Ind vs NZ Kanpur Test: ಅಯ್ಯರ್-ಜಡೇಜಾ ಶತಕದ ಜತೆಯಾಟ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ ದಾಪುಗಾಲು

By Suvarna NewsFirst Published Nov 25, 2021, 4:53 PM IST
Highlights

* ಕಾನ್ಪುರ ಟೆಸ್ಟ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಟೀಂ ಇಂಡಿಯಾ

* ಕಿವೀಸ್ ಎದುರು ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 258/4

* ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಚಚ್ಚಿದ ಶ್ರೇಯಸ್ ಅಯ್ಯರ್

ಕಾನ್ಪುರ(ನ.25): ಶುಭ್‌ಮನ್‌ ಗಿಲ್‌ (52), ಶ್ರೇಯಸ್‌ ಅಯ್ಯರ್(75*) ಹಾಗೂ ರವೀಂದ್ರ ಜಡೇಜಾ(50*) ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ (New Zealand Cricket Team) ವಿರುದ್ದದ ಮೊದಲ ಟೆಸ್ಟ್‌ನ ಮೊದಲ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ (Team India) 4 ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕಲಾರಂಭಿಸಿದೆ. 5ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರವೀಂದ್ರ ಜಡೇಜಾ (Ravindra Jadeja) ಮುರಿಯದ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ (Ajinkya Rahane) ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮಯಾಂಕ್‌ ಅಗರ್‌ವಾಲ್ (Mayank Agarwal)(13) ಅವರನ್ನು ಆರಂಭದಲ್ಲೇ ಪೆವಿಲಿಯನ್ನಿಟ್ಟುವಲ್ಲಿ ವೇಗಿ ಕೈಲ್ ಜೇಮಿಸನ್‌(Kyle Jamieson) ಯಶಸ್ವಿಯಾದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ ಹಾಗೂ ಶುಭ್‌ಮನ್‌ ಗಿಲ್ ಜೋಡಿ 61 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿತು. ಕೆ.ಎಲ್. ರಾಹುಲ್ (KL Rahul) ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರೊಳಗೆ ಸ್ಥಾನ ಪಡೆದ ಶುಭ್‌ಮನ್‌ ಗಿಲ್‌ (Shubman Gill) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮೊದಲ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಕೇವಲ ಒಂದು ವಿಕೆಟ್‌ ಕಳೆದುಕೊಂಡು 82 ರನ್‌ ಬಾರಿಸಿತ್ತು.

STUMPS on Day 1 of the 1st Test.

An unbeaten 113-run partnership between & propel to a score of 258/4 on Day 1.

Scorecard - https://t.co/WRsJCUhS2d pic.twitter.com/7dNdUM0HkM

— BCCI (@BCCI)

ಎರಡನೇ ಸೆಷನ್‌ನಲ್ಲಿ ಕಿವೀಸ್ ಕಮ್‌ಬ್ಯಾಕ್‌: ಆರಂಭಿಕ ಆಘಾತದ ಬಳಿಕ ಪೂಜಾರ ಹಾಗೂ ಗಿಲ್ ಅರ್ಧಶತಕದ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು. ಆದರೆ ಲಂಚ್‌ ಬ್ರೇಕ್ ಬಳಿಕ ಕೈಲ್ ಜೇಮಿಸನ್ ಎಸೆದ ಮೊದಲ ಓವರ್‌ನಲ್ಲೇ 52 ರನ್‌ ಬಾರಿಸಿದ್ದ ಶುಭ್‌ಮನ್‌ ಗಿಲ್‌ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನೆಲಕಚ್ಚಿ ಆಡುತ್ತಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಅವರನ್ನು ಟಿಮ್ ಸೌಥಿ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಪೂಜಾರ 88 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 26 ರನ್‌ ಬಾರಿಸಿ ಟಾಮ್‌ ಬ್ಲಂಡಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಕಳೆದ ಕೆಲ ಪಂದ್ಯಗಳಲ್ಲಿ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದ ನಾಯಕ ಅಜಿಂಕ್ಯ ರಹಾನೆ ಕೆಲವೊಂದು ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ರಹಾನೆ 63 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 35 ರನ್‌ ಬಾರಿಸಿ ಜೇಮಿಸನ್‌ಗೆ ಮೂರನೇ ಬಲಿಯಾದರು. ಇದರೊಂದಿಗೆ ಭಾರತ ಒಂದು ಹಂತದಲ್ಲಿ 145 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಕೆಲ ಕಾಲ ಆತಂಕಕ್ಕೆ ಸಿಲುಕಿತ್ತು.

Ind vs NZ Kanpur Test: ಪೂಜಾರ, ರಹಾನೆ ಔಟ್, ಆತಂಕದಲ್ಲಿ ಟೀಂ ಇಂಡಿಯಾ..!

ಅಯ್ಯರ್-ಜಡೇಜಾ ಜುಗಲ್ಬಂದಿ: ಎರಡನೇ ಸೆಷನ್‌ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾಗಿದ್ದ ಕಿವೀಸ್‌ ತಂಡವನ್ನು ಇನ್ನಿಲ್ಲದಂತೆ ಕಾಡುವಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಯಶಸ್ವಿಯಾದರು. 5ನೇ ವಿಕೆಟ್‌ಗೆ ಈ ಜೋಡಿ ಮುರಿಯದ 113 ರನ್‌ಗಳ ಜತೆಯಾಟ ನಿಭಾಯಿಸಿದೆ. ಅದರಲ್ಲೂ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್, ತಾವಾಡಿದ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಶ್ರೇಯಸ್ ಅಯ್ಯರ್ 136 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ ಅಜೇಯ 75 ರನ್ ಬಾರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಅಯ್ಯರ್‌ಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ 100 ಎಸೆತಗಳಲ್ಲಿ 6 ಬೌಂಡರಿ ಸಹಿತ 50 ರನ್‌ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡದ ಪರ ನೀಳಕಾಯದ ವೇಗಿ ಕೈಲ್ ಜೇಮಿಸನ್‌ 3 ವಿಕೆಟ್ ಪಡೆದರೆ, ಟಿಮ್‌ ಸೌಥಿ ಒಂದು ವಿಕೆಟ್ ಪಡೆದರು. ಕಿವೀಸ್‌ ಸ್ಪಿನ್ನರ್‌ಗಳಾದ ಅಜಾಜ್ ಪಟೇಲ್, ವಿಲಿಯಮ್ ಸೋಮರ್‌ವಿಲ್ಲೆ ಹಾಗೂ ರಚಿನ್ ರವೀಂದ್ರ ಒಟ್ಟಾಗಿ 51 ಓವರ್‌ ಬೌಲಿಂಗ್‌ ಮಾಡಿದರೂ ಒಂದೇ ಒಂದು ವಿಕೆಟ್‌ ಕಬಳಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ಭಾರತ: 258/4
ಶ್ರೇಯಸ್ ಅಯ್ಯರ್: 75*
ಶುಭ್‌ಮನ್ ಗಿಲ್‌: 52

ಕೈಲ್ ಜೇಮಿಸನ್: 47/3
(ಮೊದಲ ಟೆಸ್ಟ್‌ನ ಮೊದಲ ದಿನದಾಟ ಮುಕ್ತಾಯದ ವೇಳೆಗೆ)
 

click me!