* ಸೆಂಚೂರಿಯನ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ಭಾರತ
* ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 113 ರನ್‌ಗಳ ಜಯ
* 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ
ಸೆಂಚೂರಿಯನ್(ಡಿ.30): ಭಾರತ ಹಾಗೂ ದಕ್ಷಿಣ ಆಫ್ರಿಕಾ(India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ(Team India) 113 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 2021-22ನೇ ಸಾಲಿನ 3 ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾರತ ತಂಡದ ಸಂಘಟಿತ ಪ್ರದರ್ಶನದಿಂದಾಗಿ ಸೆಂಚೂರಿಯನ್‌ನಲ್ಲಿ ಟೆಸ್ಟ್ ಗೆಲುವು ದಾಖಲಿಸಿದ ಏಷ್ಯಾದ ಮೊದಲ ತಂಡ ಎನ್ನುವ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತದ ಮೊದಲ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿ ಪಾಲಾಗಿದೆ.
ಭಾರತ ನೀಡಿದ್ದ 305 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು (South Africa Cricket Team) ಎರಡನೇ ಇನಿಂಗ್ಸ್‌ನಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಭದ್ರಕೋಟೆಯಲ್ಲಿಯೇ ಸೋಲೊಪ್ಪಿಕೊಂಡಿದೆ. 4 ವಿಕೆಟ್ ಕಳೆದುಕೊಂಡು 94 ರನ್‌ಗಳೊಂದಿಗೆ ಐದನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಎಚ್ಚರಿಕೆ ಆಟಕ್ಕೆ ಮೊರೆ ಹೋಯಿತು. ನೆಲಕಚ್ಚಿ ಆಟವಾಡಿದ ನಾಯಕ ಡೀನ್ ಎಲ್ಗಾರ್ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ತೆಂಬ ಬವುಮಾ 80 ಎಸೆತಗಳನ್ನು ಎದುರಿಸಿ ಅಜೇಯ 35 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಕ್ವಿಂಟನ್ ಡಿ ಕಾಕ್ ವಿಕೆಟ್ ಪತನದೊಂದಿಗೆ ಹರಿಣಗಳ ಪಡೆ ಸೋಲಿನತ್ತ ಮುಖ ಮಾಡಿತು.
India register their first Test victory in Centurion 🎉
They defeat South Africa by 113 runs and go 1-0 up in the series. | | https://t.co/qi2EfKhLHp pic.twitter.com/FXMMb7UVe4
2014ರಿಂದ ಸೆಂಚೂರಿಯನ್‌ನಲ್ಲಿ ದ ಆಫ್ರಿಕಾ ಟೆಸ್ಟ್ ಪಂದ್ಯ ಸೋತಿರಲಿಲ್ಲ!
ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ದಕ್ಷಿಣ ಆಫ್ರಿಕಾ ತಂಡದ ಭದ್ರಕೋಟೆ ಎನಿಸಿತ್ತು. ಹರಿಣಗಳ ಪಡೆ ಇಲ್ಲಿ 2014ರಿಂದ ಒಂದೂ ಟೆಸ್ಟ್ ಸೋತಿರಲಿಲ್ಲ. ಅಲ್ಲದೆ ಇಲ್ಲಿ ಆಡಿರುವ 26 ಟೆಸ್ಟ್‌ಗಳಲ್ಲಿ 21ರಲ್ಲಿ ಗೆದ್ದು ಬೀಗಿತ್ತು. ಇನ್ನು ಕೇವಲ 2ರಲ್ಲಿ ಸೋತಿದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಟೀಂ ಇಂಡಿಯಾ ಇಲ್ಲಿ 2010, 2018ರಲ್ಲಿ ಸೋತಿತ್ತು. ಆದರೆ 2021ರಲ್ಲಿ ಗೆದ್ದು ಬೀಗಿದೆ.
Ind vs SA, Boxing Day Test: ಸೆಂಚೂರಿಯನ್ ಟೆಸ್ಟ್ ಗೆಲುವಿಗೆ ಟೀಂ ಇಂಡಿಯಾಗೆ ಬೇಕಿದೆ ಮೂರೇ ವಿಕೆಟ್..!
ಹೇಗಿತ್ತು ಮೊದಲ ಟೆಸ್ಟ್ ಪಂದ್ಯ..?
3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಬಾರಿಸಿದ ಆಕರ್ಷಕ ಶತಕ(123)ದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 327 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿ ಕೇವಲ 197 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಸಾಧಿಸಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 174 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹರಿಣಗಳ ಪಡೆಗೆ 305 ರನ್‌ಗಳ ಕಠಿಣ ಗುರಿ ನೀಡಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ: 327/10 & 174/10
ದಕ್ಷಿಣ ಆಫ್ರಿಕಾ: 197/10(ಮೊದಲ ಇನಿಂಗ್ಸ್) ಹಾಗೂ 191/10 (ಎರಡನೇ ಇನಿಂಗ್ಸ್)