ನ್ಯೂಜಿಲೆಂಡ್ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್‌..! ವೇಗಿ ಟಿಮ್ ಸೌಥಿ ನೂತನ ನಾಯಕ..!

By Naveena K VFirst Published Dec 15, 2022, 1:57 PM IST
Highlights

ನ್ಯೂಜಿಲೆಂಡ್ ಟೆಸ್ಟ್‌ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಕೇನ್ ವಿಲಿಯಮ್ಸನ್
2016ರಲ್ಲಿ ನ್ಯೂಜಿಲೆಂಡ್ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದ ಕೇನ್ ವಿಲಿಯಮ್ಸನ್‌
ನ್ಯೂಜಿಲೆಂಡ್ ನೂತನ ಟೆಸ್ಟ್ ನಾಯಕನಾಗಿ ಟಿಮ್ ಸೌಥಿ ನೇಮಕ

ವೆಲ್ಲಿಂಗ್ಟನ್‌(ಡಿ.15): ಕ್ಯಾಪ್ಟನ್ ಕೂಲ್ ಖ್ಯಾತಿಯ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌, ಕಿವೀಸ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇನ್ನು ಇದೇ ವೇಳೆ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಅನುಭವಿ ವೇಗಿ ಟಿಮ್ ಸೌಥಿ ನೇಮಕವಾಗಿದ್ದಾರೆ. ಕೇನ್ ವಿಲಿಯಮ್ಸನ್ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದು, ನ್ಯೂಜಿಲೆಂಡ್ ಟಿ20 ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 346 ಬಲಿ ಪಡೆದಿರುವ ಅನುಭವಿ ವೇಗಿ ಟಿಮ್ ಸೌಥಿ, ಈಗಾಗಲೇ 22 ಬಾರಿ ನ್ಯೂಜಿಲೆಂಡ್‌ ಟಿ20 ತಂಡವನ್ನು ಮುನ್ನಡೆಸಿದ ಅನುಭವವಿದ್ದು, ಇದೀಗ ನ್ಯೂಜಿಲೆಂಡ್ ಟೆಸ್ಟ್‌ ತಂಡದ 31ನೇ ನಾಯಕರಾಗಿ ನೇಮಕವಾಗಿದ್ದಾರೆ. ಈ ತಿಂಗಳಾಂತ್ಯದಲ್ಲಿ ಪಾಕ್‌ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ತಂಡವನ್ನು ಟಿಮ್‌ ಸೌಥಿ ಮುನ್ನಡೆಸಲಿದ್ದಾರೆ. ಇನ್ನು ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ಟೆಸ್ಟ್‌ ತಂಡವನ್ನು ಮುನ್ನಡೆಸುತ್ತಿದ್ದ ಟಾಮ್ ಲೇಥಮ್‌, ಕಿವೀಸ್‌ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ.

Just in: A new man at the helm for New Zealand 👊

More as Kane Williamson steps down from the Test captaincy 👇https://t.co/vi7f4Y4PmN

— ICC (@ICC)

Latest Videos

ಕೇನ್ ವಿಲಿಯಮ್ಸನ್‌, ಒಟ್ಟು 38 ಬಾರಿ ನ್ಯೂಜಿಲೆಂಡ್ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ನ್ಯೂಜಿಲೆಂಡ್ ತಂಡವು 22 ಗೆಲುವು, 8 ಡ್ರಾ ಹಾಗೂ 10 ಪಂದ್ಯಗಳಲ್ಲಿ ಸೋಲು ಕಂಡಿದೆ.  2016ರಲ್ಲಿ ಬ್ರೆಂಡನ್‌ ಮೆಕ್ಕಲಂ, ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೆಸ್ಟ್‌ ನಾಯಕತ್ವವನ್ನು ವಹಿಸಿಕೊಂಡಿದ್ದ ಕೇನ್ ವಿಲಿಯಮ್ಸನ್‌, ಕಿವೀಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾವನ್ನು ಮಣಿಸಿ ನ್ಯೂಜಿಲೆಂಡ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

BREAKING: Kane Williamson is stepping down as New Zealand Test captain, but will continue to lead the team in white-ball cricket 🏏 pic.twitter.com/wx8c3WhawV

— Sky Sports News (@SkySportsNews)

ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದು, ನನ್ನ ಪಾಲಿನ ವಿಶೇಷ ಗೌರವ ಎಂದು ಭಾವಿಸುತ್ತೇನೆ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್ ಎನ್ನುವುದು ಈ ಆಟದ ಶಿಖರವೆಂದು ಭಾವಿಸುತ್ತೇನೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಎದುರಾದ ಸವಾಲುಗಳನ್ನು ಎಂಜಾಯ್ ಮಾಡುತ್ತಲೇ ಸ್ವೀಕರಿಸಿದ್ದೇನೆ. ನಾಯಕತ್ವವು ನಮ್ಮ ವರ್ಕ್‌ಲೋಡ್ ಹೆಚ್ಚಿಸುತ್ತದೆ. ನನ್ನ ವೃತ್ತಿಜೀವನದಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಹಾಗೂ ನಿರ್ಧಾರವೆಂದು ಭಾವಿಸುತ್ತೇನೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

Ind vs Ban ರವಿಚಂದ್ರನ್‌ ಅಶ್ವಿನ್ ಅರ್ಧಶತಕದ ವೈಭವ, 404 ರನ್‌ ಗಳಿಸಿದ ಟೀಂ ಇಂಡಿಯಾ..!

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಜತೆ ಚರ್ಚಿಸಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ಸೀಮಿತ ಓವರ್‌ಗಳ ವಿಶ್ವಕಪ್ ಇರುವುದರಿಂದ ನಾನು ಟಿ20 ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದೇನೆ ಎಂದು ಇದೇ ವೇಳೆ ಕೇನ್ ವಿಲಿಯಮ್ಸನ್‌ ಸ್ಪಷ್ಟಪಡಿಸಿದ್ದಾರೆ.

ನಾನು ಟಿಮ್ ಸೌಥಿ ಅವರ ನಾಯಕತ್ವ ಹಾಗೂ ಟಾಮ್ ಲೇಥಮ್ ಉಪನಾಯಕತ್ವದಡಿ ಆಡಲು ಹಾಗೂ ಬೆಂಬಲಿಸಲು ಉತ್ಸುಕನಾಗಿದ್ದೇನೆ. ನನ್ನ ವೃತ್ತಿಜೀವನದ ಬಹುಪಾಲು ಆಟವನ್ನು ಈ ಇಬ್ಬರ ಜತೆಗೆ ಆಡಿದ್ದೇನೆ. ಅವರು ತಂಡವನ್ನು ಇನ್ನು ಚೆನ್ನಾಗಿ ಮುನ್ನಡೆಸಲಿದ್ದಾರೆ ಎನ್ನುವ ಆತ್ಮವಿಶ್ವಾಸ ನನ್ನಲಿದೆ ಎಂದು ಕೇನ್ ವಿಲಿಯಮ್ಸನ್‌ ಹೇಳಿದ್ದಾರೆ. 

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಂದು ಕರಾಚಿಯಲ್ಲಿ ಆರಂಭವಾಗಲಿದೆ. ಇನ್ನು ಜನವರಿ 03ರಿಂದ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.

click me!