ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!

Published : Aug 28, 2022, 11:43 PM ISTUpdated : Aug 28, 2022, 11:47 PM IST
ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!

ಸಾರಾಂಶ

ಪಾಕಿಸ್ತಾನ ಬೌಲರ್‌ಗಳ ಪರಾಕ್ರಮದ ನಡುವೆ ಟೀಂ ಇಂಡಿಯಾ ದಿಟ್ಟ ಹೋರಾಟ. ಆರಂಭದಿಂದ ಅಂತ್ಯದವರೆಗೆ ಗೆಲುವಿನ ಕುತೂಹಲ ಹಿಡಿದಿಟ್ಟ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.

ದುಬೈ(ಆ.28):  ಟಾರ್ಗೆಟ್ 148  ರನ್. ಆದರೆ ಕ್ಷಣ ಕ್ಷಣಕ್ಕೂ ರೋಚಕ ತಿರುವು. ಒಮ್ಮೆ ಟೀಂ ಇಂಡಿಯಾ, ಮತ್ತೊಮ್ಮೆ ಪಾಕಿಸ್ತಾನ, ಹೀಗೆ ಪಂದ್ಯ ಒಂದೊಂದು ಎಸೆತಕ್ಕೂ ಒಂದು ಕಡೆ ವಾಲುತ್ತಿತ್ತು. ಅಭಿಮಾನಿಗಳಲ್ಲಿ ಆತಂಕ, ಸಂತಸ ಎರಡೂ ಕಾಣುತ್ತಿತ್ತು. ಏಷ್ಯಾಕಪ್ ಟೂರ್ನಿಯ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.   ಅಂತಿಮ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸರ್ ನೆರವಿನಿಂದ ಇನ್ನೂ 2 ಎಸೆತದ ಬಾಕಿ ಇರುವಂತೆ ಪಾಕಿಸ್ತಾನ ಮಣಿಸಿತು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ.

ಗೆಲುವಿಗೆ 148 ರನ್ ಪಡೆದ ಟೀಂ ಇಂಡಿಯಾ ಸುಲಭವಾಗಿ ಚೇಸ್ ಮಾಡುವ ಲೆಕ್ಕಾಚಾರದಲ್ಲಿತ್ತು. ಆದರೆ 19ರ ಹರೆಯದ ನಸೀಮ್ ಶಾ ದಾಳಿಗೆ ಆರಂಭದಲ್ಲೇ ಟೀಂ ಇಂಡಿಯಾ ಬೆಚ್ಚಿ ಬಿತ್ತು. ಕಾರಣ ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್ ವಿಕೆಟ್ ಪತನಗೊಂಡಿತು. ರಾಹುಲ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಇದು ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಲಾಯಿತು. ಮೊದಲ ಓವರ್‌ನಲ್ಲಿ ಪಾಕಿಸ್ತಾನ ಬಿಗಿ ಹಿಡಿತ ಸಾಧಿಸಿತು.

ಪ್ಲೇಯಿಂಗ್ 11ನಿಂದ ಪಂತ್‌ಗೆ ಠಕ್ಕರ್, ಇಂಡೋ ಪಾಕ್ ಪಂದ್ಯಕ್ಕೆ ಊರ್ವಶಿ ರೌಟೇಲಾ ಹಾಜರ್!

ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಹೀಗಾಗಿ ಭಾರತದ ರನ್‌ರೇಟ್ ಕುಸಿತಗೊಂಡಿತು. ಪಾಕಿಸ್ತಾನದ ವೇಗದ ದಾಳಿಗೆ ಟೀಂ ಇಂಡಿಯಾ ರನ್ ಗಳಿಸಲು ಸಮಯ ತೆಗೆದುಕೊಂಡಿತು. ಇದರ ನಡುವೆ ರೋಹಿತ್ ಶರ್ಮಾ 18 ಎಸೆತದಲ್ಲಿ 12 ರನ್ ಸಿಡಿಸಿ ಔಟಾದರು. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಜೊತೆಯಾಟ ಮುರಿದುಬಿತ್ತು. ಕಳಪೆ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಸೂಚನೆ ನೀಡಿದರು. ಆದರೆ ಕೊಹ್ಲಿ 34 ಎಸೆತದಲ್ಲಿ 35 ರನ್ ಸಿಡಿಸಿ ನಿರ್ಗಮಿಸಿದರು. 53 ರನ್‌ಗೆ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

ರವೀಂದ್ರ ಜಡೇಜಾ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಸೂರ್ಯಕುಮಾರ್ ಯಾದವ್ 18 ರನ್ ಸಿಡಿಸಿ ನಿರ್ಗಮಿಸಿದರು. ನಸೀಮ್ ಶಾ ದಾಳಿ ಮತ್ತೆ ಆರಂಭಗೊಂಡಿತು. ಸೂರ್ಯಕುಮಾರ್ ಯಾದವ್ ವಿಕೆಟ್ ಪತನದ ಬೆನ್ನಲ್ಲೇ ಟೀಂ ಇಂಡಿಯಾದ ಆತಂಕ ಹೆಚ್ಚಾಯಿತು. ಈ ವೇಳೆ ಟೀಂ ಇಂಡಿಯಾ ಗೆಲುವಿಗೆ 34 ಎಸೆತದಲ್ಲಿ 59 ರನ್ ಬೇಕಿತ್ತು.  

ಇಂಡೋ ಪಾಕ್ ಪಂದ್ಯ, ಮಾಧ್ಯಮ ಸೇರಿ ಸಾರ್ವಜನಿಕರಿಗೆ ಪೊಲೀಸರ ಮಹತ್ವದ ಸಲಹೆ!

ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಹೋರಾಟದಿಂದ ಟೀಂ ಇಂಡಿಯಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು. ಪಂದ್ಯದ ತೀವ್ರತೆ ಹೆಚ್ಚಾಯಿತು. ಜಡೇಜಾ ಹಾಗೂ ಪಾಂಡ್ಯ ದಿಟ್ಟ ಹೋರಾಟ ಮುಂದುವರಿಸಿದರು.  ಪರಿಣಾಮ ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 7 ರನ್ ಅವಶ್ಯಕತೆ ಇತ್ತು. ಈ ವೇಳೆ ರವೀಂದ್ರ ಜಡೇಜಾ 28 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಇದು ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಹೆಚ್ಚಿಸಿತು. ದಿನೇಶ್ ಕಾರ್ತಿಕ್ ಸಿಂಗಲ್ ರನ್ ಸಿಡಿಸಿ ಹಾರ್ದಿಕ್ ಪಾಂಡ್ಯಗೆ ಸ್ಟ್ರೈಕ್ ನೀಡಿದರು. ಇತ್ತ ಹಾರ್ದಿಕ್ 3ನೇ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ.  ಆದರೆ ಮರು ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಮೂಲಕ ಟೀಂ ಇಂಡಿಯಾಗೆ 5 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಇನ್ನೂ 2 ಎಸೆತ ಬಾಕಿ ಇರುವಂತೆ ಟೀಂ ಇಂಡಿಯಾ ರೋಚಕ ಗೆಲುವು ಕಂಡಿತು. ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ ಶುಭಾರಂಭ ಮಾಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು