
"
ನಾಗ್ಪುರ[ನ.10]: ಭಾರತ-ಬಾಂಗ್ಲಾದೇಶ ನಡುವಿನ ಅಂತಿಮ ಹಾಗೂ ನಿರ್ಣಾಯಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಟಿ20 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಾಂಗ್ಲಾದೇಶಕ್ಕೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವಲ್ಲಿ ರೋಹಿತ್ ಪಡೆ ಯಶಸ್ವಿಯಾಗಿತ್ತು. ಈ ಸೋಲಿನ ಆಘಾತದಿಂದ ಹೊರಬರುವ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಾಂಗ್ಲಾ ಪಾಳಯದಿಂದ ಹೊರಬಿದ್ದಿದೆ.
ಇಂಡೋ-ಬಾಂಗ್ಲಾ ಅಂತಿಮ ಟಿ20ಗೆ ಕ್ಷಣಗಣನೆ ಆರಂಭ
ಭಾರತ ವಿರುದ್ಧ ಚೊಚ್ಚಲ ಟಿ20 ಗೆದ್ದು ಸಂಭ್ರಮಿಸಿದ್ದ ಬಾಂಗ್ಲಾ ಪಡೆ, ಆತಿಥೇಯರ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗಲೇ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಮೊಸದ್ದೇಕ್ ಹುಸೈನ್ ಹಾಗೂ ವೇಗಿ ಮುಸ್ತಾಫಿಜುರ್ ರೆಹಮಾನ್ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದು, ನಿರ್ಣಾಯಕ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಮೊಸದ್ದೇಕ್ ಹುಸೈನ್ ಹಾಗೂ ಮುಸ್ತಾಫಿಜುರ್ ರೆಹಮಾನ್ ಶನಿವಾರ ಅಭ್ಯಾಸವೂ ಮಾಡದೇ ವಿಶ್ರಾಂತಿಗೆ ಜಾರಿದ್ದಾರೆ.
INDvBAN 3ನೇ ಟಿ20: ಇದೊಂದು ಬದಲಾವಣೆಯಾದರೆ ಭಾರತಕ್ಕೆ ಗೆಲುವು ಪಕ್ಕಾ!
ಮೊಸದ್ದೇಕ್ ಹುಸೈನ್ ತೊಡೆ ಸಂದುವಿನ ನೋವಿಗೆ ತುತ್ತಾಗಿದ್ದು, ಬಹುತೇಕ ಅಂತಿಮ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಇನ್ನು ಎಡಗೈ ಮಾರಕ ವೇಗಿ ಮುಸ್ತಾಫಿಜುರ್ ರೆಹಮಾನ್ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಾಗ್ಪುರ ಪಿಚ್ ಸ್ಪಿನ್ನರ್’ಗಳಿಗೆ ನೆರವು ನೀಡುವುದರಿಂದ ಬಾಂಗ್ಲಾ ಕೂಡಾ ಸ್ಪಿನ್ನರ್’ಗೆ ಅವಕಾಶ ನೀಡುವ ಸಾಧ್ಯತೆಯಿದೆ.
ತೈಜುಲ್ ಇಸ್ಲಾಂಗೆ ಸ್ಥಾನ..?
ಬಾಂಗ್ಲಾದೇಶ ಇಂದಿನ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂಗೆ ಅವಕಾಶ ನೀಡುವ ಸಾಧ್ಯತೆಯಿದೆ. 27 ವರ್ಷದ ತೈಜುಲ್ ಇದುವರೆಗೂ ಬಾಂಗ್ಲಾ ಪರ ಏಕೈಕ ಟಿ20 ಪಂದ್ಯವನ್ನಾಡಿದ್ದು, ಭಾರತ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಭಾರತ-ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ 7 ವಿಕೆಟ್’ಗಳಿಂದ ಜಯಿಸಿತ್ತು. ಇದರೊಂದಿಗೆ ಅರುಣ್ ಜೇಟ್ಲಿ ಮೈದಾನದಲ್ಲಿ ಶುಭಾರಂಭ ಮಾಡಿತ್ತು. ಇನ್ನು ರಾಜ್’ಕೋಟ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಜಯಿಸಿತ್ತು. ಇದೀಗ ಮೂರನೇ ಟಿ20 ಪಂದ್ಯಕ್ಕೆ ನಾಗ್ಪುರ ಆತಿಥ್ಯ ವಹಿಸಿದ್ದು, ಜಿದ್ದಾಜಿದ್ದಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.