Ind vs Ban: 231 ರನ್‌ಗಳಿಗೆ ಬಾಂಗ್ಲಾ ಆಲೌಟ್, ಎರಡನೇ ಟೆಸ್ಟ್ ಗೆಲ್ಲಲು ಟೀಂ ಇಂಡಿಯಾಗೆ ಸಾಧಾರಣ ಗುರಿ

By Naveen Kodase  |  First Published Dec 24, 2022, 3:19 PM IST

ಎರಡನೇ ಇನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಸರ್ವಪತನ ಕಂಡ ಬಾಂಗ್ಲಾದೇಶ
ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಭಾರತಕ್ಕೆ 145 ರನ್‌ಗಳ ಗುರಿ
ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಆಘಾತ, 2 ರನ್‌ಗಳಿಸಿ ರಾಹುಲ್ ಔಟ್


ಮೀರ್‌ಪುರ(ಡಿ.24): ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ತಂಡವು 231 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು 145 ರನ್‌ಗಳ ಸಾಧಾರಣ ಗುರಿ ಸಿಕ್ಕಿದೆ. ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ 3 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ  ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 7 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಆರಂಭದಲ್ಲೇ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶಾಕ್ ನೀಡಿದರು. ಬಾಂಗ್ಲಾದೇಶ ತಂಡವು ತನ್ನ ಖಾತೆಗೆ 6 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೋ ವಿಕೆಟ್ ಕಳೆದುಕೊಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಮೊಮಿನುಲ್ ಹಕ್‌ ಅವರನ್ನು ಬಲಿ ಪಡೆಯುವಲ್ಲಿ ವೇಗಿ ಸಿರಾಜ್ ಯಶಸ್ವಿಯಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶಕೀಬ್ ಅಲ್ ಹಸನ್(13) ಹಾಗೂ ಮುಷ್ಫಿಕುರ್ ರಹೀಂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಲು ವಿಫಲವಾದರು.

Tap to resize

Latest Videos

Ind vs Ban: ಕುಸಿದ ಟೀಂ ಇಂಡಿಯಾಗೆ ಪಂತ್, ಶ್ರೇಯಸ್ ಅಯ್ಯರ್‌, ಬಾಂಗ್ಲಾ ಎದುರು ಭಾರತ ಮೇಲುಗೈ

ಆಸರೆಯಾದ ಝಾಕಿರ್ ಹಸನ್, ಲಿಟನ್ ದಾಸ್: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಆರಂಭಿಕ ಬ್ಯಾಟರ್ ಝಾಕಿರ್ ಹಸನ್‌ 135 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 51 ರನ್ ಬಾರಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಲಿಟನ್ ದಾಸ್ ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಲಿಟನ್ ದಾಸ್ 98 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 73 ರನ್ ಬಾರಿಸಿ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

India need 145 runs to win the series 2-0. | | https://t.co/ZTCALEDTqb pic.twitter.com/zeCTsASppZ

— ICC (@ICC)

ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ನುರುಲ್ ಹಸನ್‌ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವೇಗಿ ಟಸ್ಕಿನ್ ಅಹಮದ್ ಅಜೇಯ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 230ರ ಗಡಿದಾಟುವಂತೆ ಮಾಡಿದರು.

ಮತ್ತೆ ರಾಹುಲ್ ಫೇಲ್‌: ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಮುಂದುವರೆದಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಕೆ ಎಲ್ ರಾಹುಲ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಎರಡು ರನ್ ಬಾರಿಸಿ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ನುರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. 145 ರನ್‌ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಇದೀಗ 3 ರನ್ ಗಳಿಸುವಷ್ಟರಲ್ಲೇ ನಾಯಕ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿದೆ. ರಾಹುಲ್ 7 ಎಸೆತಗಳನ್ನು ಎದುರಿಸಿ 2 ರನ್ ಬಾರಿಸಿ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದಾರೆ.

click me!