
ಸೌಥಾಂಪ್ಟನ್(ಜೂ.23): ಮಳೆ, ಮಂದ ಬೆಳಕಿನಿಂದಾಗಿ 2 ದಿನದಾಟ ಸಂಪೂರ್ಣವಾಗಿ ರದ್ದಾದರೂ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಫಲಿತಾಂಶ ನೀಡುವ ನಿರೀಕ್ಷೆ ಹುಟ್ಟಿಸಿದೆ. 5ನೇ ದಿನದಾಟ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭಗೊಂಡರೂ, ಬಳಿಕ ಮೂರೂ ಅವಧಿಗಳು ಪೂರ್ತಿ ನಡೆದ ಕಾರಣ ಪಂದ್ಯ ರೋಚಕ ಘಟ್ಟ ತಲುಪಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು 217 ರನ್‌ಗಳಿಗೆ ಆಲೌಟ್ ಮಾಡಿದ್ದ ನ್ಯೂಜಿಲೆಂಡ್ 5ನೇ ದಿನವಾದ ಮಂಗಳವಾರ ಮೊದಲ ಇನ್ನಿಂಗ್ಸಲ್ಲಿ 249 ರನ್ ಗಳಿಸಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್ ಮುನ್ನಡೆ ಪಡೆಯಿತು. ಇನ್ನು 3ನೇ ಅವಧಿಯಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಮುನ್ನಡೆ ಗಳಿಸುವ ಮೊದಲೇ ಶುಭ್‌ಮನ್ ಗಿಲ್(08) ವಿಕೆಟ್ ಕಳೆದುಕೊಂಡಿತು. ಬಳಿಕ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ, ಭಾರತಕ್ಕೆ ಮುನ್ನಡೆ ಒದಗಿಸಿದರು. ಐದನೇ ದಿನದಾಟದಂತ್ಯದ ವೇಳೆಗೆ ಭಾರತ 2 ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಂದ್ಯದಲ್ಲಿ ಮೀಸಲು ದಿನವನ್ನು ಬಳಕೆ ಮಾಡಲು ನಿರ್ಧರಿಸಿರುವ ಕಾರಣ, ಬುಧವಾರ 6ನೇ ದಿನದಾಟ ನಡೆಯಲಿದೆ. ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿ ಗುರಿ ನ್ಯೂಜಿಲೆಂಡ್‌ನ ಕೈಗೆಟುಕದಂತೆ ನೋಡಿಕೊಳ್ಳುವ ಒತ್ತಡದಲ್ಲಿದೆ. ಭಾರತವನ್ನು ಆದಷ್ಟು ಬೇಗ ಆಲೌಟ್ ಮಾಡಿ, ಗೆಲುವಿನ ಸಂಭ್ರಮ ಆಚರಿಸಲು ಕಿವೀಸ್ ಪಡೆ ಕಾಯುತ್ತಿದೆ. ಪಂದ್ಯ ಡ್ರಾ ಆಗುವ ಸಾಧ್ಯತೆಯೂ ಇದೆ. ಭಾರತ ಗೆಲ್ಲಬೇಕಿದ್ದರೆ ಅಸಾಧಾರಣ ಪ್ರದರ್ಶನ ತೋರಬೇಕಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಕಿವೀಸ್ ಬಳಗಕ್ಕೆ ಭಾರತ ತಿರುಗೇಟು
ಕಿವೀಸ್ ನಿಧಾನ ಆರಂಭ: 3ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದ್ದ ನ್ಯೂಜಿಲೆಂಡ್, 5ನೇ ದಿನದ ಮೊದಲ ಅವಧಿಯಲ್ಲಿ 23 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 34 ರನ್ ಗಳಿಸಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತರು. 2ನೇ ಅವಧಿಯಲ್ಲಿ ಡಿ ಗ್ರ್ಯಾಂಡ್‌ಹೋಮ್ (13) ಬೇಗನೆ ಔಟಾದರು. ಕೈಲ್ ಜೇಮಿಸನ್ ಕ್ರೀಸ್‌ಗಿಳಿದ ಮೇಲೆ ಕಿವೀಸ್‌ನ ರನ್ ಗಳಿಕೆಗೆ ವೇಗ ತುಂಬಿದರು. 16 ಎಸೆತಗಳಲ್ಲಿ 21 ರನ್ ಸಿಡಿಸಿದರು. ವಿಲಿಯಮ್ಸನ್ ಜೊತೆ ಸೇರಿದ ಟಿಮ್ ಸೌಥಿ, ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ತಂದುಕೊಟ್ಟರು.
ವಿಲಿಯಮ್ಸನ್(49) ಔಟಾದ ಬಳಿಕವೂ ಕಿವೀಸ್ 28 ರನ್ ಕಲೆಹಾಕಿತು. ಸೌಥಿ 1 ಬೌಂಡರಿ, 2 ಸಿಕ್ಸರ್‌ನೊಂದಿಗೆ 30 ರನ್ ಸಿಡಿಸಿದರು. ನ್ಯೂಜಿಲೆಂಡ್ 249 ರನ್‌ಗೆ ಆಲೌಟ್ ಆಗಿ, 32 ರನ್ ಮುನ್ನಡೆ ಸಾಧಿಸಿತು. ನ್ಯೂಜಿಲೆಂಡ್ ಕೊನೆ 4 ವಿಕೆಟ್‌ಗೆ 87 ರನ್ ಗಳಿಸಿತು. ಭಾರತ ಪರ ಶಮಿ 4, ಇಶಾಂತ್ 3, ಅಶ್ವಿನ್ 2 ಹಾಗೂ ಜಡೇಜಾ 1 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.