IND vs NZ ಟಾಸ್ ಗೆದ್ದ ನ್ಯೂಜಿಲೆಂಡ್, 2ನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ!

By Suvarna NewsFirst Published Jan 29, 2023, 6:37 PM IST
Highlights

ಭಾರತ ಸರಣಿ ಉಳಿಸಿಕೊಳ್ಳುವ ಆತಂಕ, ನ್ಯೂಜೆಲೆಂಡ್‌ಗೆ ಸರಣಿ ಕೈವಶ ಮಾಡುವ ತವಕ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿನ ಬದಲಾವಣೆ ಏನು ? ಇಲ್ಲಿದೆ ವಿವರ.

ಲಖನೌ(ಜ.29) ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇಂದು ಮಹತ್ವದ ಪಂದ್ಯ. ಮೊದಲ ಪಂದ್ಯ ಕೈಚೆಲ್ಲಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯ ಗೆದ್ದ ಸರಣಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ  ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ವೇಗಿ ಉಮ್ರಾನ್ ಮಲಿಕ್ ತಂಡದಿಂದ ಹೊರಗುಳಿದಿದ್ದಾರೆ. ಮಲಿಕ್ ಬದಲು ಯಜುವೇಂದ್ರ ಚಹಾಲ್ ತಂಡ ಸೇರಿಕೊಂಡಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಶುಬಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ವಾಶಿಂಗ್ಟನ್ ಸುಂದರ್, ಶಿವಂ ಮಾವಿ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಶದೀಪ್ ಸಿಂಗ್ 

Ind vs NZ: ಭಾರತಕ್ಕೆ ಟಿ20 ಸರಣಿ ಉಳಿಸಿಕೊಳ್ಳುವ ಒತ್ತಡ

ನಾಯಕ ಹಾರ್ದಿಕ್ ಪಾಂಡ್ಯ, ಮತ್ತೆ ಕುಲ್ಚಾ ಜೋಡಿಯನ್ನು ಕರೆತಂದಿದ್ದಾರೆ. ಯುಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಜೋಡಿ ಮ್ಯಾಜಿಕ್‌ ಮೂಲಕ ನ್ಯೂಜಿಲೆಂಡ್ ಕಟ್ಟಿಹಾಕಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ. ಲಖನೌ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರಿಗೆ ಹೆಚ್ಚಿನ ಯಶಸ್ಸು ಸಿಕ್ಕಿದೆ. ಫಸ್ಟ್ ಬ್ಯಾಟಿಂಗ್ ಫಲಿತಾಂಶ ಮೇಲೂ ಪರಿಣಾಮ ಬೀರಲಿದೆ. ಆದರೆ ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ನ್ಯೂಜಿಲೆಂಡ್ ಪ್ಲೇಯಿಂಗ್ 11
ಫಿನ್ ಅಲೆನ್, ಡೇವೋನ್ ಕಾನ್ವೇ, ಮಾರ್ಕ್ ಚಾಂಪ್‌ಮಾನ್, ಗ್ಲೆನ್ ಫಿಲಿಪ್ಸ್, ಡರಿಲ್ ಮಿಚೆಲ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಐಶ್ ಸೋಧಿ, ಜಕೋಬ್ ಡಫ್ಫಿ, ಲ್ಯೂಕಿ ಫರ್ಗ್ಯೂಸನ್, ಬ್ಲೇರ್ ಟಿಕ್ನರ್  

Ind vs NZ ಧೋನಿ, ರೈನಾ ಟಿ20 ದಾಖಲೆ ಮುರಿದ ಸೂರ್ಯಕುಮಾರ್ ಯಾದವ್..!

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಕಾಡೆ ಮಲಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಪ್ರಯಾಸದ ಗೆಲುವು ದಾಖಲಿಸಿ ಸಂಭ್ರಮಿಸಿದ್ದ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ವಿರುದ್ಧ ತೀವ್ರ ಪೈಪೋಟಿ ಎದುರಾಗಿತ್ತು. ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 

ಮೊದಲ ಪಂದ್ಯದ ಸೋಲಿನ ಗಾಯ 
ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಸಾಧಾರಣ ಪ್ರದರ್ಶನ ತೋರಿ 21 ರನ್‌ ಸೋಲು ಅನುಭವಿಸಿತು. ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡುವ ನಿರ್ಧಾರ ತಕ್ಕ ಮಟ್ಟಿಗೆ ಕೈಹಿಡಿಯಿತಾದರೂ, ಕೊನೆ 4 ಓವರಲ್ಲಿ 53 ರನ್‌ ಬಿಟ್ಟುಕೊಟ್ಟು ಪಂದ್ಯದ ಮೇಲೆ ಸಾಧಿಸಿದ್ದ ಹಿಡಿತವನ್ನು ಕೈಚೆಲ್ಲಿತು. ಅದರಲ್ಲೂ ಅಶ್‌ರ್‍ದೀಪ್‌ ಸಿಂಗ್‌ರ ಕೊನೆ ಓವರಲ್ಲಿ 27 ರನ್‌ ಸಿಡಿಸಿದ ನ್ಯೂಜಿಲೆಂಡ್‌ 20 ಓವರಲ್ಲಿ 6 ವಿಕೆಟ್‌ಗೆ 176 ರನ್‌ ಗಳಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಯಿತು.ಆ ಬಳಿಕ ಸೂರ್ಯಕುಮಾರ್‌(47) ಹಾಗೂ ಹಾರ್ದಿಕ್‌(21) ಹೋರಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಹಸ ಮಾಡಲು ಯತ್ನಿಸಿದರೂ ಕಿವೀಸ್‌ ಸ್ಪಿನ್ನರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಪವರ್‌-ಪ್ಲೇನಲ್ಲೇ ತಲಾ ಒಂದು ವಿಕೆಟ್‌ ಕಿತ್ತಿದ್ದ ಸ್ಯಾಂಟ್ನರ್‌ ಹಾಗೂ ಬ್ರೇಸ್‌ವೆಲ್‌ ಜೊತೆ ಇಶ್‌ ಸೋಧಿ ಸಹ ಭಾರತೀಯರನ್ನು ಕಾಡಿದರು.

16ನೇ ಓವರಲ್ಲಿ 111 ರನ್‌ ಆಗಿದ್ದಾಗ ಹೂಡಾ ಔಟಾಗುತ್ತಿದ್ದಂತೆ ಭಾರತದ ಜಯದ ಆಸೆ ಕಮರಿತು. ವಾಷಿಂಗ್ಟನ್‌ ಸುಂದರ್‌ 28 ಎಸೆತದಲ್ಲಿ 50 ರನ್‌ ಸಿಡಿಸಿ ಭಾರತ ಆಲೌಟ್‌ ಆಗುವುದನ್ನು ತಪ್ಪಿಸುವ ಜೊತೆಗೆ ಸೋಲಿನ ಅಂತರವನ್ನೂ ತಗ್ಗಿಸಿದರು. ಭಾರತ 9 ವಿಕೆಟ್‌ಗೆ 155 ರನ್‌ ಗಳಿಸಿತು.
 

click me!