವರೆಗೂ ಒಟ್ಟು 7 ಸರಣಿಗಳನ್ನು ಆಡಿದ್ದು, 6ರಲ್ಲಿ ಸೋಲುಂಡಿದೆ. 1 ಸರಣಿ(2010-11ರಲ್ಲಿ)ಯನ್ನು ಡ್ರಾ ಮಾಡಿಕೊಂಡಿತ್ತು. ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಕೆಲ ಐತಿಹಾಸಿಕ ಸರಣಿ ಗೆಲ್ಲುವುಗಳನ್ನು ಕಂಡಿದ್ದು ದ.ಆಫ್ರಿಕಾದಲ್ಲಿ ಚೊಚ್ಚಲ ಸರಣಿ ಗೆಲುವು ಸಾಧಿಸುವ ತವಕದಲ್ಲಿದೆ.

2014ರಿಂದ ಸೆಂಚೂರಿಯನ್‌ನಲ್ಲಿ ದ.ಆಫ್ರಿಕಾ ಟೆಸ್ಟ್‌ ಪಂದ್ಯ ಸೋತಿಲ್ಲ!

ಸೆಂಚೂರಿಯನ್‌ನ ಸೂಪರ್‌ ಸ್ಪೋರ್ಟ್‌ ಪಾರ್ಕ್ ದ.ಆಫ್ರಿಕಾ ತಂಡದ ಭದ್ರಕೋಟೆ. ತಂಡ ಇಲ್ಲಿ 2014ರಿಂದ ಒಂದೂ ಟೆಸ್ಟ್‌ ಸೋತಿಲ್ಲ. ಅಲ್ಲದೆ ಇಲ್ಲಿ ಆಡಿರುವ 26 ಟೆಸ್ಟ್‌ಗಳಲ್ಲಿ 21ರಲ್ಲಿ ಗೆದ್ದಿದೆ. ಕೇವಲ 2ರಲ್ಲಿ ಸೋತಿದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಭಾರತ ಇಲ್ಲಿ 2010, 2018ರಲ್ಲಿ ಸೋತಿತ್ತು.

ಶತಕದೊಂದಿಗೆ 2021ಕ್ಕೆ ಗುಡ್‌ಬೈ ಹೇಳ್ತಾರಾ ಕೊಹ್ಲಿ?

2 ವರ್ಷಗಳ ಶತಕದ ಬರ ನೀಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ವಿರಾಟ್‌ ಕೊಹ್ಲಿ, ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕದೊಂದಿಗೆ 2021ಕ್ಕೆ ಗುಡ್‌ಬೈ ಹೇಳಲು ಕಾಯುತ್ತಿದ್ದಾರೆ. ವಿರಾಟ್‌ ಅಂ.ರಾ.ಕ್ರಿಕೆಟ್‌ನಲ್ಲಿ ಕೊನೆ ಬಾರಿಗೆ ಶತಕ ಬಾರಿಸಿದ್ದು 2019ರ ನವೆಂಬರ್‌ನಲ್ಲಿ. ದ.ಆಫ್ರಿಕಾದಲ್ಲಿ ಆಡಿರುವ 5 ಟೆಸ್ಟ್‌ಗಳಲ್ಲಿ ಕೊಹ್ಲಿ 55.80ರ ಸರಾಸರಿಯಲ್ಲಿ 558 ರನ್‌ ಕಲೆಹಾಕಿದ್ದಾರೆ. 2 ಶತಕ, 2 ಅರ್ಧಶತಕ ದಾಖಲಿಸಿದ್ದಾರೆ. ಈ ಬಾರಿಯೂ ಅವರಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ.

ಮೊದಲೆರೆಡು ದಿನ ಮಳೆ ಮುನ್ಸೂಚನೆ

ಸೆಂಚೂರಿಯನ್‌ನಲ್ಲಿ ಮೊದಲೆರಡು ದಿನ ಮಳೆ ಮುನ್ಸೂಚನೆ ಇದ್ದು, ಕೊನೆ 3 ದಿನಕ್ಕೆ ವಾತಾವರಣ ತಿಳಿಯಾಗಿರಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಮೊದಲೆರಡು ದಿನದಾಟದಲ್ಲಿ ಕೆಲ ಓವರ್‌ಗಳ ಕಡಿತಗೊಳ್ಳುವ ಸಾಧ್ಯತೆ ಇದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ರಹಾನೆ/ಶ್ರೇಯಸ್‌/ವಿಹಾರಿ, ರಿಷಭ್‌ ಪಂತ್‌, ಆರ್‌.ಅಶ್ವಿನ್‌, ಶಾರ್ದೂಲ್‌ ಠಾಕೂರ್‌, ಮೊಹಮದ್‌ ಶಮಿ, ಸಿರಾಜ್‌/ಇಶಾಂತ್‌ ಶರ್ಮಾ.

ದ.ಆಫ್ರಿಕಾ: ಡೀನ್‌ ಎಲ್ಗರ್‌(ನಾಯಕ), ಏಡನ್‌ ಮಾರ್ಕ್ರಮ್‌, ಕೀಗನ್‌ ಪೀಟರ್‌ಸನ್‌, ರಾಸ್ಸಿ ವ್ಯಾನ್‌ ಡೆರ್‌ ಡುಸ್ಸೆನ್‌, ತೆಂಬ ಬವುಮಾ, ಕ್ವಿಂಟನ್‌ ಡಿ ಕಾಕ್‌, ವಿಯಾನ್‌ ಮುಲ್ಡರ್‌, ಕೇಶವ್‌ ಮಹಾರಾಜ್‌, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಡುಯಾನೆ ಓಲಿವರ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಟ್‌

ಸೆಂಚೂರಿಯನ್‌ನ ಪಿಚ್‌ ಮೊದಲ ದಿನ ಮೃದುವಾಗಿರಲಿದ್ದು, 2 ಹಾಗೂ 3ನೇ ದಿನ ಗಟ್ಟಿಗೊಳ್ಳಲಿದೆ. ಹೀಗಾಗಿ ಇಲ್ಲಿ ಬ್ಯಾಟರ್‌ಗಳು ಬಹಳ ಲೆಕ್ಕಾಚಾರದೊಂದಿಗೆ ಆಡಬೇಕಿದೆ. ಜೊತೆಗೆ ಮಳೆ ವಾತಾವರಣವಿರುವ ಕಾರಣ ಆ ಅಂಶವನ್ನು ಗಮನದಲ್ಲಿಟ್ಟುಕೊಂಡು ಆಡುವ ಹನ್ನೊಂದನ್ನು ನಿರ್ಧರಿಸಬೇಕಿದೆ. ಸಾಮಾನ್ಯವಾಗಿ ಇಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ.

click me!