ಟೀಂ ಇಂಡಿಯಾ ಭವಿಷ್ಯದ 2 ನಾಯಕರನ್ನು ಹೆಸರಿಸಿದ ಮಾಜಿ ಕೋಚ್ ರವಿಶಾಸ್ತ್ರಿ

By Suvarna NewsFirst Published Dec 26, 2021, 9:24 AM IST
Highlights

* ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕರ ಬಗ್ಗೆ ತುಟಿಬಿಚ್ಚಿದ ಮಾಜಿ ಕೋಚ್ ರವಿಶಾಸ್ತ್ರಿ

* ಕನ್ನಡಿಗ ಕೆ.ಎಲ್‌. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್‌ಗೆ ಉತ್ತಮ ನಾಯಕತ್ವ ಗುಣವಿದೆ ಎಂದ ಮಾಜಿ ಕೋಚ್

* ಐಪಿಎಲ್‌ನಲ್ಲಿ ಈ ಇಬ್ಬರು ನಾಯಕರಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ

ನವದೆಹಲಿ(ಡಿ.26): ಕೆ.ಎಲ್‌.ರಾಹುಲ್‌ (KL Rahul) ಹಾಗೂ ಶ್ರೇಯಸ್‌ ಅಯ್ಯರ್‌ (Shreyas Iyer) ಟೀಂ ಇಂಡಿಯಾದ ಭವಿಷ್ಯದ ನಾಯಕರು ಎಂದು ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶನಿವಾರ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಭವಿಷ್ಯದಲ್ಲಿ ಅವರು ಟೀಂ ಇಂಡಿಯಾವನ್ನು (Team India) ಮುನ್ನಡೆಸುವ ಎಲ್ಲಾ ಸಾಧ್ಯತೆಗಳಿವೆ’ ಎಂದಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆಮಾಡುವ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿ, ರೋಹಿತ್ ಶರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ(Rohit Sharma) ಗಾಯಗೊಂಡಿದ್ದರಿಂದ, ಟೆಸ್ಟ್ ಸರಣಿಗೆ ಕೆ.ಎಲ್‌. ರಾಹುಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಕೆ.ಎಲ್. ರಾಹುಲ್‌ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತದ ಟೆಸ್ಟ್‌ ತಂಡದ ಉಪನಾಯಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಅವರು ಐಪಿಎಲ್‌ನ (IPL) ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್‌ ಕಿಂಗ್ಸ್(Punjab Kings) ತಂಡಕ್ಕೆ ನಾಯಕತ್ವ ವಹಿಸಿದ್ದರು. ಇನ್ನು, ಶ್ರೇಯಸ್ ಅಯ್ಯರ್‌ 2018ರಿಂದ 2020ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವನ್ನು ಮುನ್ನಡೆಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಉತ್ತಮವಾಗಿ ಆಡಲಿದ್ದಾರೆ: ರಾಹುಲ್‌ ದ್ರಾವಿಡ್‌ ವಿಶ್ವಾಸ

ಸೆಂಚೂರಿಯನ್‌: ವಿರಾಟ್‌ ಕೊಹ್ಲಿ (Virat Kohli) ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದು ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಟಗಾರ ಹಾಗೂ ನಾಯಕನಾಗಿ ವಿರಾಟ್‌ ತಂಡಕ್ಕೆ ನೀಡಿದ ಕೊಡುಗೆ ತುಂಬಾ ದೊಡ್ಡದು. ಅವರು ಅದ್ಭುತ ಆಟಗಾರ ಮತ್ತು ಯಾವತ್ತೂ ಅವರು ಟೆಸ್ಟ್‌ ಕ್ರಿಕೆಟನ್ನು (Test Cricket) ಹೆಚ್ಚು ಇಷ್ಟಪಡುತ್ತಾರೆ’ ಎಂದಿದ್ದಾರೆ. 

Virat Kohli sacked as ODI captain: ಮೊದಲ ಬಾರಿಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ!

ಇದೇ ವೇಳೆ ಸೀಮಿತ ಓವರ್‌ ನಾಯಕತ್ವದ ಬದಲಾವಣೆ ವಿಚಾರದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ದ್ರಾವಿಡ್‌ ನಿರಾಕರಿಸಿದ್ದಾರೆ. ‘ನಾಯಕತ್ವ ಬದಲಾವಣೆ ವಿಚಾರ ಆಯ್ಕೆಗಾರರಿಗೆ ಬಿಟ್ಟದ್ದು. ಅವರೊಂದಿಗೆ ನಡೆದ ಆಂತರಿಕ ಚರ್ಚೆಯ ಮಾಹಿತಿಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಭಾರತೀಯ ಕ್ರಿಕೆಟಿಗರ ಹಸ್ತಾಕ್ಷರವಿರುವ ಬ್ಯಾಟ್‌ 18.8 ಲಕ್ಷ ರುಪಾಯಿಗೆ ಹರಾಜು

ನವದೆಹಲಿ: 2011ರ ಏಕದಿನ ವಿಶ್ವಕಪ್‌ (ICC ODI World Cup 2011) ವಿಜೇತ ಭಾರತದ ಆಟಗಾರರ ಹಸ್ತಾಕ್ಷರವಿರುವ ಬ್ಯಾಟ್‌ 25,000 ಅಮೆರಿಕನ್‌ ಡಾಲರ್‌( 18.8 ಲಕ್ಷ ರುಪಾಯಿ)ಗೆ ಹರಾಜಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾವನ್ನು ಬಗ್ಗುಬಡಿದು, 28 ವರ್ಷಗಳ ಬಳಿಕ ದೇಶಕ್ಕೆ ಎರಡನೇ ಏಕದಿನ ವಿಶ್ವಕಪ್ ಜಯಿಸಿತ್ತು.

ದುಬೈಯಲ್ಲಿ ಕ್ರಿಕ್‌ಫ್ಲಿಕ್ಸ್‌ ಎನ್ನುವ ಖಾಸಗಿ ಸಂಸ್ಥೆಯಿಂದ ಶುಕ್ರವಾರ ಹರಾಜು ನಡೆದಿದ್ದು, 2016ರಲ್ಲಿ ಐಪಿಎಲ್‌ ಟ್ರೋಫಿ ಗೆದ್ದ ಸನ್‌ರೈಸ​ರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ (David Warner) ಬ್ಯಾಟ್‌ 22 ಲಕ್ಷ ರುಪಾಯಿಗೆ ಮಾರಾಟವಾಗಿದೆ. ಇನ್ನು, ಸಚಿನ್‌ ತೆಂಡುಲ್ಕರ್‌ (Sachin Tendulkar) ಅವರ 200ನೇ ಟೆಸ್ಟ್‌ ಪಂದ್ಯದ ಡಿಜಿಟಲ್‌ ಹಕ್ಕನ್ನು ಮುಂಬೈ ಮೂಲದ ಅಮಲ್‌ ಖಾನ್‌ ಎಂಬವರು 30 ಲಕ್ಷ ರುಪಾಯಿಗೆ ತಮ್ಮದಾಗಿಸಿಕೊಂಡಿದ್ದಾರೆ.

ಕೋವಿಡ್‌: ಐರ್ಲೆಂಡ್‌-ಅಮೆರಿಕಾ ಪಂದ್ಯ ರದ್ದು

ವಾಷಿಂಗ್ಟನ್‌: ಡಿಸೆಂಬರ್ 26ಕ್ಕೆ ನಿಗದಿಯಾಗಿದ್ದ ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಮೊದಲ ಏಕದಿನ ಪಂದ್ಯ ಕೊರೋನಾ (Coronavirus) ಹಿನ್ನೆಲೆಯಲ್ಲಿ ರದ್ದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಕ್ರಿಕೆಟ್‌ ಮಂಡಳಿ, ಅಂಪೈರ್‌ಗೆ ಕೋವಿಡ್‌ ದೃಢಪಟ್ಟಿದ್ದರಿಂದ ಪಂದ್ಯ ರದ್ದುಗೊಳಿಸಲಾಗಿದೆ. 

ಟೆಸ್ಟ್ ಆಡುವ ದೇಶ ಐರ್ಲೆಂಡ್ ಎದುರು ಮೊದಲ ಟಿ20 ಗೆಲುವು ದಾಖಲಿಸಿದ USA

ಅಂಪೈರ್‌ ಸಂಪರ್ಕಕ್ಕೆ ಬಂದ ಮೂವರ ವರದಿ ನೆಗೆಟಿವ್‌ ಬಂದಿವೆ’ ಎಂದು ಮಾಹಿತಿ ನೀಡಿದೆ. ಸದ್ಯ ಆಟಗಾರರು ಐಸೋಲೇಷನ್‌ಗೆ ಒಳಪಟ್ಟಿದ್ದು, ಮುಂದಿನ 2 ಪಂದ್ಯಗಳು ಡಿಸೆಂಬರ್ 28 ಹಾಗೂ ಡಿಸೆಂಬರ್ 30ಕ್ಕೆ ನಿಗದಿಯಂತೆ ನಡೆಯಲಿವೆ ಎಂದು ತಿಳಿಸಿದೆ. ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು.
 

click me!