
ಢಾಕ(ಡಿ.07): ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕೈಚೆಲ್ಲಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ 5 ರನ್ ವಿರೋಚಿತ ಸೋಲು ಕಂಡಿದೆ. ಅಂತಿಮ ಹಂತದಲ್ಲಿ 9ನೇ ವಿಕೆಟ್‌ಗೆ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಗಾಯದ ನಡುವೆ ಗೆಲುವಿಗಾಗಿ ಹೋರಾಟ ಮಾಡಿದರು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ಗೆಲುವು ದಕ್ಕಲಿಲ್ಲ. ಗಾಯ ಲೆಕ್ಕಿಸದೇ ಹೋರಾಡಿದ ರೋಹಿತ್ ಶರ್ಮಾಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ರೋಹಿತ್ ಗಾಯ ಉಲ್ಬಣಗೊಂಡಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಕುರಿತು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ರೋಹಿತ್ ಶರ್ಮಾ ಕೈಬೆರಳಿಗೆ ಗಾಯವಾಗಿತ್ತು. ತಕ್ಷಣವೇ ಮೈದಾನದಿಂದ ಹೊರ ನಡೆದ ರೋಹಿತ್ ಶರ್ಮಾಗೆ ನೋವು ಹೆಚ್ಚಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಕೈಬೆರಳಿನ ಸ್ಕಾನಿಂಗ್ ಮಾಡಲು ಆಸ್ಪತ್ರೆ ದಾಖಲಿಸಲಾಗಿತ್ತು. ಇತ್ತ ಟೀಂ ಇಂಡಿಯಾ ಸೋಲಿನ ದವಡೆಗೆ ಸಿಲುಕಿತ್ತು. 9ನೇ ವಿಕೆಟ್‌ಗೆ ಗಾಯವನ್ನು ಲೆಕ್ಕಿಸಿದ ಕಣಕ್ಕಿಳಿದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಗಾಯದ ನಡುವೆ ರೋಹಿತ್ ಹೋರಾಟ, ಬಾಂಗ್ಲಾ ವಿರುದ್ಧ ಮುಗ್ಗರಿಸಿ ಸರಣಿ ಕೈಚೆಲ್ಲಿದ ಭಾರತ!
28 ಎಸೆತದಲ್ಲಿ ಅಜೇಯ 51 ರನ್ ಸಿಡಿಸಿದ ರೋಹಿತ್ ಶರ್ಮಾ ತಂಡದ ಗೆಲುವಿಗಾಗಿ ಅವಿರತ ಶ್ರಮಿಸಿದರು. ಆದರೆ ಗೆಲುವು ಸಿಗಲಿಲ್ಲ. ಇದರ ಪರಿಣಾಮ ಏರಡನೇ ಏಕದಿನ ಪಂದ್ಯದ ಜೊತೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನೂ ಭಾರತ ಕೈಚೆಲ್ಲಿತು. ಗಾಯ ಲೆಕ್ಕಿಸದೆ ಹೋರಾಡಿದ ರೋಹಿತ್ ಶರ್ಮಾಗೆ ನೋವು ಹೆಚ್ಚಾಗಿದೆ. ಗಾಯ ಉಲ್ಬಣಗೊಂಡಿದೆ. ಇದೀಗ ಚಿಕಿತ್ಸೆಗಾಗಿ ರೋಹಿತ್ ಶರ್ಮಾ ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಇತ್ತ 3ನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲ ಇಂಜುರಿಗೆ ತುತ್ತಾಗಿರುವ ದೀಪಕ್ ಚಹಾರ್ ಹಾಗೂ ಕುಲ್ದೀಪ್ ಸೇನ್ ಕೂಡ ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಹೀಗಾಗಿ ಮೂವರು ಆಟಗಾರರು 3ನೇ ಏಕದಿನಕ್ಕೆ ಲಭ್ಯವಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಕೆಬೈರಲು ಮುರಿತಗೊಂಡಿಲ್ಲ. ಗಾಯವಾಗಿದೆ. ಹೀಗಾಗಿ ಕೆಲ ದಿನಗಳ ವಿಶ್ರಾಂತಿಯಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ವತಃ ರೋಹಿತ್ ಶರ್ಮಾ ಹೇಳಿದ್ದಾರೆ. ಕೈಬೆರಳಿನ ಗಾಯಕ್ಕೆ ಸ್ಟಿಚ್ ಹಾಕಲಾಗಿದೆ. ಮೂಳೆ ಮುರಿತಗೊಂಡಿಲ್ಲ. ಹೀಗಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.
ಹೆಬ್ಬೆರಳಿಗೆ ಗಂಭೀರ ಗಾಯವಾದರೂ, ಗೆಲುವಿಗಾಗಿ ಕ್ರೀಸ್‌ಗಿಳಿದ ರೋಹಿತ್ ಶರ್ಮ
ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 271 ರನ್ ಸಿಡಿಸಿತ್ತು. ಮೆಹದಿ ಹಸನ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಹಸನ್ ಶತಕದಿಂದ ಬಾಂಗ್ಲಾದೇಶ ಉತ್ತಮ ಮೊತ್ತ ಪೇರಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಜೊತೆಯಾಟ ನೆರವಾಯಿತು. ಅಂತಿಮ ಹಂತದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ಗೆಲುವಿನ ಅಂಚಿಗೆ ತಲುಪಿತ್ತು. ಆದರೆ ಕೊನೆಯ ಎಸೆತದಲ್ಲಿ 6 ರನ್ ಸಿಡಿಸಲು ಟೀಂ ಇಂಡಿಯಾ ವಿಫಲವಾಯಿತು. ಈ ಮೂಲಕ ಭಾರತ 0-2 ಅಂತರದಿಂದ ಏಕದಿನ ಸರಣಿಯನ್ನು ಕೈಚೆಲ್ಲಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.