ಸೂರ್ಯನನ್ನು ಬದಿಗಿಟ್ಟು ಸಂಜುಗೆ ಅವಕಾಶ ನೀಡಿ: ವಾಸೀಂ ಜಾಫರ್ ಆಗ್ರಹ

By Naveen KodaseFirst Published Mar 20, 2023, 2:21 PM IST
Highlights

ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು
ಸತತ ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದ ಸೂರ್ಯಕುಮಾರ್ ಯಾದವ್
ಸೂರ್ಯ ಬದಲು ಸಂಜು ಸ್ಯಾಮ್ಸನ್‌ಗೆ ಸ್ಥಾನ ನೀಡಲು ವಾಸೀಂ ಜಾಫರ್ ಆಗ್ರಹ

ನವದೆಹಲಿ(ಮಾ.20): ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಸೂರ್ಯ, ಇದೀಗ ಎರಡನೇ ಪಂದ್ಯದಲ್ಲೂ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಮೊದಲ ಪಂದ್ಯದಂತೆ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಮೊದಲ ಏಕದಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು, ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 117 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 

ಇನ್ನು ಭಾರತ ಕ್ರಿಕೆಟ್‌ ತಂಡದ ಕಾಂಬಿನೇಷನ್ ಕುರಿತಂತೆ ESPNcricinfo ವೆಬ್‌ಸೈಟ್‌ನ ಜತೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ಆಸ್ಟ್ರೇಲಿಯಾ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಟೀಂ ಮ್ಯಾನೇಜ್‌ಮೆಂಟ್‌ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವುದು ಒಳ್ಳೆಯದು ಎನ್ನುವ ಸಲಹೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್‌, ತಮಗೆ ಸಿಕ್ಕ ನಿಯಮಿತ ಅವಕಾಶದಲ್ಲಿಯೇ ತಂಡದ ಪರವಾಗಿ ಸ್ಥಿರ ಪ್ರದರ್ಶನ ತೋರುವ ಮೂಲಕ ನ್ಯಾಯ ಒದಗಿಸಿದ್ದಾರೆ. ಭಾರತ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದಕ್ಕೆ ಅರ್ಹ ವ್ಯಕ್ತಿಯಾಗಿದ್ದಾರೆ. ಸಂಜು ಸ್ಯಾಮ್ಸನ್‌ ಕಳೆದ 11 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 66ರ ಬ್ಯಾಟಿಂಗ್ ಸರಾಸರಿಯಲ್ಲಿ 330 ರನ್ ಬಾರಿಸಿದ್ದಾರೆ

ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಥಾನ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೇ ಸಂಜು ಸ್ಯಾಮ್ಸನ್‌ಗೆ ತಂಡದೊಳಗೆ ಸ್ಥಾನ ನೀಡುವುದು ಒಳ್ಳೆಯ ಆಯ್ಕೆಯಾಗಲಿದೆ. ಯಾಕೆಂದರೆ ಸಂಜು ಸ್ಯಾಮ್ಸನ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ. ಸಂಜು ಸ್ಯಾಮ್ಸನ್ ಅವರೊಬ್ಬ ಒಳ್ಳೆಯ ಆಟಗಾರ ಎಂದು ವಾಸೀಂ ಜಾಫರ್ ಹೇಳಿದ್ದಾರೆ.

IPL ಹಣದಿಂದ ಯಾವ ಕಾರು ಖರೀದಿಸಬೇಕೆಂದು ಯೋಚಿಸುತ್ತಿದ್ದೆ: ರೋಹಿತ್‌ ಶರ್ಮಾ!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಮಾರ್ಚ್ 22ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ತವರಿನಲ್ಲಿ ಸತತ ಏಳು ಏಕದಿನ ಸರಣಿ ಗೆದ್ದು ಬೀಗಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ 8ನೇ ಏಕದಿನ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್‌ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

click me!