ಕುಲ್ದೀಪ್-ಸಿರಾಜ್‌ ಮಾರಕ ದಾಳಿಗೆ ಆತಿಥೇಯರು ತಬ್ಬಿಬ್ಬು, ಫಾಲೋ ಆನ್‌ ಭೀತಿಯಲ್ಲಿ ಬಾಂಗ್ಲಾದೇಶ

By Naveena K VFirst Published Dec 15, 2022, 4:45 PM IST
Highlights

* ಮೊದಲ ಟೆಸ್ಟ್‌ ಪಂದ್ಯದಲ್ಲಿ ಫಾಲೋ ಆನ್‌ ಭೀತಿಯಲ್ಲಿ ಬಾಂಗ್ಲಾದೇಶ
* ಎರಡನೇ ದಿನದಾಟದಂತ್ಯಕ್ಕೆ 8 ವಿಕೆಟ್‌ ಕಳೆದುಕೊಂಡು 133 ಗಳಿಸಿರುವ ಬಾಂಗ್ಲಾದೇಶ
* ಫಾಲೋ ಆನ್‌ನಿಂದ ಪಾರಾಗಬೇಕಿದ್ದರೇ ಬಾಂಗ್ಲಾದೇಶ ಇನ್ನೂ 72 ರನ್ ಗಳಿಸಬೇಕಿದೆ

ಚಿತ್ತಗಾಂಗ್‌(ಡಿ.15): ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್‌ ಬಾರಿಸಿದೆ. ಈ ಮೂಲಕ ಇನ್ನೂ 271 ರನ್‌ಗಳ ಹಿನ್ನೆಡೆಯಲ್ಲಿದೆ. ಬಾಂಗ್ಲಾದೇಶ ತಂಡವು ಫಾಲೋ ಆನ್‌ನಿಂದ ಪಾರಾಗಬೇಕಿದ್ದರೇ 205 ರನ್‌ ಕಲೆಹಾಕಬೇಕಿದೆ.

ಟೀಂ ಇಂಡಿಯಾವನ್ನು 404 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಮೊದಲ ಎಸೆತದಲ್ಲೇ ವೇಗಿ ಮೊಹಮ್ಮದ್ ಸಿರಾಜ್‌ ಆಘಾತ ನೀಡುವಲ್ಲಿ ಯಶಸ್ವಿಯಾದರು. ನಜ್ಮುಲ್ ಹೊಸೈನ್ ಅವರನ್ನು ಸಿರಾಜ್ ಪೆವಿಲಿಯನ್ನಿಗಟ್ಟಿದರೆ, ಯಾಸಿರ್ ಅಲಿಯನ್ನು ಕ್ಲೀನ್ ಬೌಲ್ಡ್‌ ಮಾಡುವ ಮೂಲಕ ಉಮೇಶ್ ಯಾದವ್‌ ಆತಿಥೇಯರಿಗೆ ಮತ್ತೊಂದು ಶಾಕ್ ನೀಡಿದರು. ಇನ್ನು ಲಿಟನ್ ದಾಸ್ 24 ರನ್‌ ಬಾರಿಸಿ ಸಿರಾಜ್‌ಗೆ ಎರಡನೇ ಬಲಿಯಾದರು. ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಮತ್ತೋರ್ವ ಆರಂಭಿಕ ಬ್ಯಾಟರ್ ಝಾಕಿರ್ ಹಸನ್ 20 ರನ್ ಬಾರಿಸಿ ಸಿರಾಜ್‌ಗೆ ಮೂರನೇ ಬಲಿಯಾದರು.  ಬಾಂಗ್ಲಾದೇಶ ತಂಡವು 56 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

Six wickets for India in the last session of Day 2 👏 | | 📝 https://t.co/ym1utFHW3S pic.twitter.com/PbfDrOo94G

— ICC (@ICC)

ಕುಲ್ದೀಪ್ ಯಾದವ್ ಜಾದೂ: ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ ಕೂಡಾ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಆಕರ್ಷಕ 40 ರನ್ ಬಾರಿಸಿ ಮಿಂಚಿದ್ದ ಕುಲ್ದೀಪ್ ಯಾದವ್, ಬೌಲಿಂಗ್‌ನಲ್ಲಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು. ಮುಷ್ಫಿಕುರ್ ರಹೀಂ(28), ಶಕೀಬ್ ಅಲ್ ಹಸನ್(3), ನೂರುಲ್ ಹಸನ್(16) ಹಾಗೂ ತೈಜುಲ್ ಇಸ್ಲಾಂ ಅವರನ್ನು ಬಲಿ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಸದ್ಯ ಬಾಂಗ್ಲಾದೇಶ ತಂಡವು ತಂಡವು 8 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದ್ದು, ಮೆಹದಿ ಹಸನ್ 16 ಹಾಗೂ ಎಬೊದತ್ ಹೊಸೈನ್ 13 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Ind vs Ban ರವಿಚಂದ್ರನ್‌ ಅಶ್ವಿನ್ ಅರ್ಧಶತಕದ ವೈಭವ, 404 ರನ್‌ ಗಳಿಸಿದ ಟೀಂ ಇಂಡಿಯಾ..!

ಇದಕ್ಕೂ ಮೊದಲು  6 ವಿಕೆಟ್ ಕಳೆದುಕೊಂಡು 278 ರನ್‌ ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತು. ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡು ಕೊಂಚ ಆತಂಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ 8ನೇ ವಿಕೆಟ್‌ಗೆ ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಆಸರೆಯಾದರು. 8ನೇ ವಿಕೆಟ್‌ಗೆ ಈ ಜೋಡಿ 200 ಎಸೆತಗಳನ್ನು ಎದುರಿಸಿ 87 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್‌ 113 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್‌ ಬಾರಿಸಿ ಮೆಹದಿ ಹಸನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಕುಲ್ದೀಪ್ ಯಾದವ್ 114 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 40 ರನ್‌ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್‌ ಒಪ್ಪಿಸಿದರು. 

ಅಶ್ವಿನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಟೀಂ ಇಂಡಿಯಾ ಕೇವಲ 19 ರನ್‌ಗಳ ಅಂತರದಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಉಮೇಶ್ ಯಾದವ್ 2 ಸಿಕ್ಸರ್ ಸಹಿತ ಅಜೇಯ 15 ರನ್ ಬಾರಿಸಿದರೆ, ಮೊಹಮ್ಮದ್ ಸಿರಾಜ್ 4 ರನ್‌ ಗಳಿಸಿ ಮೆಹದಿ ಹಸನ್‌ಗೆ ವಿಕೆಟ್ ಒಪ್ಪಿಸಿದರು. 

click me!