
ಹೈದರಾಬಾದ್(ಜ.18): ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಕ್ವೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧ ಶುಭಾರಂಭ ಮಾಡಿದೆ. ಶುಬಮನ್ ಗಿಲ್ ಆಕರ್ಷಕ ದ್ವಿಶತಕದ ಮೂಲಕ ಬೃಹತ್ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಆದರೆ ಅಂತಿಮ ಹಂತದಲ್ಲಿ ಮಿಚೆಲ್ ಬ್ರೇಸ್‌ವೆಲ್ ಹೋರಾಟ ಟೀಂ ಇಂಡಿಯಾದಲ್ಲಿ ಆತಂಕ ಸೃಷ್ಟಿಸಿತು. ಆದರೆ ಕೊನೆಯ ಓವರ್‌ನಲ್ಲಿ ಭಾರತ ಗೆಲುವಿನ ದಡ ಸೇರಿತು. ನ್ಯೂಜಿಲೆಂಡ್ 49.2 ಓವರ್‌ಗೆ 337 ರನ್ ಸಿಡಿಸಿ ಆಲೌಟ್ ಆಯಿತು.. ಇದರೊಂದಿಗ ಭಾರತ 12 ರನ್ ಗೆಲುವು ದಾಖಲಿಸಿತು.
ಭಾರತದ ಪರ ಶುಭಮನ್ ಗಿಲ್ ಹೊರತುಪಡಿಸಿದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬರಲಿಲ್ಲ. ಆದರೆ ಗಿಲ್ ಸ್ಫೋಟಕ ಡಬಲ್ ಸೆಂಚುರಿಯಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 349 ರನ್ ಸಿಡಿಸಿತ್ತು. ಈ ಟಾರ್ಗೆಟ್ ಚೇಸಿಂಗ್ ನ್ಯೂಜಿಲೆಂಡ್ ತಂಡಕ್ಕೆ ಸವಾಲಾಗಿತ್ತು. ಆರಂಭದಿಂದಲೇ ಟೀಂ ಇಂಡಿಯಾ ಬಿಗಿಯಾದ ಬೌಲಿಂಗ್ ದಾಳಿ ನಡೆಸಿತು. ಹೀಗಾಗಿ ನ್ಯೂಜಿಲೆಂಡ್ ನಿರೀಕ್ಷಿತ ಆರಂಭವೂ ಪಡೆಯಲಿಲ್ಲ. ಡೆವೋನ್ ಕಾನ್ವೇ 10 ರನ್ ಸಿಡಿಸಿ ಔಟಾದರು. 28 ರನ್‌ಗೆ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು.
ಫಿನ್ ಅಲೆನ್ ಹೋರಾಟದ ಸೂಚನೆ ನೀಡಿದರು. ಹೆನ್ರಿ ನಿಕೋಲಸ್ ಜೊತೆ 1 ಬೌಂಡರಿ ಹಾಗೂ 7 ಬೌಂಡರಿ ಸಿಡಿಸಿದರು. ಆದರೆ ಫಿನ್ ಅಲೆನ್ ಹೋರಾಟ 40 ರನ್‌ಗಳಿಗ ಅಂತ್ಯವಾಯಿತು. ಇತ್ತ ಹೆನ್ರಿ ನಿಕೋಲಸ್ 18 ರನ್ ಸಿಡಿಸಿ ನಿರ್ಗಮಿಸಿದರು. 78 ರನ್‌ಗಳಿಗೆ ನ್ಯೂಜಿಲೆಂಡ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಡರಿಲ್ ಮಿಚೆಲ್ ಕೇವಲ 9 ರನ್ ಸಿಡಿಸಿ ನಿರಾಸೆ ಮೂಡಿಸಿದರು. ನಾಯಕ ಟಾಮ್ ಲಾಥಮ್ ಹೋರಾಟ ನೀಡಿದರು. ಗ್ಲೆನ್ ಫಿಲಿಪ್ಸ್ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಲಾಥಮ್ ಹೋರಾಟ 24 ರನ್‌ಗೆ ಅಂತ್ಯವಾಯಿತು. 131 ರನ್‌ಗೆ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡಿತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮಿಚೆಲ್ ಬ್ರೆಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಆಸರೆಯಾದರು. ಇವರಿಬ್ಬರ ಜೊತೆಯಾಟ ನ್ಯೂಜಿಲೆಂಡ್ ತಂಡದಲ್ಲಿ ಹೊಸ ಉತ್ಸಾಹ ಚಿಗುರಿಸಿತು.
ಬ್ರೇಸ್‌ವೆಲ್ ಹಾಗೂ ಸ್ಯಾಂಟ್ನರ್ ಬ್ಯಾಟಿಂಗ್‌ನಿಂದ ಪಂದ್ಯದ ಗತಿ ಬದಲಾಗತೊಡಗಿತು. ಬ್ರೇಸ್‌ವೆಲ್ ಅಬ್ಬರಕ್ಕೆ ಟೀಂ ಇಂಡಿಯಾ ಲೆಕ್ಕಾಚಾರ ಬದಲಾಗತೊಡಗಿತು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಕಠಿಣ ಸವಾಲು ಎದುರಾಯಿತು. ದಿಟ್ಟ ಹೋರಾಟ ನೀಡಿದ ಬ್ರೇಸ್‌ವಲ್ ಸೆಂಚುರಿ ಸಿಡಿಸಿದರು. ಇತ್ತ ಸ್ಯಾಂಟ್ನರ್ ಕೂಡ ಉತ್ತಮ ಸಾಥ್ ನೀಡಿದರು.
ಸ್ಯಾಂಟ್ನರ್ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿತು. ಆದರೆ ಮೊಹಮ್ಮದ್ ಸಿರಾಜ್ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಸ್ಯಾಂಟ್ನರ್ 57 ರನ್ ಸಿಡಿಸಿ ಔಟಾದರು. ಆದರೆ ಬ್ರೇಸ್‌ವೆಲ್ ಹೋರಾಟ ಮುಂದುವರಿಯಿತು. ನ್ಯೂಜಿಲೆಂಡ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 41 ರನ್ ಅವಶ್ಯಕತೆ ಇತ್ತು. 8 ರನ್ ಸಿಡಿಸಿ ಲ್ಯೂಕಿ ಫರ್ಗ್ಯೂಸನ್ ವಿಕೆಟ್ ಕಳೆದುಕೊಂಡಿತು.
ಅಂತಿಮ 6 ಎಸೆತದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 20 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಬ್ರೇಸ್‌ವೆಲ್ ಸಿಕ್ಸರ್ ಸಿಡಿಸಿದರು. ಮರು ಎಸೆತದ ವೈಡ್ ಆದರೆ 2ನೇ ಎಸೆತದಲ್ಲಿ ಬ್ರೇಸ್‌ವೆಲ್ ಎಲ್‌ಬಿ ಬಲೆಗೆ ಬಿದ್ದರು. ಈ ಮೂಲಕ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 12 ರನ್ ಗೆಲುವು ಕಂಡಿತು.
ಭಾರತ ಇನ್ನಿಂಗ್ಸ್
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾಗೆ ಶುಭಮನ್ ಗಿಲ್ ಹೊರತುಪಡಿಸಿದರ ಇತರರಿಂದ ರನ್ ಹರಿದುಬರಲಿಲ್ಲ. ಶುಭಮನ್ ಗಿಲ್ ಹೋರಾಟಕ್ಕೆ ನ್ಯೂಜಿಲೆಂಡ್ ಬೆಚ್ಚಿ ಬಿದ್ದಿತು. ಹಾಫ್ ಸೆಂಚುರಿ, ಸೆಂಚುರಿ ಬಳಿಕ ಕ್ಷಿಪ್ರ ವೇಗದಲ್ಲಿ ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದರು. ಗಿಲ್ 149 ಎಸೆತದಲ್ಲಿ 208 ರನ್ ಸಿಡಿಸಿದರು. ಈ ಮೂಲಕ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅತೀ ಕಿರಿಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಇಷ್ಟೇ ಅಲ್ಲ ನ್ಯೂಜಿಲೆಂಡ್ ವಿರುದ್ಧ ವೈಯುಕ್ತಿಕ ಗರಿಷ್ಠ ರನ್ ಸಿಡಿಸಿದ ದಾಖಲೆಯನ್ನೂ ಬರೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.