Ind vs Eng 2ನೇ ಟೆಸ್ಟ್‌ನಲ್ಲಿ 2 ಅಪರೂಪದ ದಾಖಲೆ ಅಶ್ವಿನ್‌ ಪಾಲು..!

By Kannadaprabha NewsFirst Published Feb 15, 2021, 9:30 AM IST
Highlights

ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ವೇಳೆ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ ಎರಡು ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ(ಫೆ.15): ಇಂಗ್ಲೆಂಡ್‌ ವಿರುದ್ದ ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಲೋಕಲ್ ಹೀರೋ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ ಜಾದು ಎದುರು ಪ್ರವಾಸಿ ಇಂಗ್ಲೆಂಡ್‌ ತಂಡ ತಬ್ಬಿಬ್ಬಾಗಿ ಹೋಗಿದೆ. ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆಫ್‌ಸ್ಪಿನ್ನರ್ ಅಶ್ವಿನ್‌ ಒಂದು ವಿಶ್ವದಾಖಲೆ ಸಹಿತ ಎರಡು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ಗಳ 200 ವಿಕೆಟ್‌: ಅಶ್ವಿನ್‌ ದಾಖಲೆ!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ ವಿಶ್ವದಾಖಲೆಯನ್ನು ಆರ್‌.ಅಶ್ವಿನ್‌ ಬರೆದಿದ್ದಾರೆ. ಅವರು ಕಬಳಿಸಿರುವ ಒಟ್ಟು 391 ವಿಕೆಟ್‌ಗಳ ಪೈಕಿ 200 ವಿಕೆಟ್‌ಗಳು ಎಡಗೈ ಬ್ಯಾಟ್ಸ್‌ಮನ್‌ಗಳದ್ದಾಗಿದೆ. 

ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್; 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ!

ಇಂಗ್ಲೆಂಡ್‌ ವಿರುದ್ದದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಎಡಗೈ ಬ್ಯಾಟ್ಸ್‌ಮನ್‌ ಸ್ಟುವರ್ಟ್ ಬ್ರಾಡ್ ಬಲಿಪಡೆಯುವುದರೊಂದಿಗೆ 200 ವಿಕೆಟ್‌ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಬೌಲರ್‌ ಎನ್ನುವ ಹಿರಿಮೆಗೆ ಅಶ್ವಿನ್‌ ಪಾತ್ರರಾಗಿದ್ದಾರೆ. ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರನ್‌ 191 ವಿಕೆಟ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, 190 ವಿಕೆಟ್‌ಗಳೊಂದಿಗೆ ಜೇಮ್ಸ್‌ ಆ್ಯಂಡರ್‌ಸನ್‌ 3ನೇ ಸ್ಥಾನದಲ್ಲಿದ್ದಾರೆ.

A five-wicket haul for R Ashwin and England are all out for 134 🏏

How will India fare in the second innings? | https://t.co/DSmqrU68EB pic.twitter.com/yhN0sw1eB1

— ICC (@ICC)

ಭಾರತದಲ್ಲಿ ಅತಿಹೆಚ್ಚು ವಿಕೆಟ್‌: ಅಶ್ವಿನ್‌ ನಂ.2

ಆರ್‌. ಅಶ್ವಿನ್‌ ಭಾರತೀಯ ನೆಲದಲ್ಲಿ ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. 265 ವಿಕೆಟ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಹರ್ಭಜನ್‌ ಸಿಂಗ್‌ರನ್ನು ಅಶ್ವಿನ್‌ ಹಿಂದಿಕ್ಕಿದರು. ಅಶ್ವಿನ್‌, ಭಾರತೀಯ ನೆಲದಲ್ಲಿ 266 ವಿಕೆಟ್‌ ಕಬಳಿಸಿದ್ದಾರೆ. 

ಈ ಪಟ್ಟಿಯಲ್ಲಿ 350 ವಿಕೆಟ್‌ಗಳೊಂದಿಗೆ ಕನ್ನಡಿಗ ಅನಿಲ್‌ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ವಿಕೆಟ್‌ ಪಟ್ಟಿಯಲ್ಲಿ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 434 ವಿಕೆಟ್‌ಗಳೊಂದಿಗೆ ಕಪಿಲ್‌ ದೇವ್‌, 417 ವಿಕೆಟ್‌ಗಳೊಂದಿಗೆ ಹರ್ಭಜನ್‌ ಸಿಂಗ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್‌ 391 ವಿಕೆಟ್‌ಗಳೊಂದಿಗೆ 4ನೇ ಸ್ಥಾನ ಪಡೆದಿದ್ದಾರೆ.
 

click me!